Advertisement

ಸಮುದ್ರ ಮಧ್ಯೆ ಎಂಜಿನ್‌ ಕೆಟ್ಟು  ನಿಂತ 2 ಬೋಟ್‌ 

11:48 AM Aug 14, 2018 | |

ಮಲ್ಪೆ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಎರಡು ಬೋಟುಗಳ ಎಂಜಿನ್‌ ಕೈ ಕೊಟ್ಟಿದ್ದರಿಂದ ಸಮುದ್ರ ಮಧ್ಯೆ ಅಪಾಯದಲ್ಲಿವೆ. ವಿಶ್ವಾಸ್‌ ಮತ್ತು ಲಕ್ಷ್ಮೀ ಜನಾರ್ದನ್‌ ಎಂಬ ಹೆಸರಿನ ಎರಡು ಆಳಸಮುದ್ರ ಬೋಟುಗಳು ಅಪಾಯಕ್ಕೆ ಸಿಲುಕಿದ್ದು ಒಂದು ಸುರತ್ಕಲ್‌ ಸಮುದ್ರ ವ್ಯಾಪ್ತಿಯಲ್ಲಿ, ಇನ್ನೊಂದು ಭಟ್ಕಳ ಸಮುದ್ರ ವ್ಯಾಪ್ತಿಯಲ್ಲಿವೆ.

Advertisement

ಮೀನುಗಾರರು ಸಂಜೆ ವಯರ್‌ಲೆಸ್‌ ಮೂಲಕ ಮಲ್ಪೆ ಕಂಟ್ರೋಲ್‌ ರೂಂಗೆ ಮತ್ತು ಬೋಟ್‌ ಮಾಲಕರಿಗೆ ಮಾಹಿತಿ ನೀಡಿ ಸಹಾಯ ಯಾಚಿಸಿದ್ದಾರೆ.ವಿಶ್ವಾಸ್‌ ಬೋಟಿನಲ್ಲಿ 8 ಮಂದಿ ತಮಿಳುನಾಡಿನ ಮೀನುಗಾರರು ಮತ್ತು ಲಕ್ಷ್ಮೀ ಜನಾರ್ದನ ಬೋಟಿನಲ್ಲಿ 9 ಮಂದಿ ಭಟ್ಕಳ ಮೂಲದ ಮೀನುಗಾರು ಇದ್ದಾರೆ. ಬೋಟ್‌ ಮತ್ತು ಮೀನುಗಾರರನ್ನು ಸುರಕ್ಷಿತವಾಗಿ ಕರೆತರಲು ಕರಾವಳಿ ಕಾವಲು ಪಡೆ ಪೊಲೀಸರಿಗೆ, ಕೋಸ್ಟ್‌ ಗಾರ್ಡ್‌ಗೆ ಸಂಪರ್ಕಿಸಲಾಗಿದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ ಕುಂದರ್‌ ತಿಳಿಸಿದ್ದಾರೆ.

ರಕ್ಷಣೆಗೆ ಕೋಸ್ಟ್‌ಗಾರ್ಡ್‌ಗೆ ಮಾಹಿತಿ
ಸಮುದ್ರ ಮಧ್ಯೆ ಎರಡು ಬೋಟ್‌ಗಳು ಅಪಾಯದಲ್ಲಿರುವ ಬಗ್ಗೆ ಮಂಗಳೂರು ಕೋಸ್ಟ್‌ಗಾರ್ಡ್‌ ಡಿವಿಜನ್‌ ಮತ್ತು ಕಾರವಾರದ ಕೋಸ್ಟ್‌ ಗಾರ್ಡ್‌ ಹೆಡ್‌ಕಾÌಟರ್ಸ್‌ಗೆ ಮಾಹಿತಿ ನೀಡಲಾಗಿದೆ. ಕೋಸ್ಟ್‌ಗಾರ್ಡ್‌ ಪಡೆ ಈ ಬಗ್ಗೆ ತುರ್ತು ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ ಎಂದು ಕರಾವಳಿ ಪೊಲೀಸ್‌ ಪಡೆ ಡಿವೈಎಸ್‌ಪಿ ಜೈ ಶಂಕರ್‌ ಉದಯವಾಣಿಗೆ ತಿಳಿಸಿದ್ದಾರೆ. ನಮ್ಮಲ್ಲಿರುವ ಸಾಧನ ಮತ್ತು ಬೋಟ್‌ ಸಾಮರ್ಥ್ಯಗಳು ಸದ್ಯದ ಸಮುದ್ರದ ಪರಿಸ್ಥಿತಿ ನಿಭಾಯಿಸಲು ಮತ್ತು ಆಳ ಸಮುದ್ರದಲ್ಲಿ ಕಾರ್ಯಾಚರಣೆ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ನಾವು ಕೋಸ್ಟ್‌ ಗಾರ್ಡ್‌ ಮಾಹಿತಿ ನೀಡಿದ್ದು, ನಿರಂತರ ಸಂಪರ್ಕದಲ್ಲಿದ್ದೇವೆ ಎಂದವರು ತಿಳಿಸಿದ್ದಾರೆ. 

ಜೋರಾಗಿ ಬೀಸುತ್ತಿರುವ ಗಾಳಿ ಮಳೆಯಿಂದಾಗಿ ಸಮುದ್ರದ ಸ್ಥಿತಿ ಇನ್ನೂ ಒಂದೆರಡು ದಿನ ಇದೇ ರೀತಿ ಇರಲು ಸಾಧ್ಯವಿದೆ. ಹಾಗಾಗಿ ಮೀನುಗಾರರು ಯಾರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ವಹಿಸಬೇಕು. ಸಮುದ್ರ ಶಾಂತವಾಗುವವರೆಗೆ ಮೀನುಗಾರಿಕೆಗೆ ತೆರಳದಿದ್ದರೆ ಉತ್ತಮ. 
ಜೈ ಶಂಕರ್‌,  ಡಿವೈಎಸ್ಪಿ,  ಕರಾವಳಿ ಕಾವಲು ಪೊಲೀಸ್‌ ಪಡೆ

Advertisement

Udayavani is now on Telegram. Click here to join our channel and stay updated with the latest news.

Next