Advertisement

ಇಂದಿನಿಂದ ಯಾಂತ್ರಿಕ ಮೀನುಗಾರಿಕೆ ಶುರು; ಸಜ್ಜಾಗುತ್ತಿವೆ ದೋಣಿಗಳು

06:25 AM Aug 01, 2017 | |

ಮಲ್ಪೆ: ಯಾಂತ್ರಿಕ ಮೀನುಗಾರಿಕೆಗೆ ಎರಡು ತಿಂಗಳು ಇದ್ದ ನಿಷೇಧದ ಅವಧಿ ಕೊನೆಗೊಂಡಿದ್ದು  ಆಳಸಮುದ್ರ ದೋಣಿಗಳು ಲಂಗರು ತೆಗೆದು ಮತ್ತೆ ಮತ್ಸÂ ಬೇಟೆಗೆ ತೆರಳಲು ಸಜ್ಜಾಗುತ್ತಿವೆ.

Advertisement

ಮಲ್ಪೆ ಬಂದರಿನಲ್ಲಿರುವ ಸುಮಾರು 1200 ಆಳಸಮುದ್ರ, 350 ತ್ರಿಸೆವೆಂಟಿ, 130 ಪಸೀìನ್‌ ಹಾಗೂ ಇನ್ನಿತರ ಸಣ್ಣದೋಣಿಗಳು ಸೇರಿದಂತೆ ಎಲ್ಲಾ ಬೋಟುಗಳು ಕಡಲಿಗಿಳಿಯುವಲ್ಲಿ ಸನ್ನಹಗೊಳ್ಳುತ್ತಿದೆ.

ಮಳೆಗಾಲದಲ್ಲಿ ಯಾಂತ್ರಿಕ ಮೀನು ಗಾರಿಕೆ ನಿಷೇಧದ ಹಿನ್ನಲೆಯಲ್ಲಿ ವ್ಯಾಪಾರ ವಹಿವಾಟುಗಳು ಕುಂಠಿತವಾಗಿದ್ದ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮತ್ತೆ ವಹಿವಾಟುಗಳು ಗರಿಗೆದರಲಿದೆ.

ಪ್ರತಿವರ್ಷ ಮಳೆಗಾಲದಲ್ಲಿ ಜೂ.1ರಿಂದ ಜು.31ರ ವರೆಗೆ ಒಟ್ಟು 61 ದಿನಗಳ ಕಾಲ ಆಳಸಮುದ್ರದಲ್ಲಿ ಯಾಂತ್ರಿಕ ಮೀನುಗಾರಿಕೆಯನ್ನು ನಿಷೇಧಿಸಿ ಸರಕಾರ ಆದೇಶ ಹೊರಡಿಸುತ್ತದೆ. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶವಿರುತ್ತದೆ. ಇದೀಗ 61 ದಿನದ ರಜೆ ಜು.31ರಂದು ಕೊನೆಗೊಂಡಿದೆ.

ಆಗಸ್ಟ್‌  11 ರಿಂದ ವಾಹಿವಾಟು
ಆ. 1ರಿಂದ ಯಾಂತ್ರಿಕ ಮೀನುಗಾರಿಕೆ ನಡೆಸಲು ಅವಕಾಶವಿದ್ದರೂ ಮಲ್ಪೆ ಬಂದರಿನಲ್ಲಿ ಬಹುತೇಕ ಎಲ್ಲ ಸ್ತರದ ದೋಣಿಗಳು ಆ. 3-4ರ ನಂತರ ಮೀನುಗಾರಿಕೆಗೆ ತೆರಳಲು ಸನ್ನಹ ನಡೆಸಿವೆ. ಈ ನಿಟ್ಟಿನಲ್ಲಿ ಬೋಟ್‌ ಮಾಲಕರು ಬೋಟಿನ ರಿಪೇರಿ ಕೆಲಸ, ಬೋಟಿಗೆ ಮಂಜುಗಡ್ಡೆ, ಬಲೆ ತುಂಬಿಸುವ ಕಾಯಕದಲ್ಲಿ ತೊಡಗಿದ್ದಾರೆ. ಮೊದಲ ಹಂತದಲ್ಲಿ ಬಹುದಿನ ಮೀನುಗಾರಿಕೆ ಮಾಡುವ ಟ್ರಾಲ್‌ಬೋಟ್‌ಗಳು ತೆರಳಲಿದ್ದು ಆ ಬಳಿಕ ಕಡಿಮೆ ಅವಧಿಯ ಮೀನುಗಾರಿಕೆ ಮಾಡುವ ಇತರ ಬೋಟ್‌ಗಳು ತೆರಳುತ್ತದೆ. ನಾಡದೋಣಿ ಮತ್ತು ಯಾಂತ್ರಿಕ ಮೀನುಗಾರರ ಒಳಒಪ್ಪಂದದ ಅನ್ವಯವಾಗಿ ಮಲ್ಪೆ ಬಂದರಿನ ಮಾರುಕಟ್ಟೆಯಲ್ಲಿ ಆ. 11ರಿಂದ ಯಾಂತ್ರಿಕ ಮೀನುಗಾರಿಕೆಯ ವಾಹಿವಾಟುಗಳು ನಡೆಯುತ್ತವೆ.

Advertisement

ಸೊರಗಿದ 
ನಾಡದೋಣಿ ಮೀನುಗಾರಿಕೆ

ಈ ಬಾರಿ ನಾಡದೋಣಿ ಮೀನುಗಾರರಿಗೆ ಹೇಳಿಕೊಳ್ಳುವಂತಹ ಮೀನು ಸಿಕ್ಕಿಲ್ಲ. ಆರಂಭದಿಂದ ಕಾಪುವಿನಿಂದ ಕೋಡಿಬೆಂಗ್ರೆಯ ವರೆಗಿನ ಬಹುತೇಕ ಮಂದಿ ನಾಡದೋಣಿ ಮೀನುಗಾರರಿಗೆ ಸರಿಯಾದ ಪ್ರಮಾಣದಲ್ಲಿ ಮೀನು ಸಿಗದೆ ಬರಿಗೈಯಲ್ಲಿ ವಾಪಾಸಾದ ದಿನವೇ ಹೆಚ್ಚು. ಹೇರಳ ಮತ್ಸÂ ಸಂಪಾದನೆಯ ಕನಸನ್ನು ಹೊತ್ತು ಕಡಲಿಗಿಳಿದ ನಾಡದೋಣಿ ಮೀನುಗಾರರಿಗೆ ನಿರಾಶೆಯಾಗಿದೆ. ಈ ಬಾರಿ ಸಾಕಷ್ಟು ಮಳೆ ಇಲ್ಲದೆ, ನೆರೆನೀರು ಸಮುದ್ರ ಸೇರದೆಯೂ ಸಮುದ್ರದಲ್ಲಿ ಮೀನಿನ ಲಕ್ಷಣ ಕಂಡು ಬಂದಿಲ್ಲ. ಮಳೆಗಾಲದಲ್ಲಿ ಎರಡು ತಿಂಗಳಲ್ಲಿ ನಾಡದೋಣಿಗೆ ವಾತಾವರಣಕ್ಕೆ ಹೊಂದಿಕೊಂಡು ಸರಿಯಾದ ಮೀನುಗಾರಿಕೆ ಮಾಡಲು ಗರಿಷ್ಟ 20 ದಿನಗಳು ಮಾತ್ರ ಸಿಗುತ್ತದೆ ಎನ್ನುತ್ತಾರೆ ಮೀನುಗಾರರು. ಇದೀಗ ಕಳೆದ ಮೂರ್‍ನಾಲು ದಿನಗಳಿಂದ ಸಿಗಡಿಯಂತಹ ಉತ್ತಮ ಬಲೆ ಮೀನುಗಳು ನಾಡದೋಣಿಗಳ ಬಲೆಗೆ ಬಿದ್ದಿದ್ದರಿಂದ ಶೇ. 70-75ರಷ್ಟು ದೋಣಿಗಳಿಗೆ ಮಾಡಿದ ಸಾಲ ತೀರಿಸುವಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 50 ರಿಂದ 60ರಷ್ಟು ಮಾತ್ರ ಸಂಪಾದನೆಯಾಗಿದೆ ಎನ್ನುತ್ತಾರೆ ಮೀನುಗಾರರಾದ ಕೃಷ್ಣ 
ಸುವರ್ಣ ಅವರು.

ಮೂಲಸೌಕರ್ಯ  ಹೆಚ್ಚಿಸಬೇಕು
ಮಲ್ಪೆ ಬಂದರಿನಲ್ಲಿ ಬೋಟ್‌ಗಳ ಸಂಖ್ಯೆ ಹೆಚ್ಚಾದಂತೆ ಮೂಲ ಸೌಕರ್ಯಗಳು ಹೆಚ್ಚಾಗಬೇಕಾಗಿದೆ. ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು ಮತ್ತು ಹೆಚ್ಚುವರಿ ಶೌಚಾಲಯ ಅತೀ ಅಗತ್ಯವಿದೆ. ಮುಂಜಾನೆ 4 ಗಂಟೆಯಿಂದ ಮೀನುಗಾರಿಕೆ ಚಟುವಟಿಕೆಗಳು ಆರಂಭಗೊಳ್ಳುತ್ತಿದ್ದು, ದಿನನಿತ್ಯ ಸಾವಿರಾರು ಮಂದಿ ಮೀನುಗಾರಿಕಾ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಈಗಿರುವ ಶೌಚಾಲಯ ಸಾಲದಾಗಿದ್ದು, ಹೆಚ್ಚುವರಿ ಶೌಚಾಲಯದ ಅಗತ್ಯವಿದೆ. ಇದ್ದ ಶೌಚಾಲಯವೂ ಸ್ವಚ್ಚತೆಯಿಂದ ದೂರವಾಗಿದೆ. ಬಂದರಿನಲ್ಲಿರುವ ಮೂರು ಹರಾಜು ಪ್ರಾಂಗಣದಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಾಗಿದೆ.
-ಸತೀಶ್‌ ಕುಂದರ್‌, ಅಧ್ಯಕ್ಷರು ಮಲ್ಪೆ ಮೀನುಗಾರರ ಸಂಘ

ಆ. 7ರಂದು ಸಮುದ್ರಪೂಜೆ
ಪ್ರತಿವರ್ಷದಂತೆ ನಡೆಯುವ ಸಮುದ್ರಪೂಜೆ ಈ ಬಾರಿ ಆ. 7ರಂದು ವಡಭಾಂಡೇಶ್ವರ ಸಮುದ್ರತೀರದಲ್ಲಿ ನಡೆಯಲಿದೆ. ಮಲ್ಪೆ ಬಂದರು ವ್ಯಾಪ್ತಿಯ ಎಲ್ಲಾ ಮೀನುಗಾರರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶ್ರದ್ದಾಭಕ್ತಿಯಿಂದ ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿಯೊಬ್ಬರಿಗೂ ಸಮುದ್ರಕ್ಕೆ ಹಾಲೆರೆಯುವ ಅವಕಾಶವನ್ನು ಕಲ್ಪಿಸಲಾಗುತ್ತದೆ ಎಂದು ಮೀನುಗಾರರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌ ತಿಳಿಸಿದ್ದಾರೆ.

ಮಾರಿ ಹಬ್ಬ ಮುಗಿಸಿ
ಕಳೆದ ಕೆಲವು ವರ್ಷಗಳಿಂದ ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಮೀನುಗಾರರು ಸ್ಥಳೀಯವಾಗಿ ಕಲ್ಮಾಡಿ ಭಗವತೀ ಮಾರಿಕಾಂಭ ದೇವಿಯ ಮಾರಿಹಬ್ಬವನ್ನು ಮುಗಿಸಿಯೇ ಮೀನುಗಾರಿಕೆ ತೆರಳುವುದು ಸಾಮಾನ್ಯ.  ಅದರಂತೆ ಜು. 30ರಂದು ಈ ಮಾರಿಹಬ್ಬ ನಡೆದಿದ್ದು ಮೀನುಗಾರರೆಲ್ಲರು ಶ್ರೀ ಮಾರಿಕಾಂಭ ದೇವಿಗೆ ಪೂಜೆಯಲ್ಲಿ ಸಲ್ಲಿಸಿ ಪ್ರಾರ್ಥಿಸಿ ಕೊಂಡಿದ್ದಾರೆ. ಅಂತೆಯೇ ಮಲ್ಪೆ ಬಂದರಿನಲ್ಲಿ ಯಾವುದೇ ಅವಘಡ, ಪ್ರಾಣಾಪಾಯ ನಡೆಯದಂತೆ ಸಂಜೀವಿನಿ ಮೃತ್ಯುಂಜಯ ಹೋಮವನ್ನು ನಡೆಸಲಾಗುತ್ತಿದ್ದು ಆ. 1 ರಂದು ಬಂದರಿನ ಹರಾಜು ಪ್ರಾಂಗಣದಲ್ಲಿ ನಡೆಯಲಿದೆ.

ಕಳೆದ ಸಾಲಿನ ಯಾಂತ್ರಿಕ ಮೀನುಗಾರಿಕೆ ಮತ್ತು ಈ ಸಲದ ನಾಡದೋಣಿ ಮೀನುಗಾರಿಕೆ ಎರಡೂ  ಮೀನುಗಾರರಿಗೆ ನಿರಾಸೆ ಮೂಡಿಸಿದೆ. ಹಾಗಾಗಿ ಮುಂದಿನ ಯಾಂತ್ರಿಕ ಮೀನುಗಾರಿಕೆ ಋತು ಆಶಾದಾಯಕವಾಗಿರುತ್ತದೆ ಎನ್ನುವುದು ಹಿರಿಯ ಮೀನುಗಾರರ ಲೆಕ್ಕಾಚಾರವಾಗಿದೆ. ಈ ಲೆಕ್ಕಚಾರ, ಆತಂಕ ಮತ್ತು ಹೊಸ ನಿರೀಕ್ಷೆಯೊಂದಿಗೆ ಮೀನುಗಾರರು ಮೀನು ಬೇಟೆಗೆ ಸಜ್ಜಾಗಿದ್ದಾರೆ.

ಮೀನುಗಾರರ ಆತಂಕ
ಕಳೆದ 5-6 ವರ್ಷಕ್ಕೆ ಹೋಲಿಸಿದರೆ ಕಳೆದ ಸಾಲಿನ ಮೀನುಗಾರಿಕೆಯ ಫಲಿತಾಂಶ ಮೀನುಗಾರರನ್ನು ಚಿಂತೆಗೆ ಈಡು ಮಾಡಿತ್ತು. ಸರಿಯಾದ ಪ್ರಮಾಣದಲ್ಲಿ ಮೀನಿನ ಲಭ್ಯತೆ ಇಲ್ಲದೆ ಸಿಕ್ಕಿದ ಮೀನಿಗೆ ಯೋಗ್ಯ ದರವೂ ಸಿಗದೆ ಅರ್ಥಿಕ ಗಳಿಕೆಯ ಮೇಲೆ ತೀವ್ರ ಪರಿಣಾಮ ಬೀರಿ ಸಮಸ್ಯೆಯನ್ನು ಎದುರಿಸುವಂತಾಗಿತ್ತು. ಈ ಮಧ್ಯೆ ಡಿಸೇಲ್‌ ದರ ಹೆಚ್ಚಳವೂ ಮೀನುಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಬೋಟಿನ ಬಲೆ, ರೋಪ್‌, ಎಂಜಿನ್‌ ಹಾಗೂ ಇನ್ನಿತರ ಬಿಡಿಭಾಗಗಳ ಮೇಲಿನ ತೆರಿಗೆಯ ಹೆಚ್ಚಳದಿಂದ ಶೇ. 80 ಬೋಟ್‌ ಮಾಲಕರು ನಷ್ಟವನ್ನು ಅನುಭವಿಸಿದ್ದಾರೆ. ಹೀಗಾಗಿ ಈ ವರ್ಷದ ಉತ್ಪಾದನೆ ಹೇಗೋ ಎಂಬ ಆತಂಕ ಮೀನುಗಾರರಲ್ಲಿ ಆರಂಭದಲ್ಲೇ ಮನೆಮಾಡಿದೆ.

– ನಟರಾಜ್‌ ಮಲ್ಪೆ

ಚಿತ್ರ: ಸ್ಟುಡಿಯೋ  ಥರ್ಡ್‌ ಐ, ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next