Advertisement

ಮತ್ಸ್ಯ ಬೇಟೆಗೆ ಕಡಲಿಗಿಳಿಯಲು ಮೀನುಗಾರರು ಸಜ್ಜು

08:25 AM Aug 03, 2017 | Harsha Rao |

ಕುಂದಾಪುರ: ಎರಡು ತಿಂಗಳ ನಿಷೇಧದ ಬಳಿಕ ಯಾಂತ್ರಿಕ ಮೀನುಗಾರಿಕೆ ಅಧಿಕೃತವಾಗಿ ಆ.1ರಂದು ಇತರ ಬಂದರುಗಳಲ್ಲಿ ಆರಂಭಗೊಳ್ಳುತ್ತಿದ್ದರೂ ಗಂಗೊಳ್ಳಿಯಲ್ಲಿ ಸಿದ್ಧತೆಗಳು ಮಾತ್ರ ನಡೆಯುತ್ತಿದ್ದು, ಬಹುತೇಕ ಆ. 5ರಿಂದ ಯಾಂತ್ರೀಕೃತ ಬೋಟುಗಳು ಮೀನುಗಾರಿಕೆಗೆ ಕಡಲಿಗೆ ಇಳಿಯುವ ಸಾಧ್ಯತೆಗಳು ಕಂಡು ಬಂದಿವೆ.

Advertisement

ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕೆಗೆ ತೆರಳಲು ಸಿದ್ಧತೆಯನ್ನು ನಡೆಸಲಾಗುತ್ತಿದೆ. ಕೋಡಿ ಭಾಗದಲ್ಲಿ ಲಂಗರು ಹಾಕಿದ ಬೋಟುಗಳು ಸೇರಿದಂತೆ ಟ್ರಾಲ್‌ ಬೋಟುಗಳು 4ರಿಂದ, ಪರ್ಸಿನ್‌ ಬೋಟುಗಳು ಆ.9ರಿಂದ ಹಾಗೂ ಉಳಿದ ಬೋಟುಗಳು ಆ. 5ರಿಂದ ಮೀನು ಬೇಟೆಗೆ ಕಡಲಿಗಿಳಿಯಲಿವೆ.

ಕೋಡಿ-ಕನ್ಯಾನದಿಂದ ಶಿರೂರು ತನಕ  ಸುಮಾರು 25 ಸಾವಿರಕ್ಕೂ ಅಧಿಕ ಮಂದಿ ಮೀನುಗಾರರು ಗಂಗೊಳ್ಳಿ ಬಂದರನ್ನು ವಿವಿಧ ರೀತಿಯಲ್ಲಿ ಅವಲಂಬಿಸಿದ್ದು, ಸುಮಾರು 350ಕ್ಕೂ ಹೆಚ್ಚು ಬೋಟುಗಳು, ಇನ್ನೂರಕ್ಕೂ ಅಧಿಕ ನಾಡದೋಣಿಗಳು ಇಲ್ಲಿ ಕಾರ್ಯಾಚರಿಸುತ್ತಿವೆ. ಮಲ್ಪೆ ಬಂದರಿನಿಂದ ಹೊರಡುವ ದಿನಕ್ಕೆ ಹೊಂದಿಕೊಂಡು ಬೋಟುಗಳನ್ನು ನೀರಿಗಿಳಿಸಲು ಮೀನುಗಾರರು ಸಿದ್ಧಗೊಂಡಿದ್ದಾರೆ. ಮಲ್ಪೆಯಲ್ಲಿ ಜು. 30ರಂದು ಮಾರಿ ಹಬ್ಬ ನಡೆದಿರುವುದರಿಂದ ಈ ಬಾರಿ ಬೋಟುಗಳು ಮೀನುಗಾರಿಕೆಗೆ ತೆರಳಲು ಯಾವುದೇ ತಡೆ ಇಲ್ಲ ಎನ್ನುತ್ತಾರೆ ಮೀನುಗಾರರು.

ಬೋಟುಗಳನ್ನು ಕಳೆದ ಒಂದು ವಾರದಿಂದ ನೀರಿಗಿಳಿಸುವ ಪ್ರಕ್ರಿಯೆಯಲ್ಲಿ ಮೀನುಗಾರರು ತೊಡಗಿಸಿಕೊಂಡಿದ್ದಾರೆ. ದುರಸ್ತಿ ಕಾರ್ಯವನ್ನು ಮುಗಿಸಿರುವ ಬೋಟು ಗಳನ್ನು ಈಗಾಗಲೇ ನೀರಿಗಿಳಿಸಿದ್ದು, ಬಲೆ ದುರಸ್ತಿ ಹಾಗೂ ಇನ್ನಿತರ ಕಾರ್ಯಗಳು ಪೂರ್ಣಗೊಂಡು ಮೀನು ಬೇಟೆಗೆ ಸಜ್ಜಾಗಿ ನಿಂತಿದ್ದಾರೆ.

ಕಳೆದ ಬಾರಿಯ ಯಾಂತ್ರಿಕ ಮೀನುಗಾರಿಕೆ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಅದೇ ರೀತಿ ಮಳೆಗಾಲದಲ್ಲಿ ಸಮಯದಲ್ಲಿ ನಾಡದೋಣಿ ಮೀನುಗಾರಿಕೆಗೂ ಕೂಡಾ ಹವಾಮಾನ ವೈಪರೀತ್ಯ ಹಾಗೂ ಕಡಿಮೆ ಅವಧಿಯಿಂದಾಗಿ ಯಾವುದೇ ಲಾಭವನ್ನು ತಂದುಕೊಡಲಿಲ್ಲ. ಹಲವಾರು ವರ್ಷಗಳಿಂದ ಮತ್ಸಕ್ಷಾಮದಿಂದಾಗಿ ಕಂಗೆಟ್ಟಿದ್ದ‌ ಮೀನುಗಾರರಿಗೆ ಕಳೆದ ಬಾರಿ ಮೀನಿನ ಬರದೊಂದಿಗೆ ಉತ್ತಮ ಧಾರಣೆ ದೊರೆಯದೇ ಇರುವುದರಿಂದ ಮೀನುಗಾರರು ಆರ್ಥಿಕವಾಗಿ ಸಾಕಷ್ಟು ಹೊಡೆತವನ್ನು ಅನುಭವಿಸಿದ್ದರು. ಪರ್ಸಿನ್‌ ಬೋಟುಗಳಿಗೆ ಲೈಟ್‌ ಫಿಶಿಂಗ್‌ಗಳಿಂದಾಗಿ ಸಾಧಾರಣ ಮಟ್ಟದ ಮೀನುಗಾರಿಕೆಯಾಗಿದ್ದರೂ ಟ್ರಾಲ್‌ ಬೋಟುಗಳಿಗೆ ಮೀನಿನ ಬರ ಕಂಡು ಬಂದಿತ್ತು. ಈ ಬಾರಿ ಬಹಳಷ್ಟು ನಿರೀಕ್ಷೆಯ ಮೂಲಕ ಈಗ ಮತ್ತೆ ಮೀನುಗಾರಿಕೆಗಾಗಿ ಕಡಲಿಗಿಳಿಯಲಿದ್ದಾರೆ..

Advertisement

ಗಂಗೊಳ್ಳಿ ಬಂದರಿನಲ್ಲಿ ಸುಮಾರು 230 ಟ್ರಾಲ್‌ ಬೋಟುಗಳು,48 ಪರ್ಸಿನ್‌ ಬೋಟುಗಳು,100 ತ್ರಿ ಸೆವೆಂಟಿ ಬೋಟುಗಳು ಕಾರ್ಯಾಚರಿಸುತ್ತಿವೆ. ಯಾಂತ್ರಿಕ ಬೋಟುಗಳನ್ನು ನೀರಿಗಿಳಿಸುವ ಕಾರ್ಯ ಭರದಿಂದ ಸಾಗಿದೆ. ಮೀನುಗಾರರು ಕೊನೆಯ ಹಂತದ ತಮ್ಮ ಬೋಟುಗಳ ದುರಸ್ತಿ, ಸಂಬಂಧಿಸಿದ ಬಲೆ ಹಾಗೂ ಇನ್ನಿತರ ಉಪಕರಣಗಳ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.

ಮೀನುಗಾರರಲ್ಲಿ ಆಶಾಭಾವನೆ:  ಕಳೆದ  4-5 ವರ್ಷಗಳಿಗೆ ಹೋಲಿಸಿದ್ದಲ್ಲಿ  ಕಳೆದ ಬಾರಿ ಮತ್ಸéಕ್ಷಾಮ ಹೆಚ್ಚಾಗಿ ತಲೆದೋರಿತ್ತು. ಈ ಬಾರಿ ಯಾಂತ್ರಿಕ ಮೀನುಗಾರಿಕೆಗೆ ಪೂರಕವಾದ ವಾತಾವರಣ ಕಂಡು ಬರುವ ಹಾಗೂ  ಉತ್ತಮ ಆದಾಯ ದೊರಕುವ ನಿರೀಕ್ಷೆಯಲ್ಲಿ  ಮೀನುಗಾರರಿದ್ದಾರೆ. ಈ ಬಾರಿ ಅನೇಕ  ನಿರೀಕ್ಷೆ-ಆಕಾಂಕ್ಷೆಗಳನ್ನು ಹೊತ್ತು ಮತ್ತೆ ಮೀನುಗಾರರು ನೀರಿಗಿಳಿಯುತ್ತಿದ್ದರೆ. ಇನ್ನೊಂದು ಕಡೆಯಲ್ಲಿ ಆತಂಕವೂ ಎದುರಾಗಿದೆ.

– ಉದಯ ಆಚಾರ್‌ ಸಾಸ್ತಾನ

Advertisement

Udayavani is now on Telegram. Click here to join our channel and stay updated with the latest news.

Next