ಕಾರವಾರ: ಮಳೆಗಾಲ ಆರಂಭವಾದದ್ದೇ ತಡ ಮೀನುಗಾರಿಕೆ ಉದ್ಯಮ ಸಹ ವಿರಾಮ ತೆಗೆದುಕೊಂಡಿದೆ. ಮಳೆಗಾಲದಲ್ಲಿ
ಮೀನುಗಳು ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುವ ಸಮಯವಾದ ಕಾರಣ ಜೂನ್ -ಜುಲೈನಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ಸರ್ಕಾರ ಸಹ ನಿಷೇಧ ಹೇರುತ್ತಾ ಬಂದಿರುವುದು ವಾಡಿಕೆ.
Advertisement
ಜೂನ್ ಪ್ರಾರಂಭವಾಗುತ್ತಿದ್ದಂತೆ, ಆಳ ಸಮುದ್ರದಲ್ಲಿ ಮೀನು ಬೇಟೆಯಾಡುತ್ತಿದ್ದ ಯಾಂತ್ರಿಕ ಬೋಟ್‌ಗಳು ದಡ ಸೇರಿದವು.ಕಾರವಾರ, ಮುದಗಾ, ಬೇಲೇಕೇರಿ, ತದಡಿ, ಕಾಸರಕೋಡು, ಭಟ್ಕಳ ಬಂದರು ಸೇರಿದಂತೆ ಜಿಲ್ಲೆಯ ಒಂಬತ್ತು ಬಂದರುಗಳಲ್ಲಿ ಮೀನುಗಾರಿಕಾ ಚಟುವಟಿಕೆ ಸ್ತಬ್ಧಗೊಂಡಿದೆ. ಪರ್ಶಿಯನ್, ಟ್ರಾಲರ್ ಬೋಟ್ ಗಳಲ್ಲಿ ಕೆಲಸ ಮಾಡುವ ಒಡಿಶಾ, ಆಂಧ್ರ ಹಾಗೂ ಉತ್ತರ ಕರ್ನಾಟಕದ ಕಾರ್ಮಿಕರು ತಮ್ಮ ಸ್ವಂತ ಊರು, ರಾಜ್ಯಕ್ಕೆ ತೆರಳಿದ್ದಾರೆ. ಅಂದಾಜು 25 ಸಾವಿರ ಕಾರ್ಮಿಕರು ವಲಸೆ ಬಂದು ಮೀನುಗಾರಿಕೆಯಲ್ಲಿ ನಿರತರಾಗುತ್ತಾರೆ.
4027 ಟ್ರಾಲರ್ ಬೋಟ್‌ಗಳು ಬಂದರಿನಲ್ಲಿ ಲಂಗರು ಹಾಕಿವೆ. ಇವುಗಳನ್ನು ಹೊರತು ಪಡಿಸಿ, ಸಣ್ಣ ಪ್ರಮಾಣದ ಯಂತ್ರ ಜೋಡಿಸಿ ಎರಡು ಜನ ಸಿಬ್ಬಂದಿ ಸೇರಿ ಮಾಡುವ ಯಾಂತ್ರಿಕೃತ ಮೀನುಗಾರಿಕಾ ದೋಣಿಗಳು 5000ಕ್ಕೂ ಹೆಚ್ಚಿವೆ. ಈಚಿನ ವರ್ಷಗಳಲ್ಲಿ ಮತ್ಸ್ಯ ಸಂಪತ್ತು ಕ್ಷೀಣಿಸುತ್ತಿದ್ದು, ಮೀನುಗಾರಿಕೆ ಸಹ ಸಮುದ್ರ ಸಂಪತ್ತಿನ ಅದೃಷ್ಟವನ್ನು ಅವಲಂಬಿಸಿದೆ ಎಂದು ಫಿಶ್ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ತಿಳಿಸಿದ್ದಾರೆ.
Related Articles
Advertisement
ಮಳೆಗಾಲದಲ್ಲಿ ಮೀನುಗಾರಿಕೆ ಸಾಧ್ಯವಿಲ್ಲ. ಏಂಡಿ ಬಲೆ ಬಳಸಿ ಸಾಂಪ್ರದಾಯಿಕ ಮೀನುಗಾರಿಕೆ ಮಾಡಬಹುದು. ಅದು ಸಮುದ್ರದಡದ ಮೀನುಗಾರಿಕೆ. ಇದು ಸಹ ಮಳೆ ವಿರಾಮದ ಅವಧಿಯಲ್ಲಿ. ಉಳಿದಂತೆ ಯಾಂತ್ರಿಕ ಬೋಟ್‌ಗಳಿಗೆ ಹಾಗೂ ಮೀನುಗಾರರಿಗೆ ಇದು ವಿಶ್ರಾಂತಿ ಕಾಲ. ವರ್ಷದ ಎರಡು ತಿಂಗಳು ನೆಮ್ಮದಿ ಸಮಯ. ಉಳಿದಂತೆ ನಾವು ಸಮುದ್ರದ ಜೊತೆ ಸದಾ ಸಂಘರ್ಷದಲ್ಲಿ ಇರುತ್ತೇವೆ.
·ಸತೀಶ್ ತಾಂಡೇಲ್, ಹೊನ್ನಾವರ