Advertisement

ಅನ್ಯರಾಜ್ಯದವರ ಮೀನುಗಾರಿಕೆಗೆ ಬೀಳದ ಕಡಿವಾಣ

09:49 AM Apr 30, 2020 | sudhir |

ಕುಂದಾಪುರ : ಕರ್ನಾಟಕ ಕರಾವಳಿಯಲ್ಲಿ ಗೋವಾ ಮೀನುಗಾರರು ನಡೆಸುತ್ತಿರುವ ಅಕ್ರಮ ಬೆಳಕು ಮೀನುಗಾರಿಕೆ (ಲೈಟ್‌
ಫಿಶಿಂಗ್‌) ಬಗ್ಗೆ ರಾಜ್ಯದ ಮೀನು ಗಾರರು ಮಾಹಿತಿ ನೀಡಿದರೂ ಯಾವುದೇ ಕ್ರಮಕೈಗೊಳ್ಳದ ಸರಕಾರದ ಕ್ರಮದ ಬಗ್ಗೆ ಮೀನು ಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ರಾಜ್ಯದ ಮೀನುಗಾರರು ಮನೆಯಲ್ಲಿ ಕುಳಿತಿದ್ದರೆ ಅತ್ತ ಗೋವಾದ ಮೀನುಗಾರರು ರಾಜ್ಯದ ಕರಾವಳಿಗೆ ಅಕ್ರಮವಾಗಿ ನುಸುಳಿ ಬೆಳಕು ಮೀನುಗಾರಿಕೆ (ಲೈಟ್‌ ಫಿಶಿಂಗ್‌) ನಡೆಸುತ್ತಿದ್ದಾರೆ. ಈ ಬಗ್ಗೆ ಉದಯವಾಣಿ ಎ. 19ರಂದು ವಿಶೇಷ ವರದಿ ಪ್ರಕಟಿಸಿತ್ತು.

ಕೇಂದ್ರ ಒಪ್ಪಿದರೂ…
ಕೇಂದ್ರ ಸರಕಾರ ಎಲ್ಲ ರೀತಿಯ ಮೀನುಗಾರಿಕೆಗೆ ಅವಕಾಶ ನೀಡಿದೆ. ಗೋವಾ, ಮಹಾರಾಷ್ಟ್ರದಲ್ಲೂ ಅವಕಾಶ ಇದೆ. ಆದರೆ ರಾಜ್ಯ ಸರಕಾರ ಸಾಂಪ್ರದಾಯಿಕ ಮೀನುಗಾರಿಕೆಗೆ ಮಾತ್ರ ಅವಕಾಶ ಕಲ್ಪಿಸಿರುವುದು ಸಮಸ್ಯೆಗೆ ಕಾರಣ. ಗೋವಾ ಮೀನುಗಾರರು ನಮ್ಮ ರಾಜ್ಯದಿಂದ ಹಿಡಿದ ಮೀನನ್ನು ಮತ್ತೆ ನಮ್ಮಲ್ಲಿಗೇ ಕಳುಹಿಸಿ ದುಬಾರಿ ಬೆಲೆಗೆ ಮಾರುತ್ತಿದ್ದಾರೆ.

ದಡಕ್ಕೆ ಬರುವುದೇ ಇಲ್ಲ
ಗೋವಾದ ಬಹುತೇಕ ಬೋಟುಗಳು ಅಲ್ಲಿನ ರಾಜಕೀಯ ನಾಯಕರಿಗೆ ಸೇರಿದ್ದು, ನಮ್ಮ ಕರಾವಳಿಗೆ ಬಂದು ರಾತ್ರಿ ಮೀನು ಗಾರಿಕೆ ನಡೆಸಿ ಕಡಲಲ್ಲೇ ಇರುತ್ತವೆ. ಸಣ್ಣ ಬೋಟುಗಳು ಬಂದು ಮೀನನ್ನು ತುಂಬಿ ಕೊಂಡು ಮರಳುತ್ತವೆ. ದೊಡ್ಡ ಬೋಟುಗಳು ಅಕ್ರಮ ಚಟುವಟಿಕೆ ಮುಂದುವರಿಸುತ್ತವೆ ಎನ್ನುತ್ತಾರೆ ಇಲ್ಲಿನ ಮೀನುಗಾರರು.

ಅಪಾಯಕಾರಿ ಅಲ್ಲವೇ?
ಲಾಕ್‌ಡೌನ್‌ ಆದೇಶವನ್ನು ನಾವು ಮಾತ್ರ ಪಾಲಿಸಬೇಕಾ ? ಗೋವಾ ಮತ್ತು ಮಹಾರಾಷ್ಟ್ರದಿಂದ ಬರುವ ಲೈಟ್‌ಫಿಶಿಂಗ್‌ ಬೋಟ್‌ಗಳು ನಮ್ಮ ದಾರಿಯ ಮೂಲಕವೇ ಕೇರಳಕ್ಕೂ ಸಾಗುತ್ತಿವೆ. ಅತೀ ಹೆಚ್ಚು ಸೋಂಕು ಇರುವ ಮಹಾರಾಷ್ಟ್ರ ದ ಮೀನುಗಾರರಿಗೆ ನಿರ್ಬಂಧ ಯಾಕಿಲ್ಲ? ಕಳೆದ ವರ್ಷ ನಮ್ಮ ಮೀನುಗಾರಿಕೆಗೆ ತಕರಾರು ತೆಗೆದ ಗೋವಾದವರಿಗೆ ಈಗ ನಮ್ಮಲ್ಲಿಗೇ ಬಂದು ಬೆಳಕು ಮೀನುಗಾರಿಕೆ ನಡೆಸಲು ಬಿಟ್ಟಿರುವುದೇಕೆ? ಎಂದು ಮೀನುಗಾರಿಕಾ ಸಚಿವರು, ಜಿಲ್ಲಾಡಳಿತ ಮತ್ತು ಕರಾವಳಿ ಕಾವಲು ಪಡೆಯನ್ನು ಇಲ್ಲಿನ ಮೀನುಗಾರರು ಪ್ರಶ್ನಿಸಿದ್ದಾರೆ.

Advertisement

ಗೋವಾದ ನೂರಾರು ಮೀನುಗಾರಿಕಾ ಬೋಟುಗಳು ರಾತ್ರಿ ಸಮಯದಲ್ಲಿ ಮಲ್ಪೆಯಿಂದ ಹೊನ್ನಾವರ ಭಾಗದವರೆಗೆ ಮೀನುಗಾರಿಕೆ ನಡೆಸುತ್ತಿವೆ. ಮೀನು ಗಾರಿಕಾ ಸಚಿವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರದ ರತ್ನಗಿರಿ, ಅಲಿಬಾಗ್‌, ಗೋವಾದ ಮೀನುಗಳನ್ನು ಇಲ್ಲಿಗೆ ತಂದು ದುಬಾರಿ ಬೆಲೆಗೆ ಮಾರುವುದು ಸರಿಯಲ್ಲ.
– ರಮೇಶ್‌ ಕುಂದರ್‌
ಅಧ್ಯಕ್ಷರು ಪರ್ಸಿನ್‌ ಮೀನುಗಾರರ ಸಹಕಾರಿ ಸಂಘ ಗಂಗೊಳ್ಳಿ

ಕರಾವಳಿ ಕಾವಲು ಪಡೆಯಿಂದ 12 ನಾಟಿಕಲ್‌ ಮೈಲ್‌ ಒಳಗೆ ಎಲ್ಲ ಕಡೆಗಳಲ್ಲಿ ಪೆಟ್ರೋಲಿಂಗ್‌ ಮಾಡಲಾಗುತ್ತಿದೆ. ಈ ವ್ಯಾಪ್ತಿಯಲ್ಲಿ ಹೊರ ರಾಜ್ಯದ ಮೀನುಗಾರರು ಮೀನುಗಾರಿಕೆ ಮಾಡುತ್ತಿರುವುದು ಕಂಡುಬಂದಿಲ್ಲ. ಮೀನುಗಾರಿಕೆ ಇಲಾಖೆ ಅಥವಾ ಮೀನುಗಾರರಿಂದಲೂ ದೂರುಗಳು ಬಂದಿಲ್ಲ. ಗೋವಾದವರ ಲೈಟ್‌ ಫಿಶಿಂಗ್‌ ಕಂಡುಬಂದಲ್ಲಿ ನನ್ನ ಮೊಬೈಲ್‌ಗೆ
(94808 00555) ತತ್‌ಕ್ಷಣ ಮಾಹಿತಿ ನೀಡಲಿ, ಕ್ರಮ ಕೈಗೊಳ್ಳುತ್ತೇವೆ.
– ಆರ್‌. ಚೇತನ್‌, ಪೊಲೀಸ್‌ ಅಧೀಕ್ಷಕರು, ಉಡುಪಿ ಜಿ. ಕರಾವಳಿ ಕಾವಲು ಪೊಲೀಸ್‌ ಪಡೆ

Advertisement

Udayavani is now on Telegram. Click here to join our channel and stay updated with the latest news.

Next