ಹೊಳೆನರಸೀಪುರ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಯಲ್ಲಿ ಮುಳುಗಿದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ಐವರು ಜಲ ಸಮಾಧಿಯಾದ ಘಟನೆ ವರದಿಯಾಗಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹನುಮನಹಳ್ಳಿ ಕೆರೆಯಲ್ಲಿ ದುರ್ಘಟನೆ ನಡೆದಿದ್ದು, ಮೃತರನ್ನು ರೈಲಿನಲ್ಲಿ ಚುರುಮುರಿ ವ್ಯಾಪಾರಿಗಳಾಗಿದ್ದ ಅರಸೀಕೆರೆಯ ಅಜಯ್ ಮತ್ತು ಶಿವಮೊಗ್ಗದ ವಿಜಯ್ ಎನ್ನಲಾಗಿದೆ. ಇನ್ನು ಚಾಲಕ ಅನಿಲ್ ಹೊಳೆನರಸೀಪುರ ಪಟ್ಟಣದ ಸಮೀಪದ ತಟ್ಟೇಕರೆ ಗ್ರಾಮದವನೆಂದು ಗುರುತಿಸಲಾಗಿದೆ. ಆದರೆ, ಮೃತಪಟ್ಟ ಮಹಿಳೆಯರ ಬಗ್ಗೆ ಈ ವರೆಗೂ ಸುಳಿವು ಸಿಕ್ಕಿಲ್ಲ.
ಭಾನುವಾರ ರಾತ್ರಿ ಹಾಸನದಿಂದ ಸಿಲ್ವರ್ ಬಣ್ಣದ ಮಾರುತಿ ಸ್ವಿಪ್ಟ್ ಕಾರಿನಲ್ಲಿ ಅಜಯ್, ವಿಜಯ್, ಇಬ್ಬರು ಮಹಿಳೆಯರು ಮತ್ತು ಕಾರಿನ ಚಾಲಕ ಅನಿಲ್ ಹಂಗರಹಳ್ಳಿ ಮಾರ್ಗವಾಗಿ ಗೊರೂರಿಗೆ ಹೊರಟಿದ್ದಾರೆ. ಹಂಗರಹಳ್ಳಿಯಿಂದ ಹನುಮನಹಳ್ಳಿಗೆ ತೆರಳುವ ಮಾರ್ಗ ಮಧ್ಯೆ ಕೆರೆ ಸಮೀಪ ಕಾರು ಚಾಲಕನ ಹಿಡಿತ ತಪ್ಪಿ ಕೆರೆಗೆ ನುಗ್ಗಿದೆ. ಕಾರಿನ ಬಾಗಿಲು ಲಾಕ್ ಆದ ಪರಿಣಾಮ ಹೊರಬರಲಾಗದೆ ಎಲ್ಲರೂ ಕಾರಿನಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಮೂರು ದಿನಗಳ ನಂತರ ಬುಧವಾರ ಬೆಳಗ್ಗೆ ಮುಳುಗಿದ್ದ ಕಾರು ಕೆರೆಯಲ್ಲಿ ಕಾಣಿಸಿದೆ. ಅಲ್ಲದೆ ಕಾರಿನಲ್ಲಿದ್ದ ಒಬ್ಬರ ಶವ ಕೂಡ ಕಾಣಿಸಿದ್ದು ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ನಗರಠಾಣೆ ಪೋಲಿಸರು ಅಗ್ನಿ ಶಾಮಕ ಸಿಬ್ಬಂದಿ ಜೊತೆ ಸೇರಿ ಕಾರನ್ನು ಕ್ರೇನ್ ಮೂಲಕ ಮೇಲೆತ್ತಿದ್ದಾರೆ. ಕಾರಿನ ಚಾಲಕ ಅನಿಲ್ ತನ್ನ ಕಾರನ್ನು ಹಾಸನದ ರೇಷ್ಮೆ ಇಲಾಖೆಯಲ್ಲಿ ಟೆಂಡರ್ ಮೂಲಕ ಓಡಿಸುತ್ತಿದ್ದ ಎನ್ನಲಾಗಿದ್ದು, ಮೃತ ಅಜಯ್ , ವಿಜಯ್ ಮತ್ತು ಚಾಲಕ ಅನಿಲ್ ಶವಗಳನ್ನು ಪಟ್ಟಣದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮಹಿಳೆಯರಿಬ್ಬರು ಗುರುತು ಸಿಗದ ಕಾರಣ, ಹಾಸನದ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಇವರು ಬೆಂಗಳೂರಿನವರು ಇರಬೇಕು ಎಂದು ಶಂಕಿಸಲಾಗಿದೆ.