ಮೈಸೂರು: ಮೈಸೂರಿನಲ್ಲಿ ಹಾಡು ಹಗಲೇ ಸರಗಳ್ಳರು ತಮ್ಮ ಕೈ ಚಳಕ ತೋರಿಸಿದ್ದು, ಒಂದೂವರೆ ಗಂಟೆ ಅವಧಿಯಲ್ಲಿ ನಗರದ ಐದು ಕಡೆ ಸರಗಳ್ಳತನ ನಡೆಸಿದ್ದಾರೆ.
ಕಪ್ಪು ಬಣ್ಣದ ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು ಸರಗಳ್ಳರು, ಮಾನಂದವಾಡಿ ರಸ್ತೆಯ ಎನ್‌ಐಇ ಕಾಲೇಜು, ಜೆಪಿ ನಗರದ ಪೆಟ್ರೋಲ್ ಬಂಕ್, ಇಟ್ಟಿಗೆಗೂಡಿನ ದೇವಸ್ಥಾನ, ಗೋಕುಲಂ ಒಂದನೇ ಹಂತ ಕೊನೆಗೆ ಎನ್.ಆರ್.ಮೊಹಲ್ಲಾದ ಪಿಎಚ್ಒ ಕಾಲನಿಯಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಎರಡು ಕಡೆ, ನಜರ್‌ಬಾದ್ ಠಾಣಾ ವ್ಯಾಪ್ತಿಯಲ್ಲಿ ಒಂದು ಕಡೆ, ವಿವಿ ಪುರಂ ಠಾಣೆ ಮತ್ತು ಎನ್.ಆರ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಕೃತ್ಯ ವೆಸಗಿ ಪರಾರಿಯಾಗಿದ್ದಾರೆ.
ಬೆಳಗ್ಗೆ 6.20ಕ್ಕೆ ವಿದ್ಯಾರಣ್ಯಪುರಂನ ಜಯಮ್ಮ (65) ಅವರು ಎನ್‌ಐಇ ಕಾಲೇಜು ಬಳಿಯ ಖಾಸಗಿ ಅಪಾರ್ಟ್‌ಮೆಂಟ್ ಎದುರು ವಾಯು ವಿಹಾರಕ್ಕೆ ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಸರಗಳ್ಳರು ಅವರ ಕತ್ತಿನಲ್ಲಿದ್ದ 22 ಗ್ರಾಂ ಚಿನ್ನದ ಸರವನ್ನು ಕಿತ್ತು ಕೊಂಡು ಪರಾರಿಯಾಗಿದ್ದಾರೆ.
ಬೆಳಗ್ಗೆ 6.30ಕ್ಕೆ ವಿದ್ಯಾರಣ್ಯಪುರಂ ನಿವಾಸಿ ಜಯ ಲಕ್ಷ್ಮಮ್ಮ (68) ಅವರು ಜೆಪಿ ನಗರದ ಅಕ್ಕಾ ಮಹಾ ದೇವಿ ರಸ್ತೆಯ ಪೆಟ್ರೊಲ್ ಬಳಿ ವಾಯು ವಿಹಾರಕ್ಕೆ ತೆರಳುತ್ತಿದ್ದಾಗ ಹಿಂದಿನಿಂದ ಬೈಕಿನಲ್ಲಿ ಬಂದ ಖದೀಮರ ತಂಡ, ಅವರ ಕತ್ತಿನಲ್ಲಿದ್ದ 12 ಗ್ರಾಂ ಚಿನ್ನದ ಸರ ಕೀಳಲು ಪ್ರಯತ್ನಿಸಿದೆ. ಆದರೆ, ಜಯಲಕ್ಷ್ಮಮ್ಮ ಅವರು ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಕೇವಲ ಆರು ಗ್ರಾಂ ತೂಕದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
Advertisement
ವಾಯು ವಿಹಾರಕ್ಕೆ ತೆರಳಿದ್ದ, ಮನೆಗೆ ಹಾಲು ತರಲು ಹೋಗಿದ್ದ ಮತ್ತು ಮನೆ ಮುಂದೆ ರಂಗೋಲಿ ಹಾಕುತ್ತಿದ್ದ ವೃದ್ಧ ಮಹಿಳೆಯರನ್ನೇ ಗುರಿಯಾಗಿಸಿ ಕೊಂಡು ಕಾರ್ಯಾಚರಣೆ ನಡೆಸಿರುವ ಸರಗಳ್ಳರ ತಂಡ, ಐವರು ವೃದ್ಧೆಯರ ಒಟ್ಟು 148 ಗ್ರಾಂ ಚಿನ್ನದ ಸರಗಳನ್ನು ಕಿತ್ತು ಕೊಂಡು ಪರಾರಿಯಾಗಿದೆ.
Related Articles
Advertisement
ಬೆಳಗ್ಗೆ 6.50ಕ್ಕೆ ಇಟ್ಟಿಗೆಗೂಡಿನ ನಿವಾಸಿ ಸುಗುಣಾ ದೇವಿ (63) ಅವರು ಹಾಲು ತರಲು ಹೋಗುತ್ತಿದ್ದಾಗ ದೇವಸ್ಥಾನ ಬಳಿ ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಬಂದ ಸರಗಳ್ಳರು, ಅವರ ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಸರವನ್ನು ಕಿತ್ತು ಕೊಂಡು ಪರಾರಿಯಾಗಿದ್ದಾರೆ.
ಬೆಳಗ್ಗೆ 7.10ಕ್ಕೆ ಗೋಕುಲಂ ಒಂದನೇ ಹಂತದಲ್ಲಿ ಗಾಯತ್ರಿ (57) ಅವರು ಮನೆ ಮುಂದೆ ರಂಗೋಲಿ ಹಾಕುತ್ತಿದ್ದಾಗ ಹತ್ತಿರ ಬಂದು ಬೈಕ್ ನಿಲ್ಲಿಸಿದ ಸರಗಳ್ಳರು, ರಶ್ಮಿ ಎಂದು ಕೂಗಿದ್ದಾರೆ, ತಕ್ಷಣ ಎದ್ದು ತಿರುಗಿದ ಗಾಯತ್ರಿ ಅವರ ಕತ್ತಿನಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಬೆಳಗ್ಗೆ 8.05ಕ್ಕೆ ಎನ್.ಆರ್. ಮೊಹಲ್ಲಾದ ಪಿಎಚ್ಒ ಕಾಲನಿ ನಿವಾಸಿ ಲಲಿತಮ್ಮ (80) ಅವರು ವಾಯು ವಿಹಾರಕ್ಕೆ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಸರಗಳ್ಳರು, ಅವರ ಕತ್ತಿನಲ್ಲಿ ದ್ದ 40 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಒಂದೇ ತಂಡದ ಕೃತ್ಯ: ಮೈಸೂರು ನಗರದಲ್ಲಿ ಐದು ಕಡೆ ಸರಗಳ್ಳತನವನ್ನು ಒಂದೇ ತಂಡ ನಡೆಸಿದ್ದು, ಹೆಲ್ಮೆಟ್ ಧರಿಸಿ ಕಾರ್ಯಾಚರಣೆ ನಡೆಸಿದ್ದಾರೆ, ಕಪ್ಪು ಬಣ್ಣದ ಪಲ್ಸರ್ ಬೈಕಿಗೆ ಕೆಂಪು ಬಣ್ಣದ ಡ್ಯೂಮ್ ಇತ್ತು. ಐದು ಕಡೆ ನಡೆದ ಸರಗಳ್ಳತಗಳನ್ನು ಒಂದೇ ತಂಡ ನಡೆಸಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೂರು ತಂಡ ರಚನೆ: ಒಂದೇ ದಿನ ಐದು ಕಡೆ ಸರ ಗಳ್ಳತನ ನಡೆದ ಹಿನ್ನೆಲೆಯಲ್ಲಿ ಸರಗಳ್ಳರ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.
ಸರಗಳ್ಳತನ ಕೃತ್ಯ ನಡೆಯುತ್ತಿದ್ದಂತೆ ಎಲ್ಲೆಡೆ ನಾಕಾಬಂಧಿ ರಚಿಸಿ, ಸರಗಳ್ಳರ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದ್ದು, ಗಸ್ತು ಹೆಚ್ಚಿಸಲಾಗಿದೆ. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳ ಲಾಗಿದೆ. ಸಾರ್ವಜನಿಕರು ಅದರಲ್ಲೂ ಮಹಿಳೆ ಯರು ಬೆಲೆ ಬಾಳುವ ಆಭರಣಗಳನ್ನು ಧರಿಸಿಕೊಂಡು ಹೋಗುವಾಗ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಪೊಲೀಸ್ ಕಾರ್ಯಾಚರಣೆ
ಚಿನ್ನದ ಸರ ಕಳೆದುಕೊಂಡ ವೃದ್ಧೆಯರು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೃತ್ಯ ನಡೆದ ಸ್ಥಳದ ವ್ಯಾಪ್ತಿಯಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿ ಸಿದರು. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ, ಡಿಸಿಪಿ ಮುತ್ತುರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿ ಸಿದರು. ಮೊದಲ ಸರಗಳ್ಳತನ ಕೃತ್ಯವಾಗುತ್ತಿದ್ದಂತೆ ಎಚ್ಚೆತ್ತ ಮೈಸೂರು ನಗರ ಪೊಲೀಸರು, ತಕ್ಷಣ ಕಾರ್ಯಾಚರಣೆ ಆರಂಭಿಸಿದರು. ಎಲ್ಲೆಡೆ ನಾಕಾ ಬಂಧಿ ರಚಿಸಿ, ಸರಗಳ್ಳರ ಪತ್ತೆಗೆ ಶೋಧ ಕಾರ್ಯ ನಡೆಸಿದರು. ಅನುಮಾನಾಸ್ಪದ ವಾಹನಗಳನ್ನು ತಡೆದು ಪರಿಶೀಲನೆ ನಡೆಸಿದರು. ಐದು ಸರ ಗಳ್ಳತನ ಕೃತ್ಯಗಳ ಸಂಬಂಧ ವಿದ್ಯಾರಣ್ಯಪುರಂ, ಎನ್.ಆರ್, ವಿವಿ ಪುರಂ, ನಜರ್‌ಬಾದ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.