Advertisement
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮುದ್ರ ಮೀನುಗಾರಿಕೆ ಪ್ರಮುಖ ಔದ್ಯೋಗಿಕ ಕ್ಷೇತ್ರ. ಸುಮಾರು 65 ಸಾವಿರ ಮಂದಿಗೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗ ಕಲ್ಪಿಸಿದೆ. ಜಿಲ್ಲೆ ಮತ್ತು ರಾಜ್ಯದ ಆರ್ಥಿಕತೆಗೆ ಗಣನೀಯ ಕೊಡುಗೆಯನ್ನೂ ನೀಡುತ್ತಿದೆ. ಕಳೆದ ಬಾರಿ ಕೊರೊನಾ ಈ ಕ್ಷೇತ್ರವನ್ನೂ ಬಿಟ್ಟಿಲ್ಲ. ಮಾ.26ರಿಂದ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ಋತುವಿನಲ್ಲಿ ದೋಣಿಗಳು ದಡದಲ್ಲೇ ಉಳಿದದ್ದು ಹೆಚ್ಚು.
Related Articles
Advertisement
ವಸ್ತುಸ್ಥಿತಿ : ಮಂಗಳೂರು ಭಾಗದಲ್ಲಿ ಟ್ರಾಲ್ ಬೋಟ್, ಪರ್ಸಿನ್, ನಾಡದೋಣಿಗಳ ಸಹಿತ ಸುಮಾರು 2,800 ಬೋಟ್‌ಗಳು ಮೀನುಗಾರಿಕೆಯಲ್ಲಿ ನಿರತವಾಗಿವೆ. ಪ್ರತ್ಯಕ್ಷವಾಗಿ ಸುಮಾರು 25 ಸಾವಿರ ಮಂದಿ ಮತ್ತು ಇದಕ್ಕೆ ಹೊಂದಿಕೊಂಡಿರುವ ಮೀನು ಮಾರಾಟ, ಸಾಗಾಟ, ಐಸ್‌ಪ್ಲಾಂಟ್, ರಫ್ತು, ಫಿಶ್‌ಮೀಲ್ ಮತ್ತಿತರ ಕ್ಷೇತ್ರಗಳಲ್ಲಿ ಸುಮಾರು 40 ಸಾವಿರ ಮಂದಿ ಸೇರಿದಂತೆ ಸುಮಾರು 65 ಸಾವಿರ ಮಂದಿ ದುಡಿಯುತ್ತಿದ್ದಾರೆ. ಮೀನುಗಾರಿಕೆ ಋತು ಆರಂಭದಲ್ಲಿ ಒಂದು ಟ್ರಾಲ್‌ಬೋಟನ್ನು ಮೀನುಗಾರಿಕೆಗೆ ಇಳಿಸಲು ಡೀಸೆಲ್, ನಿರ್ವಹಣೆ ಮತ್ತಿತರ ವೆಚ್ಚ ಸೇರಿ ಕನಿಷ್ಠ 8 ಲಕ್ಷ ರೂ. ಬೇಕು. ಇದನ್ನು ಬ್ಯಾಂಕ್‌ಗಳು, ಮೀನುಗಾರರ ಸಹಕಾರಿ ಸಂಘಗಳಿಂದ ಸಾಲವಾಗಿ ಪಡೆದು ಭರಿಸಲಾಗುತ್ತದೆ. ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಎರಡು ತಿಂಗಳ ನಿರ್ವಹಣೆಗೆ ಕನಿಷ್ಠ 30 ಸಾವಿರ ರೂ. ಬೇಕು. ಸಾಕಷ್ಟು ಪ್ರಮಾಣದಲ್ಲಿ ಮೀನು ಲಭಿಸಿದರೆ ಈ ವೆಚ್ಚಗಳನ್ನು ನಿಭಾಯಿಸಿ ಒಂದಷ್ಟು ಆದಾಯ ಸಿಗಬಹುದು. ಸಾಕಷ್ಟು ಪ್ರಮಾಣದಲ್ಲಿ ಮೀನು ಲಭಿಸದಿದ್ದರೆ ನಷ್ಟ ಖಚಿತ. ಕಳೆದ ಋತುವಿನ ಒಟ್ಟು 8 ತಿಂಗಳುಗಳಲ್ಲಿ ಆರಂಭದ ಎರಡು ತಿಂಗಳು ಹವಾಮಾನ ವೈಪರೀತ್ಯ, ಕರ್ಫ್ಯೂ, ಬಂದ್‌ನಿಂದಾಗಿ ಮೀನುಗಾರಿಕೆ ಸ್ಥಗಿತಗೊಂಡಿದ್ದರೆ, ಕೊನೆಯ ಅವಧಿಯ 2 ತಿಂಗಳು ಕೊರೊನಾದಿಂದ ಸ್ಥಗಿತಗೊಂಡಿತ್ತು. ಒಟ್ಟು 4 ತಿಂಗಳ ಮೀನುಗಾರಿಕೆ ಸ್ಥಾಗಿತ್ಯದಿಂದಾಗಿ ಈ ಕ್ಷೇತ್ರ ತೀವ್ರ ಆರ್ಥಿಕ ಹಿನ್ನಡೆ ಅನುಭವಿಸಿದೆ.
ಪ್ಯಾಕೇಜ್‌ನತ್ತ ನಿರೀಕ್ಷೆ ಸಂಕಷ್ಟದಲ್ಲಿರುವ ಮೀನುಗಾರಿಕೆ ಕ್ಷೇತ್ರಕ್ಕೆ ಕೆಲವು ಚೇತೋಹಾರಿ ಕ್ರಮಗಳು ಅವಶ್ಯವಿದೆ. ಇಲ್ಲದಿದ್ದರೆ ಮುಂದಿನ ಋತುವಿನಲ್ಲಿ ಕೇವಲ ಶೇ.30ರಷ್ಟು ಬೋಟ್‌ಗಳು ಮಾತ್ರ ಮೀನುಗಾರಿಕೆಗೆ ಇಳಿಯಬಹುದು ಎಂಬುದು ಮೀನುಗಾರರ ಅಭಿಪ್ರಾಯ.
ಕೊರೊನಾದಿಂದ ಹಿನ್ನಡೆ ಕಂಡಿರುವ ಆರ್ಥಿಕ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಿ ಘೋಷಿಸಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ ಮೀನುಗಾರಿಕೆಗೆ ಕೆಲವು ಉತ್ತೇಜನಕಾರಿ ಕ್ರಮಗಳಿವೆ. ಸದ್ಯದಲ್ಲೇ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆ ಜಾರಿ ಮಾಡಿ, ಇದರಡಿ ಸಮುದ್ರ ಮತ್ತು ಒಳನಾಡು ಮೀನುಗಾರಿಕೆಗೆ 11 ಸಾವಿರ ಕೋ.ರೂ. ಹಾಗೂ ಮೀನುಗಾರಿಕಾ ಕೇಂದ್ರಗಳು, ಮಾರುಕಟ್ಟೆ ಮತ್ತು ಸಂಸ್ಕರಣ ಸರಪಳಿಗೆ ಉತ್ತೇಜನ ಮುಂತಾದವುಗಳಿಗೆ 9 ಸಾವಿರ ಕೋ.ರೂ. ಸೇರಿದಂತೆ 20 ಸಾವಿರ ಕೋ.ರೂ. ನೀಡುವುದಾಗಿ ತಿಳಿಸಲಾಗಿದೆ. ಮೀನುಗಾರಿಕೆ ದೋಣಿಗಳಿಗೆ ವಿಮೆ, ಮೀನು ರಫ¤ನ್ನು 1 ಲಕ್ಷ ಕೋ.ರೂ.ಗಳಿಗೇರಿಸುವುದು, ಮೀನು ಉತ್ಪಾದನೆ ಹೆಚ್ಚಳ ಸಹಿತ ಕೆಲವು ಉತ್ತೇಜನಗಳನ್ನು ಪ್ರಕಟಿಸಲಾಗಿದೆ. ಇವು ಸಮರ್ಪಕವಾಗಿ ಜಾರಿಯಾಗಿ ಮೀನುಗಾರರಿಗೆ ಪ್ರಯೋಜನ ಸಿಗಬೇಕಿದೆ ಎಂಬುದು ಮೀನುಗಾರ ಸಮುದಾಯದ ಆಗ್ರಹ. ಸರಕಾರದಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ?
ಯಾಂತ್ರೀಕೃತ ಮೀನುಗಾರಿಕೆ ಬೋಟ್‌ಗಳಿಗೆ ಸರಕಾರದಿಂದ ಬಾಕಿ ಇರುವ ಡೀಸೆಲ್ ಸಹಾಯಧನದಲ್ಲಿ ಸ್ವಲ್ಪ ಭಾಗವನ್ನು ಬಿಡುಗಡೆ ಮಾಡಲಾಗಿದ್ದು, ಉಳಿದ ಮೊತ್ತವನ್ನೂ ಕೂಡಲೇ ಬಿಡುಗಡೆ ಮಾಡಬೇಕು. ಪ್ರಸ್ತುತ ಕೊರೊನಾದಿಂದಾಗಿ ಮೀನುಗಾರಿಕೆ ಸ್ಥಗಿತಗೊಂಡು ಆರ್ಥಿಕ ಸಂಕಷ್ಟದಲ್ಲಿರುವ ಮೀನುಗಾರರಿಗೆ ಚೇತರಿಸಿಕೊಳ್ಳಲು ಇದು ನೆರವಾಗುತ್ತದೆ.
ಮೀನುಗಾರರು ಈಗಾಗಲೇ ಬ್ಯಾಂಕ್, ಸಹಕಾರಿ ಸಂಸ್ಥೆಗಳಿಂದ ಪಡೆದಿರುವ ಸಾಲವನ್ನು ಮರುಪಾವತಿಸಲಾಗದೆ ಸಾಲದ ಹೊರೆಯಲ್ಲಿದ್ದಾರೆ. ಆದುದರಿಂದ ಸಾಲದ ಮೇಲಣ ಬಡ್ಡಿಯನ್ನು ಸರಕಾರ ಮನ್ನಾ ಮಾಡಬೇಕು. ಬ್ಯಾಂಕ್‌ಗಳು ಅನುತ್ಪಾದಕ ಆಸ್ತಿಗಳೆಂದು ಪರಿಗಣಿಸುವುದನ್ನು ಕನಿಷ್ಠ ಆರು ತಿಂಗಳುಗಳವರೆಗಾದರೂ ಮುಂದೂಡಬೇಕು. ಸಾಲ ಮರುಪಾವತಿ ಅವಧಿ ವಿಸ್ತರಿಸಬೇಕು. ನಾಡದೋಣಿಗಳ ಮಾಲಕರು ಮಾತ್ರ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯಕ್ಕೆ ಒಳಪಡುತ್ತಾರೆ. ಒಂದು ಬೋಟ್‌ನಲ್ಲಿ ಕನಿಷ್ಠ 4ರಿಂದ 5 ಮಂದಿ ದುಡಿಯುತ್ತಿದ್ದು, ಈ ಎಲ್ಲರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ವಿಸ್ತರಿಸಬೇಕು. ಸರಕಾರ ಕೆಲವು ಕ್ಷೇತ್ರಗಳಲ್ಲಿ ದುಡಿಯುವ ಕಾರ್ಮಿಕರಿಗೆ, ವೃತ್ತಿದಾರರಿಗೆ ನೆರವು ಘೋಷಿಸಿದೆ. ಇದೇ ರೀತಿ ಮೀನುಗಾರಿಕೆಯಲ್ಲಿ ದುಡಿಯುವ ಕಾರ್ಮಿಕರಿಗೆ ಕನಿಷ್ಠ 5 ಸಾವಿರ ರೂ. ನೆರವು ಘೋಷಿಸಿದರೆ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುತ್ತದೆ.
ಮೀನುಗಾರಿಕೆ ಬೋಟ್‌ಗಳಿಗೆ ಸಬ್ಸಿಡಿ ಡೀಸೆಲ್ ಪ್ರಮಾಣವನ್ನು ಪ್ರಸ್ತುತ ಇರುವ 9 ಸಾವಿರ ಲೀ.ಗಳಿಂದ 15 ಸಾವಿರ ಲೀ.ಗಳಿಗೇರಿಸಬೇಕು ಮತ್ತು ಇದರ ಮೇಲಿನ ರಸ್ತೆ ತೆರಿಗೆಯನ್ನು ತೆಗೆದುಹಾಕಬೇಕು. ಪುನಶ್ಚೇತನಕ್ಕೆ ನೆರವು ಅಗತ್ಯ
ಕಳೆದ ಮೀನುಗಾರಿಕೆ ಋತು ಆರಂಭದಿಂದಲೇ ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದು, ಈಗ ಕೊರೊನಾ ಇನ್ನಷ್ಟು ಹೊಡೆತ ನೀಡಿದೆ. ಪುನಶ್ಚೇತನದ ನಿಟ್ಟಿನಲ್ಲಿ ಹೆಚ್ಚಿನ ಪ್ರೋತ್ಸಾಹಕ ಕ್ರಮಗಳ ಅಗತ್ಯವಿದೆ. ಕೇಂದ್ರ ಸರಕಾರ ಈಗಾಗಲೇ ಕ್ಷೇತ್ರಕ್ಕೆ ಕೆಲವು ಸೌಲಭ್ಯಗಳನ್ನು ಘೋಷಿಸಿದ್ದು, ಇದು ಪೂರ್ಣ ಪ್ರಮಾಣದಲ್ಲಿ ಮೀನುಗಾರರಿಗೆ ತಲುಪುವಂತಾಗಬೇಕು. ಜತೆಗೆ ಸಾಲದ ಮರುಪಾವತಿ ಅವಧಿಯನ್ನು ಹೆಚ್ಚಿಸಬೇಕು.
– ನಿತಿನ್ ಕುಮಾರ್, ಮಂಗಳೂರು ಟ್ರಾಲ್‌ಬೋಟ್ ಮೀನುಗಾರರ ಸಂಘದ ಅಧ್ಯಕ್ಷ