Advertisement

ವಿಷಯುಕ್ತ ಕೇಕ್‌ ಸೇವನೆಯಿಂದ 27 ಮಂದಿ ಆಸ್ಪತ್ರೆಗೆ ದಾಖಲು

09:48 AM Dec 14, 2019 | Team Udayavani |

ಮುಂಬಯಿ: ಸ್ಥಳೀಯ ಅಂಗಡಿಯೊಂದರಿಂದ ಖರೀದಿಸಿದ ವಿಷಯುಕ್ತ ಕೇಕ್‌ ತಿಂದು ನಾಲ್ವರು ಮಕ್ಕಳು ಸೇರಿದಂತೆ 27 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಭಾಯಂದರ್‌ನಲ್ಲಿ ನಡೆದಿದೆ.

Advertisement

ದಹಿಸರ್‌ ಪಶ್ಚಿಮದ ಕಂದಾರ್‌ಪಾಡಾದ ಕುಟುಂಬವೊಂದು ಡಿ. 10 ರಂದು ಮಗುವಿನ ಮೊದಲ ಹುಟ್ಟುಹಬ್ಬದ ಸಂತೋಷ ಕೂಟಕ್ಕಾಗಿ ತಮ್ಮ ಸಂಬಂಧಿಕರು ಮತ್ತು ನೆರೆಹೊರೆಯವರನ್ನು ಆಹ್ವಾನಿಸಿದ್ದು, ಅವರು ಸ್ಥಳೀಯ ಅಂಗಡಿಯಿಂದ ಖರೀದಿಸಿದ ಮನೆಯಲ್ಲಿ ತಯಾರಿಸಿದ ಬಿರಿಯಾನಿ ಮತ್ತು ಕೇಕ್‌ಗಳನ್ನು ಉಣ ಬಡಿಸಿದ್ದರು. ಆದರೆ ಮರುದಿನ ಪಾರ್ಟಿಯಲ್ಲಿ ಭಾಗವಹಿಸಿದ ಜನರ ಆರೋಗ್ಯ ಸ್ಥಿತಿ ಹದಗೆಡಲು ಪ್ರಾರಂಭಿಸಿದ್ದು,ಇಪ್ಪತ್ತೇಳು ಮಂದಿಯನ್ನು ಬೊರಿವಲಿಯ ಭಗವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನನ್ನ ಮಗ ಬುಧವಾರ ಮಧ್ಯಾಹ್ನದಿಂದ ಇದ್ದಕ್ಕಿದ್ದಂತೆ ವಾಂತಿ ಮಾಡಲು ಪ್ರಾರಂಭಿಸಿದ್ದು, ತೀವ್ರ ಜ್ವರ ಮತ್ತು ಹೊಟ್ಟೆನೋವಿನಿಂದಾಗಿ ಸರಿಯಾಗಿ ನಡೆಯಲು ಸಹ ಸಾಧ್ಯವಾಗಲಿಲ್ಲ, ಆದ್ದರಿಂದ ನಾವು ಅವರನ್ನು ಆಸ್ಪತ್ರೆಗೆ ಕರೆದೊಯ್ಯಿದ್ದೇವೆ ಎಂದು ಪಾರ್ಟಿಯಲ್ಲಿ ಪಾಲ್ಗೊಂಡ ಸುನಿಲ್‌ ಸಿಂಗ್‌ ಹೇಳಿದ್ದಾರೆ. ಅವರ ಎರಡು ವರ್ಷದ ಮಗುವನ್ನು ಆಸ್ಪತ್ರೆಯ ಮಕ್ಕಳ ವಾರ್ಡ್‌ಗೆ ದಾಖಲಿಸಲಾಗಿದೆ. ಆಚರಣೆಗೆ ಕರೆಸಿಕೊಂಡ ಕುಟುಂಬ ಸದಸ್ಯರಲ್ಲಿ ಅವರು ಒಬ್ಬರಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾದ ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಎಲ್ಲಾ ರೋಗಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.

ಶಿವಸೇನೆ ಕಾರ್ಪೋರೇಟರ್‌ ಶೀತಲ್‌ ಮಾತ್ರೆ ಅವರು, ಗುರುವಾರ ಬಿಎಂಸಿಯ ಸಾಮಾನ್ಯ ಸಭೆಯಲ್ಲಿ ಕೇಕ್‌ ಅಂಗಡಿಯಲ್ಲಿ ಆರೋಗ್ಯ ಪರವಾನಗಿ ಮತ್ತು ಅಗ್ನಿಶಾಮಕ ಪರವಾನಗಿ ಇಲ್ಲ ಎಂದು ಆಪಾದಿಸಿದ್ದಾರೆ. ಆರೋಗ್ಯ ಇಲಾಖೆಯು ಒಂದು ತಿಂಗಳ ಹಿಂದೆಯೇ ಅಂಗಡಿಗೆ ಆರೋಗ್ಯ ಪರವಾನಗಿ ನೋಟಿಸ್‌ ಕಳುಹಿಸಿದೆ ಎಂದು ತಿಳಿಸಿದೆ.

ಕಡ್ಡಾಯ ಪರವಾನಗಿ ಇಲ್ಲದೆ ಅಂಗಡಿಯೊಂದು ಕಾರ್ಯನಿರ್ವಹಿಸುತ್ತಿರುವುದರಿಂದ ಇಂದು ಸಾಮಾನ್ಯ ಜನತೆ ಆಸ್ಪತ್ರೆಗೆ ದಾಖಲಾಗುವಂತಾಗಿದೆ ಎಂದು ಅವರು ಹೇಳಿದರು. ಎಂಎಚ್‌ಬಿ ಕಾಲೋನಿಯ ಪೊಲೀಸರು ತಮ್ಮ ವಿಶ್ಲೇಷಣೆಗಾಗಿ ಫುಡ್‌ ಆ್ಯಂಡ್‌ ಡ್ರಗ್‌ ಅಥಾರಿಟಿ ಕೇಂದ್ರ ಕಳುಹಿಸಿಕೊಟ್ಟಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next