Advertisement

ಅಪ್ಪನ ಕೊಲೆಗೆ ಸುಪಾರಿ: ಮಕ್ಕಳು ಸೇರಿ ಐವರ ಸೆರೆ ‌

08:25 PM Mar 28, 2021 | Team Udayavani |

ಕಲಬುರಗಿ: ಆಳಂದ ತಾಲೂಕಿನ ನರೋಣಾ ಗ್ರಾಮದ ಬಟ್ಟೆ ವ್ಯಾಪಾರಿ ಓಂಕಾರ ಅನಶೆಟ್ಟಿ ಕೊಲೆ ಪ್ರಕರಣವನ್ನು ನಗರ ಪೊಲೀಸ್‌ ಆಯುಕ್ತಾಲಯದ ಗ್ರಾಮೀಣ ಠಾಣೆ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಕೊಲೆಯಾದ ಹನಶೆಟ್ಟಿಯ ಇಬ್ಬರು ಪುತ್ರರು ಸೇರಿ ಐವರನ್ನು ಬಂಧಿಸಿದ್ದಾರೆ.

Advertisement

ಇವರಲ್ಲಿ ಕೆಎಸ್‌ಆರ್‌ಪಿ ಎಎಸ್‌ ಐಯೊಬ್ಬರ ಪುತ್ರನೂ ಸೇರಿದ್ದಾನೆ. ಓಂಕಾರ ಹನಶೆಟ್ಟಿಯ ಮಕ್ಕಳಾದ ಶರಣಬಸಪ್ಪ ಹನಶೆಟ್ಟಿ, ರವಿ ಹನಶೆಟ್ಟಿ ಮತ್ತು ಇವರ ಸ್ನೇಹಿತರಾದ ಜೈಕರವೇ ವಿದ್ಯಾರ್ಥಿ ಘಟಕ ಅಧ್ಯಕ್ಷನಾದ ತಾಜಸುಲ್ತಾನಪುರದ ನಿವಾಸಿ ಅಮರ ಹಿಂದೊಡ್ಡಿ, ನಗರದ ಬಂಬೂಬಜಾರ್‌ ನ ಹರೀಶ್‌ ಒಂಟಿ, ಸುರೇಶ ಡೆಂಗಿ ಎನ್ನುವರೇ ಬಂಧಿತ ಆರೋಪಿಗಳು. ಇವರೆಲ್ಲರೂ ಸ್ನೇಹಿತರಾಗಿದ್ದು, ಇಬ್ಬರು ಮಕ್ಕಳೊಂದಿಗೆ ಮೂವರು ಸುಪಾರಿ ಪಡೆದುಕೊಂಡವರಂತೆ ಕೈಜೋಡಿಸಿ ಕೊಲೆ ಮಾಡಿದ್ದರು.

ನರೋಣಾ ಗ್ರಾಮದ ಓಂಕಾರ ಮಾ.22ರಂದು ಕೆಲಸದ ನಿಮಿತ್ತ ಕಲಬುರಗಿ ನಗರಕ್ಕೆ ಬೈಕ್‌ ಮೂಲಕ ಬರುತ್ತಿದ್ದರು. ಇದನ್ನು ಅರಿತು ಸ್ನೇಹತರ ಜತೆಗೂಡಿ ಮಕ್ಕಳು ಆಟೋದಲ್ಲಿ ಬೈಕ್‌ ಬೆನ್ನಟ್ಟಿದ್ದರು. ನಗರ ಹೊರವಲಯದ ಅಷ್ಟಗಾ ಸಮೀಪ ಅಡ್ಡಗಟ್ಟಿ ಓಂಕಾರ ಅವರನ್ನು ಆಟೋದಲ್ಲಿ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಹೊಲವೊಂದಕ್ಕೆ ಕರೆದುಕೊಂಡು ಹೋಗಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು.

ಓಂಕಾರ ಅವರಿಗೆ ಗುರುಬಾಯಿ ಮತ್ತು ಜಗದೇವಿ ಎನ್ನುವ ಇಬ್ಬರು ಪತ್ನಿಯರಿದ್ದಾರೆ. ಇಬ್ಬರಿಗೂ ತಲಾ ಮೂವರು ಮಕ್ಕಳಿದ್ದಾರೆ. ಮೊದಲ ಪತ್ನಿ ಗುರುಬಾಯಿ 30 ವರ್ಷಗಳ ಹಿಂದೆ ತೀರಿಕೊಂಡ ಬಳಿಕ ಎರಡನೇ ಮದುವೆ ಮಾಡಿಕೊಂಡಿದ್ದರು. ಈ ನಡುವೆ ತಂದೆ ವಿಪರೀತ ಕಿರಿಕಿರಿ ಮಾಡುತ್ತಿದ್ದರು. ಅಲ್ಲದೇ, ಹಣ ಖರ್ಚು ಮಾಡುತ್ತಿದ್ದರು. ಇದಕ್ಕಾಗಿ ಹೊಲವನ್ನು ಬೇರೆಯವರಿಗೆ ಮಾರಿಬಿಟ್ಟರೆ ತಮ್ಮ ಗತಿಯೇನು ಎಂದುಕೊಂಡು ಮಕ್ಕಳಾದ ಶರಣಬಸಪ್ಪ ಮತ್ತು ರವಿ ತಮ್ಮ ಸ್ನೇಹಿತರ ಜತೆಗೂಡಿ ಕೊಲೆ ಸಂಚು ರೂಪಿಸಿ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಂದು ಕೊಲೆ ಮಾಡಿದ ನಂತರ ಅವರೇ ಮನೆಗೆ ಮನೆಯಲ್ಲಿ ಸಹೋದರಿಗೆ ಅಪ್ಪನ ಬಗ್ಗೆ ವಿಚಾರಿಸಿದಂತೆ ಮಾಡಿದ್ದರು. ನಂತರ ಬೈಕ್‌ ನಿಂತಿರುವುದು ಗೊತ್ತಾಗಿದೆ ಎಂಬಂತೆ ನಾಟಕವಾಡಿದ್ದರು. ಅಲ್ಲದೇ, ತಂದೆಯ ಶವ ಊರಿಗೆ ಬಂದಾಗ ಇಬ್ಬರು ಸಿಕ್ಕಾಪಟ್ಟೆ ಅತ್ತಿದ್ದರು. ಅಂತ್ಯಕ್ರಿಯೆಯಲ್ಲಿ ತಾವೇನು ಮಾಡಿಲ್ಲ ಎಂಬಂತೆ ಕಂಡು ಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ. ನಗರ ಪೊಲೀಸ್‌ ಆಯುಕ್ತ ಎನ್‌. ಸತೀಶಕುಮಾರ, ಉಪ ಆಯುಕ್ತರಾದ ಕಿಶೋರಬಾಬು, ಶ್ರೀಕಾಂತ ಕಟ್ಟಿಮನಿ, ಸಹಾಯಕ ಆಯುಕ್ತ ಜೆ.ಎಚ್‌. ಇನಾಮದಾರ ಮಾರ್ಗದರ್ಶನದಲ್ಲಿ ಗ್ರಾಮೀಣ ಇನ್‌ಸ್ಪೆಕ್ಟರ್‌ ಭಾಸು ಚವ್ಹಾಣ, ಪಿಎಸ್‌ಐ ಕವಿತಾ ಚವ್ಹಾಣ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿತರನ್ನು ಬಂಧಿಸಿದ್ದಾರೆ. ಈಗಾಗಲೇ ಎಲ್ಲರನ್ನೂ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next