Advertisement

ಕಸದ ಲಾರಿ ಚಾಲಕರಿಗೆ ಫಿಟ್ನೆಸ್ ಟೆಸ್ಟ್‌; ಫೇಲ್‌ ಆದ ಚಾಲಕರಿಗೆ ಕೋಕ್‌

11:52 AM Apr 22, 2022 | Team Udayavani |

ಬೆಂಗಳೂರು: ಕೇವಲ ಒಂದು ತಿಂಗಳ ಅಂತರದಲ್ಲಿ ನಗರದ ಕಸದ ಲಾರಿಗಳು ಮೂರು ಬಲಿ ಪಡೆದ ಹಿನ್ನೆಲೆಯಲ್ಲಿ ಅವುಗಳ ಚಾಲಕರನ್ನು ದೈಹಿಕ ಪರೀಕ್ಷೆಗೊಳಪಡಿಸಲು ಬಿಬಿಎಂಪಿ ಮುಂದಾಗಿದೆ.

Advertisement

ನಗರದಲ್ಲಿ ಸುಮಾರು 350ರಿಂದ 400 ಲಾರಿಗಳಲ್ಲಿ ಕಸ ಬೇರೆ ಬೇರೆ ಕಡೆ ವಿಲೇವಾರಿ ಆಗುತ್ತದೆ. ಈ ಪೈಕಿ ಸಾವಿರ ಟನ್‌ ಹಸಿ ಕಸ ಸಂಸ್ಕರಣಾ ಕೇಂದ್ರಗಳಿಗೆ ಹಾಗೂ ಸುಮಾರು ಎರಡು ಸಾವಿರ ಟನ್‌ ಭೂಭರ್ತಿಗೆ ಹೋಗುತ್ತದೆ. ಈ ಲಾರಿಗಳ ಚಾಲಕರನ್ನು ಯಲಹಂಕದಲ್ಲಿರುವ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ದೈಹಿಕ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದ್ದು, ತಲಾ 50 ಜನರ ತಂಡಗಳನ್ನು ಮಾಡಿ, ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಸ್ಟಿಮ್ಯುಲೇಟರ್‌ನಲ್ಲಿ ಚಾಲಕರನ್ನು
ಕೂರಿಸಿ, ಕಣ್ಣು, ಕಿವಿ ಸೇರಿದಂತೆ ಚಾಲನಾ ಸಾಮರ್ಥ್ಯ ಪರಿಕ್ಷೆ ನಡೆಯಲಿದೆ. ಮುಂದಿನ 12 ದಿನಗಳು ಇದು ನಿರಂತರವಾಗಿ ಇರಲಿದೆ.

“ಈಗಾಗಲೇ ತಂಡಗಳನ್ನು ರಚಿಸಲಾಗಿದೆ. ಈ ಪರೀಕ್ಷೆ ಕೂಡ ಆರಂಭವಾಗಿದ್ದು, ಇದರಲ್ಲಿ ಅನುತ್ತೀರ್ಣಗೊಂಡವರನ್ನು ಗುತ್ತಿಗೆದಾರರಿಗೆ ಸುರಕ್ಷತೆ ದೃಷ್ಟಿಯಿಂದ ಕೈಬಿಡುವಂತೆ ಸೂಚಿಸಲಾಗುವುದು. ಅಲ್ಲದೆ, ಭೂಭರ್ತಿ ಘಟಕದ ಬಳಿ ತೂಕ ಮಾಡುವ ಯಂತ್ರಗಳ ಬಳಿ ಅಥವಾ ಮತ್ತೂಂದು ಪಾಯಿಂಟ್‌ನಲ್ಲಿ ಈ ಪರೀಕ್ಷೆ ಮೂಲಕ ಚಾಲಕರನ್ನು ಆಲ್ಕೋಮೀಟರ್‌ ಮೂಲಕ ಡ್ರಂಕ್‌ ಆಂಡ್‌ ಡ್ರೈವ್‌ ಪರೀಕ್ಷೆಗೊಳಪಡಿಸುವ ಚಿಂತ  ನೆಯೂ ನಡೆದಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಒಂದು ಕಸದ ಲಾರಿಯು ಸುಮಾರು ನಾಲ್ಕೈದು ಟನ್‌ ಕಸವನ್ನು ಹೊತ್ತೂಯ್ಯುತ್ತದೆ. ನಗರದ ವಿವಿಧ ಬಡಾವಣೆಗಳಿಂದ ಕಸ ಸಂಗ್ರಹಿಸಿಕೊಂಡು ಬರುವ ಕಾಂಪ್ಯಾಕ್ಟರ್‌ಗಳಿಂದ ಈ ಲಾರಿಗಳಿಗೆ ಕಸ ತುಂಬಲಾಗುತ್ತದೆ. ಬೆಳಗ್ಗೆ 10 ಗಂಟೆಗೆ ತೆರಳುವ ಈ ವಾಹನಗಳು ಭೂಭರ್ತಿ ಕೇಂದ್ರಗಳಲ್ಲಿ ಪಾಳಿ ನಿಲ್ಲಬೇಕಾಗುತ್ತದೆ. ಸಂಜೆ 6ಕ್ಕೆ ಪಾಳಿ ಸಿಗುತ್ತದೆ.ಅಲ್ಲಿಯವರೆಗೂ ಚಾಲಕರು ಆ ಜಾಗದಲ್ಲೇ ಕಾಲ ಕಳೆಯಬೇಕಾಗುತ್ತದೆ. ಬಹುತೇಕ ಎಲ್ಲ ಚಾಲಕರು ಸಾಕಷ್ಟು ಅನುಭವ ಹೊಂದಿದವರಾಗಿದ್ದಾರೆ. ಆದಾಗ್ಯೂ ಅಹಿತಕರ ಘಟನೆಗಳು ಸಂಭವಿಸುತ್ತಿವೆ.

ಹೊಸ ವಾಹನಗಳು?
ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಸಮಗ್ರ ಟೆಂಡರ್‌ ಕರೆಯಲು ಬಿಬಿಎಂಪಿ ಸಿದ್ಧತೆ ನಡೆಸಿದ್ದು, ಹೊಸ ಕಸದ ವಾಹನಗಳನ್ನು ರಸ್ತೆಗಿಳಿಸಬೇಕು ಎಂಬ ಷರತ್ತು ಕೂಡ ಟೆಂಡರ್‌ ನಲ್ಲಿ ಸೇರಿಸಲು ಉದ್ದೇಶಿಸಿದೆ. ಐದು ವರ್ಷಗಳ ಗುತ್ತಿಗೆ ಇದಾಗಿರುತ್ತದೆ. ಜಿಪಿಎಸ್‌, ಬ್ಯಾಟರಿ ಮತ್ತಿತರ ಉಪಕರಣಗಳು ವಾಹನಗಳು ರಸ್ತೆಗಿಳಿಯುವಾಗಲೇ ಅಳವಡಿಕೆಯಾಗಿ ಬಂದರೆ ಉತ್ತಮವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಹೊಸ ವಾಹನಗಳನ್ನು ರಸ್ತೆಗಿಳಿಸಲು ಚಿಂತನೆ ನಡೆದಿದೆ. ಆದರೆ, ಇದಕ್ಕೆ ಮುಂಬರುವ ದಿನಗಳಲ್ಲಿ ಹಲವು ತಾಂತ್ರಿಕ ಅಡತಡೆಗಳೂ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

ಲಾರಿಗಳ ಮುಂಭಾಗ ಬಾವುಟ ಅಳವಡಿಕೆ
“ಮೂರೂ ಅಪಘಾತಗಳಲ್ಲಿ ಕಾರಣಗಳು ಏನೇ ಇರಬಹುದು. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಬಿಬಿಎಂಪಿ ಹಲವು ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ. ಇದರಲ್ಲಿ ದೈಹಿಕ ಪರೀಕ್ಷೆ ಕೂಡ ಒಂದಾಗಿದೆ. ಜತೆಗೆ ಸಾಮಾನ್ಯವಾಗಿ ರಕ್ಷಣಾ ಇಲಾಖೆಯ ವಾಹನಗಳ ಮುಂಭಾಗದಲ್ಲಿ ಎರಡೂ ಬದಿಯಲ್ಲಿ ಬಾವುಟಗಳನ್ನು ಅಳವಡಿಸಲಾಗಿರುತ್ತದೆ. ಅದೇ ಮಾದರಿಯಲ್ಲಿ ಕಸದ ಲಾರಿಗಳ ಮುಂಭಾಗದ ಎರಡೂ ಬದಿಯಲ್ಲಿ ಬಿಳಿ ಅಥವಾ ಕಣ್ಣಿಗೆ ಎದ್ದುಕಾಣುವ ಯಾವುದಾದರೂ ಬಣ್ಣದ ಬಾವುಟಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಇದರಿಂದ ಅನಾಹುತಗಳನ್ನು ತಪ್ಪಿಸಬಹುದು’ ಎಂದು ಹೆಸರು ಹೇಳಲಿಚ್ಛಿಸದ ಉನ್ನತ ಅಧಿಕಾರಿಯೊಬ್ಬರು
ಮಾಹಿತಿ ನೀಡಿದರು. “ಈ ಕ್ರಮದಿಂದ ವಾಹನ ಹಿಂದಿಕ್ಕುವವರು ಅಥವಾ ಮುಂದೆ ಬರುವ ವಾಹನಗಳು ಕನಿಷ್ಠ ಆ ಬಾವುಟಗಳಷ್ಟು ಅಂತರ ಕಾಯ್ದುಕೊಳ್ಳಲು ಅನುಕೂಲ ಆಗುತ್ತದೆ. ಈ ಕುರಿತು ಚರ್ಚೆ ನಡೆದಿದೆ’ ಎಂದು ಮೂಲಗಳು ತಿಳಿಸಿವೆ.

ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next