ಮೇಘಾಲಯ: ಮೇಘಾಲಯ ರಾಜ್ಯದ ಪೂರ್ವ ಜೈನ್ತಿಯಾ ಬೆಟ್ಟಗಳ ನಡುವೆ ಇರುವ ಅನದಿಕೃತ ಕಲ್ಲಿದ್ದಲು ಗಣಿಯಲ್ಲಿ ಐವರು ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಗಣಿಯಲ್ಲಿ ಡೈನಾಮೇಟ್ ಸ್ಫೋಟವಾಗಿ ಗಣಿಯ ಗೋಡೆಯಲ್ಲಿ ಬಿರುಕು ಬಿದ್ದು, ನೀರು ಒಳ ನುಗ್ಗಿದ ಪರಿಣಾಮ ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಒಳಗೆ ಸಿಲುಕಿರುವ ಕಾರ್ಮಿಕರಲ್ಲಿ ನಾಲ್ವರು ಅಸ್ಸಾಂ ಮೂಲದವರು ಮತ್ತು ಓರ್ವ ಕಾರ್ಮಿಕ ತ್ರಿಪುರ ಮೂಲದವರು ಎನ್ನಲಾಗಿದೆ. ಸ್ಥಳಕ್ಕೆ ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಪೊಲೀಸರು ಧಾವಿಸಿದ್ದು, ರಕ್ಷಣಾ ಕಾರ್ಯ ಆರಂಭವಾಗಿದೆ.
ಮೇ.30ರಂದು ಈ ಘಟನೆ ನಡೆದಿದೆ. ಅಚಾನಕ್ ಆಗಿ ನಡೆದ ಸ್ಫೋಟದಿಂದಾಗಿ ಪ್ರವಾಹೋಪಾದಿಯಲ್ಲಿ ನೀರು ಒಳ ನುಗ್ಗಿತು. ಇದರಿಂದಾಗಿ ಕಾರ್ಮಿಕರು ಸಿಲುಕಿ ಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಾರ್ಮಿಕರ ಮುಖ್ಯಸ್ಥನಾಗಿದ್ದ ನಿಜಾಮ್ ಅಲಿ ಎಂಬಾತ ಸಿಲುಕಿಕೊಂಡ ಕಾರ್ಮಿಕರ ರಕ್ಷಣೆಗೆ ಮುಂದಾಗಲಿಲ್ಲ, ಅಲ್ಲಿದ್ದ ಬೇರೆ ಕಾರ್ಮಿಕರನ್ನು ಅಲ್ಲಿಂದ ಓಡಿಸಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಕುರಿತಂತೆ ಓರ್ವನನ್ನು ಬಂಧಿಸಲಾಗಿದೆ. ಆದರೆ ಆತನಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ಆತನನ್ನು ಐಸೋಲೇಶನ್ ಸೆಂಟರ್ ಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.