ಕಾಪು : ಮೀನುಗಾರಿಕೆಗೆ ತೆರಳಿದ ನಾಡದೋಣಿಯೊಂದು ಕಡಲ ಅಬ್ಬರಕ್ಕೆ ಸಿಲುಕಿ ಮಗುಚಿ ಬಿದ್ದ ಘಟನೆ ಸೋಮವಾರ ಬೆಳಗ್ಗೆ ಕಾಪು ಸಮೀಪದ ಕೈಪುಂಜಾಲಿನಲ್ಲಿ ಸಂಭವಿಸಿದೆ.
ದಯಾನಂದ ಸುವರ್ಣ ಉದ್ಯಾವರ ಮತ್ತು ಶೇಖರ್ ಮಲ್ಪೆ ಅವರಿಗೆ ಸೇರಿದ್ದ ದೋಣಿಗಳು ಜತೆಯಾಗಿ ಮಲ್ಪೆಯಿಂದ ನಾಡದೋಣಿ ಮೀನುಗಾರಿಕೆಗೆ ತೆರಳಿದ್ದವು. ಇವುಗಳ ಪೈಕಿ ದಯಾನಂದ ಸುವರ್ಣ ಅವರಿಗೆ ಸೇರಿದ್ದ ಸರ್ವೇಶ್ವರ ಹೆಸರಿನ ದೋಣಿ ಕೈಪುಂಜಾಲು ಬಳಿ ಕಡಲ ಅಬ್ಬರಕ್ಕೆ ಸಿಲುಕಿ ಮಗುಚಿ ಬಿದ್ದಿತು.
ಮುಳುಗಡೆಯಾದ ದೋಣಿಯ ಜತೆಗೆ ದೋಣಿಯಲ್ಲಿದ್ದ ದಿನೇಶ್, ಜಗನ್ನಾಥ್, ಸುಂದರ್ ಅವರು ಸಮುದ್ರ ಪಾಲಾಗಿದ್ದು, ಅವರನ್ನು ಮತ್ತೂಂದು ಬೋಟಿನಲ್ಲಿದ್ದವರು ತತ್‌ಕ್ಷಣ ಸಮುದ್ರಕ್ಕೆ ಇಳಿದು ರಕ್ಷಿಸಿದ್ದಾರೆ.
ಮಗುಚಿ ಬಿದ್ದ ದೋಣಿ ಕಾಪು ರೈಟ್ ಹೌಸ್ ಬಳಿ ಪತ್ತೆಯಾಗಿದ್ದು, ಬಳಿಕ ಸ್ಥಳೀಯರು ಸೇರಿ ದೋಣಿಯನ್ನು ದಡಕ್ಕೆ ಎಳೆದು ತಂದಿದ್ದಾರೆ. ದೋಣಿ ಸಂಪೂರ್ಣ ಹಾನಿಗೀಡಾಗಿದ್ದು, ಎಂಜಿನ್‌ಗೂ ಹಾನಿಯಾಗಿದೆ.
ಕರಾವಳಿ ಕಾವಲು ಪಡೆ ಇನ್ಸ್‌ಪೆಕ್ಟರ್ ಕೆ.ಪಿ. ಹರೀಶ್ಚಂದ್ರ, ಕಾಪು ಎಸ್‌ಐ ನಿತ್ಯಾನಂದ ಗೌಡ ಮತ್ತು ಸಿಬಂದಿ ಹಾಗೂ ಸ್ಥಳೀಯ ಮೀನುಗಾರರು, ಲೈಫ್‌ಗಾರ್ಡ್ ಗಳು, ಬೀಚ್ ರಕ್ಷಣಾ ಸಮಿತಿ ಸದ ಸ್ಯರು ದೋಣಿಯನ್ನು ರಕ್ಷಿಸಲು ಸಹಕರಿಸಿದ್ದಾರೆ.