Advertisement

ಅಂಬೆಜೂಗನಲ್ಲಿ ಮತ್ಸ್ಯಬೇಟೆ ಸಂಭ್ರಮ

04:12 PM May 16, 2019 | Team Udayavani |

ಕಾರವಾರ: ನದಿಯ ಹಿನ್ನೀರಿನಲ್ಲಿ ನಡೆಯುವ ಅಪರೂಪದ ಮತ್ಸ್ಯಬೇಟೆಯ ಸಾಂಪ್ರದಾಯಿಕ ಜಾತ್ರೆಗೆ ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಅಂಬೆಜೂಗ ಮಜಿರೆ ಸಾಕ್ಷಿಯಾಯಿತು.

Advertisement

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನದಿಯ ಹಿನ್ನೀರಿನಲ್ಲಿ ವರ್ಷಕ್ಕೆ ಒಂದು ದಿನದ ಕೆಲ ಗಂಟೆಗಳ ಕಾಲ ನಡೆಯುವ ಈ ಮತ್ಸ್ಯಬೇಟೆಯಲ್ಲಿ ವಯಸ್ಸು, ಲಿಂಗ ಹಾಗೂ ಜಾತಿ ಭೇದವಿಲ್ಲದೇ ಜನರು ಪಾಲ್ಗೊಳ್ಳುವುದು ವಿಶೇಷ. ಬುಧವಾರ ಕಿನ್ನರದ ಅಂಬೆಜೂಗ ಹಿನ್ನೀರಿನಲ್ಲಿ ನಡೆದ ಮತ್ಸ್ಯಬೇಟೆಯಲ್ಲಿ ನೂರಾರು ಜನ ಯುವಕರು, ಮಹಿಳೆಯರು, ಮಕ್ಕಳು ಭಾಗವಹಿಸಿ ಮೀನು ಹಿಡಿದರು. ಮೂರು ಗಂಟೆಯ ಈ ಉತ್ಸವ ಬೆಳಗ್ಗೆ 11ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 1ಕ್ಕೆ ಮುಕ್ತಾಯವಾಯಿತು.

ಗೆದ್ದ ಸಂಭ್ರಮಕ್ಕೆ ಬೇಟೆ ಹಬ್ಬ: ಬ್ರಿಟಿಷರು ಕಾರವಾರವನ್ನು ಆಳಿದ ಕಾಲವದು. ಸುಮಾರು 200 ವರ್ಷಗಳ ಹಿಂದೆ ಆರಂಭವಾದ ಈ ಮತ್ಸ್ಯಬೇಟೆಯ ಸಂಭ್ರಮಕ್ಕೆ ಮಾತ್ರ ಹಲವು ಕರಾರು ಕಟ್ಟಳೆಗಳಿವೆ. ಕೆನರಾ ಗೆಜೆಟಿಯರ್‌ ಪ್ರಕಾರ 200 ವರ್ಷಗಳ ಹಿಂದೆ ಬ್ರಿಟಿಷ್‌ ರೆಜಿಮೆಂಟಿನ ವಿರುದ್ಧ ಕಿನ್ನರ ಭಾಗದ ಜನರು ವಿಜಯ ಸಾಧಿಸಿದ್ದರು. ಸಣ್ಣದಾಗಿದ್ದ ಬ್ರಿಟಿಷ್‌ ರೆಜಿಮೆಂಟ್ನ್ನು ಈ ಭಾಗದ ಒಂದು ಗುಂಪು ಪ್ರಬಲವಾಗಿ ವಿರೋಧಿಸಿತ್ತಲ್ಲದೇ, ಕಿನ್ನರ ಭಾಗವನ್ನು ಬ್ರಿಟಿಷರ ಹಿಡಿತಕ್ಕೆ ಬಿಟ್ಟುಕೊಡಲು ನಿರಾಕರಿಸಿತ್ತು. ಬ್ರಿಟಿಷ್‌ ರೆಜಿಮೆಂಟಿನ ವಿರುದ್ಧ ಗೆಲುವಿನ ಸಂಭ್ರಮಕ್ಕೆ ಮತ್ಸ್ಯಬೇಟೆ ಆರಂಭವಾಯಿತು. ವರ್ಷಕ್ಕೆ ಒಮ್ಮೆ ವಿಜಯೋತ್ಸವದ ಹೆಸರಲ್ಲಿ ನಡೆಯುತ್ತಿದ್ದ ಬೇಟೆ ಮುಂದೆ ಸಾಂಪ್ರದಾಯಿಕ ಆಚರಣೆಯಾಯಿತು. ಬ್ರಿಟಿಷ್‌ ಅಧಿಕಾರಿ ಈ ಸೋಲಿನ 5 ವರ್ಷಗಳ ನಂತರ ಮತ್ತೆ ಕಿನ್ನರ ಭಾಗವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ. ಆದರೆ ಸಂಭ್ರಮದ ಮತ್ಸ್ಯಬೇಟೆಯ ಸಂಪ್ರದಾಯವನ್ನು ಪ್ರೋತ್ಸಾಹಿಸಿದ. ಮತ್ಸ್ಯಬೇಟೆಯ ಸ್ಪರ್ಧೆಯನ್ನೇ ಏರ್ಪಡಿಸಿದ. ಅದು ಎರಡು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಬ್ರಿಟಿಷರ ನಂತರವೂ ಮತ್ಸ್ಯಬೇಟೆ ಮುಂದುವರಿಯಿತು. ಆದರೆ ಅಧಿಕಾರಿಗಳನ್ನು ಕರೆದು ಅವರ ಸಮ್ಮುಖದಲ್ಲಿ ಬೇಟೆ ಮಾಡುವ ಬದಲು ಗ್ರಾಮಸ್ಥರೇ ವರ್ಷದ ಒಂದು ದಿನ ಮತ್ಸ್ಯಬೇಟೆ ಮಾಡುತ್ತಾ ಬಂದಿದ್ದಾರೆ. ಅದು ಈಗಲೂ ಮುಂದುವರಿದಿದೆ.

ಕಾಳಿ ನದಿ ಹಿನ್ನೀರನಲ್ಲಿ ವರ್ಷಪೂರ್ತಿ ಮತ್ಸ್ಯಬೇಟೆಗೆ ಅವಕಾಶವಿಲ್ಲ. ಅಂಬೆಜೂಗ ಎಂಬಲ್ಲಿ ನದಿಯ ಹಿನ್ನೀರನ್ನು ಕಿಂಡಿ ಅಣೆಕಟ್ಟಿನಲ್ಲಿ ಸಂಗ್ರಹಿಸಿಟ್ಟು, ಮೀನುಗಳು ಬೆಳೆಯಲು ಅವಕಾಶ ನೀಡಲಾಗುತ್ತದೆ. ವರ್ಷದ ಮೇ ತಿಂಗಳಲ್ಲಿ ಮತ್ಸ್ಯಬೇಟೆ ಕೆಲ ಗಂಟೆಗಳ ಕಾಲ ನಡೆಯುತ್ತದೆ. ಮತ್ತೆ ವರ್ಷಕಾಲ ಮೀನು ಬೇಟೆ ಇಲ್ಲಿ ನಿಷೇಧ.

ಮತ್ಸ್ಯಬೇಟೆಯಲ್ಲಿ ಸ್ಥಳೀಯರು: ಹಿನ್ನೀರಿನ ಮತ್ಸ್ಯಬೇಟೆಯಲ್ಲಿ ಹೆಚ್ಚಾಗಿ ಸ್ಥಳೀಯರು, ಸುತ್ತಮುತ್ತ ಗ್ರಾಮಸ್ಥರು ಪಾಲ್ಗೊಳ್ಳುತ್ತಾರೆ. ಜಾತಿ, ಲಿಂಗ ಭೇದವಿಲ್ಲದೇ ನಡೆಯುವ ಈ ಮತ್ಸ್ಯಬೇಟೆ ಸೌಹಾರ್ದತೆಯನ್ನು ಸ್ಥಳೀಯರಲ್ಲಿ ಬೆಸೆದಿದೆ. ಮೋಜಿನ ಈ ಬೇಟೆಯಲ್ಲಿ ಮಡ್ಲೆ, ಶೆಟ್ಲಿ, ಕುರುಡೆ, ನೊಗ್ಲಿ ಸೇರಿದಂತೆ ನದಿಯಲ್ಲಿ ಬೆಳೆಯುವ ಮೀನುಗಳು ಹೆಚ್ಚಾಗಿ ದೊರೆಯುತ್ತವೆ. ಮತ್ಸ್ಯಬೇಟೆ ನೋಡಲು ಮತ್ತು ಮೀನು ಕೊಳ್ಳಲು ಕಾರವಾರದಿಂದ ಆಸಕ್ತರು ತೆರಳುವುದು ವಾಡಿಕೆ.

ಅರ್ಧ ಪಾಲು ದೇವರಿಗೆ

ಮತ್ಸ್ಯಬೇಟೆಯಲ್ಲಿ ಪಾಲುಗೊಂಡವರು ಹಿಡಿದ ಅರ್ಧದಷ್ಟು ಮೀನನ್ನು ಅಲ್ಲಿನ ಗಿಂಡಿದೇವಿ ದೇವಸ್ಥಾನಕ್ಕೆ ನೀಡಬೇಕು. ದೇವಸ್ಥಾನ ಕಮಿಟಿಯವರು ಬೇಟೆಗಾರರು ನೀಡಿದ ಮೀನನ್ನು ಸಾರ್ವಜನಿಕರಿಗೆ ಹರಾಜು ಹಾಕುತ್ತಾರೆ. ಹರಾಜಿನಲ್ಲಿ ಬಂದ ಹಣವನ್ನು ದೇವಸ್ಥಾನ ಕಾರ್ಯಗಳಿಗೆ ಬಳಸಲಾಗುತ್ತದೆ. ಹರಾಜಿನಲ್ಲಿ ಕೊಂಡ ಮೀನುಗಳನ್ನು ಜನರು ಮನೆಗೆ ಕೊಂಡೊಯ್ದು ರುಚಿ ರುಚಿಯಾದ ಅಡುಗೆ ತಯಾರಿಸಿ, ಊಟ ಮಾಡುತ್ತಾರೆ. ನಾವು ಮತ್ತು ನಮ್ಮ ಕುಟುಂಬದವರು, ಅಕ್ಕಪಕ್ಕದ ನಿವಾಸಿಗಳು ಮತ್ಸ್ಯಬೇಟೆಯಲ್ಲಿ ಭಾಗವಹಿಸುತ್ತೇವೆ. ಎಲ್ಲರೂ ವರ್ಷಕ್ಕೆ ಒಮ್ಮೆ ಸೇರಲು ಈ ಸಾಂಪ್ರದಾಯಿಕ ಬೇಟೆ ಸಹಕಾರಿಯಾಗಿದೆ. ಸರ್ಕಾರ ಈ ಮತ್ಸ್ಯಬೇಟೆಯನ್ನು ಪ್ರೋತ್ಸಾಹಿಸಬೇಕು.
•ಪ್ರಮೋದ್‌ ಪಡ್ತಿ, ಕಿನ್ನರ
Advertisement
Advertisement

Udayavani is now on Telegram. Click here to join our channel and stay updated with the latest news.

Next