ಪಣಜಿ: ಜೂನ್ 1ರಿಂದ ಜುಲೈ 31 ರವರೆಗೆ ಗೋವಾದಲ್ಲಿ ಮೀನುಗಾರಿಕೆಗೆ ನಿಷೇಧ ಹೇರಲಾಗುವುದರಿಂದ ಮೀನುಗಾರರು ದಡಕ್ಕೆ ವಾಪಸ್ಸಾಗಿದ್ದು, ಬಲೆಗಳನ್ನು ಒಂದೆಡೆ ಸೇರಿಸುವಲ್ಲಿ ಮೀನುಗಾರರು ನಿರತರಾಗಿದ್ದಾರೆ. ಮೀನುಗಾರರು ಮತ್ತು ಟ್ರಾಲರ್ ಮಾಲೀಕರು ಬಲೆಗಳು ಮತ್ತು ಮೀನುಗಾರಿಕಾ ಸಾಧನಗಳನ್ನು ಮುಚ್ಚಲು ಪ್ರಾರಂಭಿಸಿದ್ದಾರೆ.
ಆಳ ಸಮುದ್ರಕ್ಕೆ ಮೀನು ಹಿಡಿಯಲು ಹೋಗುವ ದೊಡ್ಡ ಟ್ರಾಲರ್ ಗಳು ಮತ್ತು ದೋಣಿಗಳನ್ನು ಸರ್ಕಾರ ಪ್ರತಿ ವರ್ಷ ಜೂನ್ 1ರಿಂದ ಜುಲೈ 31 ರವರೆಗೆ ನಿಷೇಧಿಸುತ್ತದೆ. ಜೂನ್ 1ರಿಂದ ಜುಲೈ 31 ರವರೆಗಿನ ಎರಡು ತಿಂಗಳ ಅವಧಿಯಲ್ಲಿ ಸಮುದ್ರವು ಪ್ರಕ್ಷುಬ್ಧವಾಗಿರುತ್ತದೆ ಆದ್ದರಿಂದ, ಮತ್ತು ಈ ಸಮಯವು ಸಂತಾನೋತ್ಪತ್ತಿ ಸಮಯವಾಗಿರುವುದರಿಂದ ಇದನ್ನು ಗಣನೆಗೆ ತೆಗೆದುಕೊಂಡು, ಈ ಸಮಯದಲ್ಲಿ ಮೀನುಗಾರಿಕೆಗೆ ನಿಷೇಧವನ್ನು ಹೇರಲಾಗುತ್ತದೆ.
ಈ ಕುರಿತಂತೆ ಮಾಲಿಮ್ ಜೆಟ್ಟಿಯಲ್ಲಿ ಕೆಲವು ಮೀನುಗಾರರನ್ನು ಪ್ರಶ್ನಿಸಿದಾಗ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೀನುಗಾರಿಕೆ ಉತ್ತಮವಾಗಿದೆ ಎಂದು ಹೇಳಿದರು. ಎರಡು ತಿಂಗಳ ಕಾಲ ಮೀನುಗಾರಿಕೆ ಬಂದ್‍ನಲ್ಲಿ ಏನು ಮಾಡುತ್ತೀರಿ ಎಂದು ಮೀನುಗಾರರನ್ನು ಕೇಳಿದಾಗ, ಟ್ರಾಲರ್ ಮಾಲೀಕರು ಟ್ರಾಲರ್‍ಗಳು ಮತ್ತು ದೋಣಿಗಳ ದುರಸ್ತಿ ಮತ್ತು ನಿರ್ವಹಣೆಯನ್ನು ಮಾಡಲಾಗುತ್ತದೆ ಎಂದು ಹೇಳಿದರು. ಅಲ್ಲದೆ, ಟ್ರಾಲರ್‍ಗಳಲ್ಲಿ ಕೆಲಸ ಮಾಡುವ ಮೀನುಗಾರರು, ವಲಸೆ ಕಾರ್ಮಿಕರು ತಮ್ಮ ಮೂಲ ಸ್ಥಳಕ್ಕೆ (ಊರಿಗೆ) ಹಿಂದಿರುಗುತ್ತಾರೆ ಮತ್ತು ಎರಡು ತಿಂಗಳ ಕಾಲ ವಿಶ್ರಾಂತಿ ಪಡೆಯುತ್ತಾರೆ. ಎರಡು ತಿಂಗಳ ನಂತರ ಗೋವಾಕ್ಕೆ ವಾಪಸ್ಸಾಗುತ್ತಾರೆ ಎಂದರು.
ಮೀನುಗಾರಿಕಾ ನಿರ್ಬಂಧಿತ ಅವಧಿ 61 ದಿನಗಳು
61 ದಿನಗಳ ನಿಷೇಧದ ಅವಧಿಯಲ್ಲಿ, ಯಾಂತ್ರಿಕ ಸಾಧನಗಳನ್ನು ಹೊಂದಿದ ಹಡಗುಗಳಿಂದ ಮೀನುಗಾರಿಕೆ ಮತ್ತು ಟ್ರಾಲ್-ನೆಟ್ ಮತ್ತು ಪರ್ಸ್-ಸೀನ್ ಬಲೆಗಳಿಂದ ಮೀನುಗಾರಿಕೆಯನ್ನು ನಿಷೇಧಿಸಲಾಗುವುದು ಎಂದು ಮೀನುಗಾರಿಕೆ ಇಲಾಖೆ ತಿಳಿಸಿದೆ. ಈ ಕುರಿತಂತೆ ಮೀನುಗಾರಿಕಾ ಇಲಾಖೆಯ ನಿರ್ದೇಶಕಿ ಡಾ.ಶಾಮಿಲಾ ಮೊಂತೆರೊ ಆದೇಶ ಹೊರಡಿಸಿದ್ದಾರೆ.
ಈ ಕುರಿತಂತೆ ಬಾಣಾವಲಿ ಮೀನುಗಾರ ಪಿಲೆ ಫರ್ನಾಂಡಿಸ್ ಪ್ರತಿಕ್ರಿಯೆ ನೀಡಿ, ಮುಂಗಾರು ಸಮೀಪಿಸುತ್ತಿರುವುದರಿಂದ ರಾಜ್ಯ ಸರ್ಕಾರದ ನಿಯಮಾವಳಿಗಳ ಪ್ರಕಾರ ಸಮುದ್ರ ಮೀನುಗಾರಿಕೆಯನ್ನು 61 ದಿನಗಳ ಕಾಲ ಮುಚ್ಚಲಾಗುತ್ತದೆ. ಇದು ಪ್ರತಿ ವರ್ಷವೂ ನಡೆಯುತ್ತದೆ, ಅದರಂತೆ, ನಾವು ಈ ನಿಯಮಗಳನ್ನು ಅನುಸರಿಸುತ್ತೇವೆ. ಏಕೆಂದರೆ ಈ ಸಂದರ್ಭದಲ್ಲಿ ಸಮುದ್ರವು ಪ್ರಕ್ಷುಬ್ಧವಾಗಿರುತ್ತದೆ, ಆಳ ಸಮುದ್ರ ಮೀನುಗಾರಿಕೆ ಅಪಾಯಕಾರಿಯಾಗಿರುತ್ತದೆ ಎಂದರು.
ಇದನ್ನೂ ಓದಿ: UP ಇಬ್ಬರು ಸ್ಮಗ್ಲರ್ ಗಳ ಬಂಧನ; 2.5 ಕೋಟಿ ರೂ. ಡ್ರಗ್ಸ್ ವಶ