ಉಡುಪಿ: ಮಾಹೆ ವಿಶ್ವವಿದ್ಯಾ ನಿಲಯದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರವು ಸಂಶೋಧಕ, ಸಾಹಿತಿ ತಾಳ್ತಜೆ ಕೇಶವ ಭಟ್ಟ ಅವರ ಹೆಸರಿನಲ್ಲಿ ನೀಡುವ “ಕೇಶವ ಪ್ರಶಸ್ತಿ 2022, 2023′ ಹಾಗೂ ಕವಿ ಕಡೆಂಗೋಡ್ಲು ಶಂಕರ ಭಟ್ಟರ ಹೆಸರಿನಲ್ಲಿ ನೀಡುವ “ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ ಪ್ರದಾನ ಶನಿವಾರ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಿತು.
ಡಾ| ಹರಿಕೃಷ್ಣ ಭರಣ್ಯ ಅವರಿಗೆ 2022ನೇ ಸಾಲಿನ ಕೇಶವ ಭಟ್ಟ ಪ್ರಶಸ್ತಿ ಮತ್ತು ಡಾ| ಎನ್.ಆರ್. ನಾಯಕ್ ಅವರಿಗೆ 2023ನೇ ಸಾಲಿನ ಕೇಶವ ಭಟ್ಟ ಪ್ರಶಸ್ತಿಯನ್ನು ಹಾಗೂ ಶಂಕರ ಸಿಹಿಮೊಗ್ಗೆ ಅವರಿಗೆ ಕಡೆಂಗೋಡ್ಲು ಕಾವ್ಯಪ್ರಶಸ್ತಿ -2023ನ್ನು ಪ್ರದಾನಿಸ ಲಾಯಿತು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಡಾ| ತಾಳ್ತಜೆ ವಸಂತ ಕುಮಾರ್ ಪ್ರಸ್ತಾವನೆಗೈದರು. ಡಾ| ಜಿ. ಶಂಕರ್ ಸ.ಮ.ಪ್ರ.ದ. ಕಾಲೇಜು ಮತ್ತು ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ| ರವಿರಾಜ್ ಶೆಟ್ಟಿ ಅವರು ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿ ವಿಜೇತ ಕವನ ಸಂಕಲನ “ಇರುವೆ ಮತ್ತು ಗೋಡೆ’ಯ ಕೃತಿ ಪರಿಚಯ ಮಾಡಿದರು. ಕೆಎಂಸಿ ಡೀನ್ ಡಾ| ಪದ್ಮರಾಜ ಹೆಗ್ಡೆ ಅವರು ಕಡೆಂಗೋಡ್ಲು ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು.
ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಡಾ| ಪ್ರಮೀಳಾ ಮಾಧವ ಉಪನ್ಯಾಸ ನೀಡಿದರು. ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ| ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕ ರಾಘವೇಂದ್ರ ತುಂಗ ವಂದಿಸಿ, ನಿರೂಪಿಸಿದರು.