ಆ ಹೊಲಕ್ಕೆ ಕಾಲಿಟ್ಟರೆ ಕೃಷಿ ಬ್ರಹ್ಮಾಂಡದ ದರ್ಶನ ಭಾಗ್ಯ, ಹೆಜ್ಜೆಗೊಂದು ಪ್ರಯೋಗ, ಸಸ್ಯ ಸಂಕುಲದ ವಿಜೃಂಭಣೆ, ಆಹಾರ ಧಾನ್ಯ, ಹಣ್ಣು-ಹೂ, ಔಷಧ ಸಸ್ಯ, ಜೇನು, ವಾಣಿಜ್ಯ ಬೆಳೆ ಹೀಗೆ ಮಹತ್ವದ ಜೀವ ವೈವಿಧ್ಯತೆ ಪ್ರಯೋಗ ನೋಡಬೇಕಾದರೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಕಾನಕೊಡ್ಲು ಗ್ರಾಮಕ್ಕೆ ಬರಬೇಕು. ಇಲ್ಲಿನ ಪ್ರಸಾದ ರಾಮಾ ಹೆಗಡೆ ಐದು ಎಕರೆಯಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ರಾಮಾ ಹೆಗಡೆಗೆ 19 ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಐದು ಎಕರೆ ಜಮೀನಿನಲ್ಲಿ ಅಡಿಕೆ, ಮೆಣಸು, ತೆಂಗು ಅಲ್ಲದೆ ಸುಮಾರು 80-90 ವಿಧದ ಹಣ್ಣಿನ ಗಿಡ-ಮರಗಳಿವೆ. ಒಟ್ಟಾರೆ 600ಕ್ಕೂ ಅಧಿಕ ಸಸ್ಯಗಳಿವೆ. ಬಟನ್, ಸೂಜಿ, ಕಪ್ಪು ಹೀಗೆ ಸುಮಾರು 9 ರೀತಿಯ ಮೆಣಸಿನಕಾಯಿ ಇಲ್ಲಿದೆ. ಸುಮಾರು 15 ತಳಿಗಳ ಕಾಳು ಮೆಣಸು. ಕಾಳು ಮೆಣಸಿನಲ್ಲಿ ತಮ್ಮದೇ ಬುಶ್ ಪದ್ಧತಿಯೊಂದಿಗೆ ಅತಿಹೆಚ್ಚಿನ ಇಳುವರಿ ಪಡೆಯುತ್ತಿದ್ದಾರೆ. ಸುಮಾರು 50 ಅಡಿ ಎತ್ತರಕ್ಕೆ ಮೆಣಸು ಬೆಳೆಸಿ ಒಂದೇ ಬಳ್ಳಿಯಿಂದ ಸುಮಾರು 14 ಕೆ.ಜಿ.ಯಷ್ಟು ಮೆಣಸು ಫಸಲು ಪಡೆದು ಬೆರಗು ಮೂಡಿಸಿದ್ದಾರೆ.
ಶಾನ ಬಾಳೆ, ಬೂದ ಶಾನ, ಸಕ್ಕರೆ ಬಾಳೆ, ಚಂದ್ರ ಬಾಳೆ(ಕೆಂಪು), ರಸಬಾಳೆ, ಮೈಸೂರು ಮಿಟ್ಲ, ನೇಂದ್ರ ಬಾಳೆ ಹೀಗೆ 10 ತಳಿಯ ಬಾಳೆ ಬೆಳೆದಿದ್ದಾರೆ. ಸೀತಾಫಲ, ರಾಮಫಲ, ಹನುಮಾನಫಲ, ತೈವಾನ್ ಸೀತಾಫಲ, ಬೀಟ್‌ರೂಟ್ ಪೇರಲ, ಕಪ್ಪುಮಾವು, ನೆರಳೆ, ಕೆಂಪು ನೇರಳೆ, ಹಲಸು, ಫ್ಯಾಶನ್ ಫೂÅಟ್, ಶಿಮ್ಲಾ ಸೇಬು, ಪಿಕಾನ್ ಬದಾಮಿ ಗಿಡಗಳೂ ಇವೆ. ಸುಮಾರು 120 ಮಾವಿನ ಗಿಡಗಳಲ್ಲಿ 40 ವಿವಿಧ ಅಪ್ಪೆ ಮಿಡಿ ಇದ್ದರೆ, 30 ವಿಧದ ಮಾವಿನ ಹಣ್ಣುಗಳ ತಳಿ, ಬನಾರಸ ನೆಲ್ಲಿ, ಬೆಟ್ಟದ ನೆಲ್ಲಿಯೂ ಇದೆ.
ವೀಳ್ಯದೆಲೆಯಲ್ಲಿ ಪಾನ್ ಮಸಾಲ, ರಾಣಿ, ಬನಾರಸ, ಲಕ್ಕಿವಳ್ಳಿ, ಅಂಬಾಡಿ ತಳಿ ಇದ್ದರೆ, ಅಡಿಕೆಯಲ್ಲಿ ನಾಲ್ಕು ತಳಿ, ಇದಲ್ಲದೆ ತರಕಾರಿ, ವಾಣಿಜ್ಯ, ಮಸಾಲೆ ಹಾಗೂ ಔಷಧಿ ಇನ್ನಿತರ ಸಸ್ಯಗಳಾಗಿ ಏಲಕ್ಕಿ, ಮುಸಂಡ, ಕ್ಷಮಪತ್ರೆ, ರಕ್ತ ಚಂದನ, ಸಿಯಾವಟೆ, ಸರ್ವ ಸಾಂಬಾರು, ಮಹೆಂದಿ, ಕಪ್ಪುಲಕ್ಕಿ, ಹಿಪ್ಲಿ ಅಲ್ಲದೆ ಸುಮಾರು 1ಎಕರೆಯಲ್ಲಿ 4 ತಳಿಗಳ 400 ದಾಲಿcನ್ನಿ ಗಿಡ ಬೆಳೆದಿದ್ದಾರೆ.
ಕೃಷಿಯಲ್ಲಿ ಪ್ರಯೋಗದ ಹಸಿವು ಇನ್ನೂ ಇಂಗಿಲ್ಲ. ಕೃಷಿಗೆ ಬೆನ್ನು ಮಾಡಿ ಬೆಂಗಳೂರಿನಲ್ಲಿ ನೌಕರಿ ಮಾಡುವವರ ಬದುಕನ್ನು ನೋಡಿದ್ದೇನೆ. ಅವರಿಗಿಂತ ಸಾವಿರ ಪಾಲು ಉತ್ತಮ ಜೀವನ ನಮ್ಮದೆಂಬ ಖುಷಿ, ಸಂತಸವಿದೆ. ಎನ್ನುತ್ತಾರೆ ಪ್ರಸಾದ ರಾಮಾ ಹೆಗಡೆ ಅವರಿಗೆ ರಾಜ್ಯ ಸರಕಾರದ ಕೃಷಿ ಪಂಡಿತ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.
ಮಾಹಿತಿಗೆ: 08419-257815, 9480410770.
– ಅಮರೇಗೌಡ ಗೋನವಾರ