Advertisement

ಸಮುದ್ರ ಸಹಜ ಸ್ಥಿತಿಗೆ: ಮೀನುಗಾರಿಕೆಗೆ ತೆರಳಿದ ಬೋಟುಗಳು

02:45 AM Aug 22, 2018 | Team Udayavani |

ಮಲ್ಪೆ: ಮಳೆಗಾಳಿಗೆ ಸಮುದ್ರ ಪ್ರಕ್ಷುಬ್ಧಗೊಂಡು ಕಳೆದ 10 ದಿನಗಳಿಂದ ಸ್ಥಗಿತಗೊಂಡಿದ್ದ ಮೀನುಗಾರಿಕೆ ಮತ್ತೆ ಆರಂಭಗೊಂಡಿದೆ. ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ್ದ ಯಾಂತ್ರೀಕೃತ ಬೋಟ್‌ಗಳು ಕಡಲಿಗಿಳಿಯಲು ಸಿದ್ಧವಾಗುತ್ತಿವೆ. ಸೋಮವಾರ ಮತ್ತು ಮಂಗಳವಾರ ಮಲ್ಪೆ ಬಂದರಿನಿಂದ ಸುಮಾರು 250ಕ್ಕೂ ಅಧಿಕ ಆಳಸಮುದ್ರ ಬೋಟುಗಳು, ಸುಮಾರು 40ರಷ್ಟು ಪರ್ಸೀನ್‌ ಬೋಟ್‌ಗಳು ಕಡಲಿಗಿಳಿದಿವೆ. ತ್ರಿಸೆವೆಂಟಿ, ಸಣ್ಣಟ್ರಾಲ್‌ ಬೋಟ್‌ ಗಳು ಇನ್ನಷ್ಟೇ ತೆರಳಬೇಕಿದೆ.

Advertisement

20 ದಿನ ಮುಗಿದು ಹೋಯಿತು
ಜೂನ್‌ ಮತ್ತು ಜುಲೈ ತಿಂಗಳು ಯಾಂತ್ರಿಕ ಮೀನುಗಾರಿಕೆಗೆ ನಿಷೇಧವಿದ್ದುದರಿಂದ ಆಳ ಸಮುದ್ರ ಮೀನುಗಾರಿಕೆ ಸ್ಥಗಿತಗೊಂಡಿತ್ತು. ಈ ಬಾರಿ ಕರಾವಳಿಯಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ಮೀನುಗಳು ಹೇರಳವಾಗಿ ಸಿಗುವ ನಿರೀಕ್ಷೆಯೂ ಮೀನುಗಾರರಲ್ಲಿ ಇತ್ತು. ನಿಷೇಧ ತೆರವಾಗುತ್ತಿದ್ದಂತೆ ಮೀನುಗಾರರು ಬಹಳ ಉತ್ಸುಕತೆಯಿಂದ ಮೀನುಗಾರಿಕೆಗೆ ತೆರಳಿದ್ದರು. ಆದರೆ ಒಂದೆರಡು ದಿನ ಕಳೆಯುವಷ್ಟರಲ್ಲೆ ಮತ್ತೆ ಗಾಳಿಮಳೆ ಜೋರಾಗಿ ಸಮುದ್ರದ ಅಲೆಗಳ ರಭಸಕ್ಕೆ ಮೀನುಗಾರಿಕೆ ನಡೆಸಲು ಸಾಧ್ಯವಾಗದೇ ಕರಾವಳಿಯಾದ್ಯಂತ ಎಲ್ಲ ಬೋಟು ದಡ ಸೇರಿ ಲಂಗರು ಹಾಕುವಂತಾಯಿತು. ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ಆಳಸಮುದ್ರ ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಧಿಕಾರಿಗಳು, ಮೀನುಗಾರಿಕೆ ಇಲಾಖೆ ಮೀನುಗಾರರಿಗೆ ಸೂಚನೆಯನ್ನು ನೀಡಿತ್ತು. ಈ ಕಾರಣಗಳಿಂದ ಋತು ಆರಂಭದ 20 ದಿನ ಈಗಾಗಲೇ ಮುಗಿದು ಹೋಗಿದೆ.

ಹೇರಳ ಮೀನು ಲಭ್ಯತೆ ನಿರೀಕ್ಷೆ 
ಕಳೆದ ಬಾರಿಗಿಂತ ಈ ಬಾರಿ ಉತ್ತಮ ಮಳೆಯಾಗಿದೆ. ಸಮುದ್ರದ ವಾತಾವರಣ ಬಹುತೇಕ ತಿಳಿಯಾಗಿಯೇ ಇದೆ. ಇದರಿಂದ ಮೀನು ಹೇರಳವಾಗಿ  ಸಿಗಬಹುದೆಂಬ ನಿರೀಕ್ಷೆಯಲ್ಲಿ ಮೀನುಗಾರರಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿಯೂ ತಾಜಾ ಮೀನು ಲಭ್ಯವಾಗಲಿದೆ. ದುಬಾರಿಯಾದ ಮೀನಿನ ದರ ಕಡಿಮೆಯಾಗುವ ನಿರೀಕ್ಷೆ ಇದೆ.

ಕೈಕೊಟ್ಟ ಹವಾಮಾನ
ಮೀನುಗಾರಿಕೆ ಆರಂಭವಾಗುವ ಮುನ್ನವೇ ಹವಾಮಾನ ಕೈಕೊಟ್ಟಿದೆ. ಇದರಿಂದ ಸುಮಾರು 20 ದಿನದಿಂದ ಕೆಲಸವಿಲ್ಲದೆ ಆರ್ಥಿಕ ಹೊಡೆತ ಉಂಟಾಗಿತ್ತು.  ಇದೀಗ ಮೀನುಗಾರಿಕೆಗೆ ಪೂರಕವಾದ ವಾತಾವರಣ ಇದೆ. ಕಡಲಿಗಿಳಿಯಲು ಸಜ್ಜಾಗಿದ್ದೇವೆೆ.
– ಪ್ರದೀಪ್‌ ಟಿ. ಸುವರ್ಣ, ಬೊಟ್ಟಲ

ಶೇ.30ರಷ್ಟು ದೋಣಿಗಳು ಕಡಲಿಗೆ
ಕಳೆದ 10ದಿವಸಗಳಿಂದ ಮೀನುಗಾರಿಕೆ ಸ್ಥಗಿತಗೊಂಡಿತ್ತು. ಇದೀಗ ಸಮುದ್ರ ಕೊಂಚ ಸಹಜ ಸ್ಥಿತಿಗೆ ತಲುಪುತ್ತಿದೆ. ಇದರಿಂದಾಗಿ ಎರಡು ದಿನದಲ್ಲಿ ಸುಮಾರು ಶೇ. 30ರಷ್ಟು ದೋಣಿಗಳು ಕಡಲಿಗಿಳಿದಿವೆ. ನಾಳೆಯಿಂದ ಉಳಿದ ಬೋಟ್‌ಗಳು ಮೀನುಗಾರಿಕೆಗೆ ತೆರಳುವ ಸಾಧ್ಯತೆ ಇದೆ.
– ಸತೀಶ್‌ ಕುಂದರ್‌, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

Advertisement
Advertisement

Udayavani is now on Telegram. Click here to join our channel and stay updated with the latest news.

Next