ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್, ಕೆಟಿಎಂ ಡ್ನೂಕ್ ರೀತಿಯ ದುಬಾರಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ತಮಿಳುನಾಡಿನ ಅಂಬೂರ್ ಗ್ಯಾಂಗ್‌ನ ಐವರು ಆರೋಪಿಗಳನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ವೇಲೂರು ಜಿಲ್ಲೆಯ ಅಂಬೂರ್ ಟೌನ್‌ನ ಮೊಹಮ್ಮದ್ ಮುಜಾಹಿದ್ (24), ಮುಸ್ತಾಕಿನ್ (19), ಇಸ್ತಿಯಾಜ್ (25), ನೂರ್ ಮೊಹಮ್ಮದ್ (21) ಮತ್ತು ಜುಲ್ಫಿಕರ್ ಅಲಿ (20) ಬಂಧಿತರು. ನಸುಕಿನ 3 ಗಂಟೆ ಸುಮಾರಿಗೆ ಕಾರಿನಲ್ಲಿ ನಗರಕ್ಕೆ ಬರುತ್ತಿದ್ದ ಆರೋಪಿಗಳು, ತಮಿಳುನಾಡಿಗೆ ಹತ್ತಿರ ಇರುವ ಮಡಿವಾಳ, ಎಚ್‌ಎಸ್‌ಆರ್ ಲೇಔಟ್, ಬಂಡೆಪಾಳ್ಯ, ಪರಪ್ಪನ ಅಗ್ರಹಾರ ಭಾಗಗಳಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದರು ಎಂದು ಆಗ್ನೇಯ ವಿಭಾಗದ ಡಿಸಿಪಿ ಡಾ. ಬೋರಲಿಂಗಯ್ಯ ಹೇಳಿದರು.
ಆರೋಪಿಗಳಿಂದ 75 ಲಕ್ಷ ರೂ. ಮೌಲ್ಯದ 46 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 15 ರಾಯಲ್ ಎನ್‌ಫೀಲ್ಡ್, 13 ಕೆಟಿಎಂ ಡ್ನೂಕ್, 10 ಪಲ್ಸರ್,7 ಯಮಹಾ ಆರ್15 ಹಾಗೂ ಒಂದು ಹೊಂಡಾ ಶೈನ್ ವಾಹನ ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಬಂಡೆಪಾಳ್ಯ ಮತ್ತು ಪರಪ್ಪನ ಅಗ್ರಹಾರ ಹಾಗೂ ಎಚ್‌ಎಸ್‌ಆರ್ ಲೇಔಟ್ ಠಾಣೆಗಳಲ್ಲಿ ದಾಖಲಾಗಿದ್ದ 21 ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದರು.
ಕೇವಲ 15 ಸಾವಿರಕ್ಕೆ ಮಾರಾಟ: ಲಕ್ಷಾಂತರ ರೂ. ಮೌಲ್ಯದ ಬೈಕ್‌ಗಳನ್ನು ಕದ್ದೊಯ್ಯುತ್ತಿದ್ದ ಆರೋಪಿಗಳು ತಮಿಳುನಾಡಿನ ವಿದ್ಯಾರ್ಥಿಗಳು, ಯುವಕರಿಗೆ ಕೇವಲ 15ರಿಂದ 20 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. ಅಂಬೂರು, ವೇಲೂರು ಭಾಗದ ಕಾಲೇಜು ವಿದ್ಯಾರ್ಥಿಗಳನ್ನು ಪರಿಚಯಸಿಕೊಳ್ಳುತ್ತಿದ್ದ ಆರೋಪಿಗಳು ಅವರಿಗೆ ಬೇಕಿರುವ ಬೈಕ್ ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಹಿಂದೆ ತಮಿಳುನಾಡಿನ ಅಂಬೂರು ಮೂಲದ ಮಾಸ್ಟರ್‌ಮೈಂಡ್ ಒಬ್ಬ ಕೆಲಸ ಮಾಡುತ್ತಿದ್ದು, ಈತ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳ ಬೇಡಿಕೆಗೆ ತಕ್ಕಂತೆ ಬೈಕ್‌ಗಳನ್ನು ಬಂಧಿತರ ಮೂಲಕ ನಗರದಲ್ಲಿ ಕಳವು ಮಾಡಿಸುತ್ತಿದ್ದ. ಕದ್ದ ಬೈಕ್‌ಗಳಿಗೆ ತಮಿಳುನಾಡು ನೋಂದಣಿಯ ನಕಲಿ ನಂಬರ್ ಪ್ಲೇಟ್, ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು. ತಮಿಳುನಾಡು ಪೊಲೀಸರು ಹೆಚ್ಚಾಗಿ ವಾಹನ ಪರಿಶೀಲನೆ ಮಾಡದಿರುವುದೇ ಆರೋಪಿಗಳಿಗೆ ವರದಾನವಾಗಿತ್ತು ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಪೇದೆಗಳಿಗೆ ಸಿಕ್ಕಿ ಬಿದ್ದ ಕಳ್ಳರು: ಜೂನ್ 26ರಂದು ರಾತ್ರಿ 9 ಗಂಟೆ ಸುಮಾರಿಗೆ ಎಚ್‌ಎಸ್‌ಆರ್ ಲೇಔಟ್‌ನ ಪೇದೆಗಳಾದ ರಾಜಶೇಖರ್, ನಿಂಗಪ್ಪ ಅರಮನೆ, ಮಾಲತೇಶ್ ಹಾಗೂ ಸತೀಶ್ ಗಸ್ತಿನಲ್ಲಿದ್ದರು. ಈ ವೇಳೆ ಎರ್ಟಿಗಾ ಕಾರಿನಲ್ಲಿ ಬಂದ ಆರೋಪಿಗಳು ಅನುಮಾನಸ್ಪದವಾಗಿ ಓಡಾಡುತ್ತಿದ್ದರು.
ಕಾರು ತಡೆಯಲು ಯತ್ನಿಸಿದಾಗ ನಿಲ್ಲಿಸಿದೆ ಪರಾರಿಯಾಗಿದ್ದರು. ಹಿಂಬಾಲಿಸಿದ ಸಿಬ್ಬಂದಿ, ಆರೋಪಿಗಳ ಕಾರು ಅಡ್ಡಗಟ್ಟಿ, ವಿಚಾರಣೆ ನಡೆಸಿದಾಗ ಬೈಕ್‌ಗಳ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳನ್ನು ಹಿಡಿದ ನಾಲ್ವರು ಪೇದೆಗಳಿಗೆ ಡಿಸಿಪಿ ಡಾ ಬೋರಲಿಂಗಯ್ಯ ಅವರು ತಲಾ ಹತ್ತು ಸಾವಿರ ರೂ. ಬಹುಮಾನ ಹಾಗೂ ಇಡೀ ತಂಡಕ್ಕೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.