ಮಲ್ಪೆ: ತಾಂತ್ರಿಕ ತೊಂದರೆ ಹಾಗೂ ಪ್ರಾಕೃತಿಕ ವಿಕೋಪದ ಸಂದರ್ಭ ಅನ್ಯರಾಜ್ಯದ ಬಂದರು ಪ್ರವೇಶಿಸುವ ನಿಟ್ಟಿನಲ್ಲಿ ಹೊರರಾಜ್ಯದ ಇಲಾಖಾ ಅಧಿಕಾರಿಗಳ ಮಟ್ಟದಲ್ಲಿ ಎಲ್ಲ ಮೀನುಗಾರರ ಮುಖಂಡರ ಸಮನ್ವಯ ಸಭೆ ನಡೆಸುವ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರ ಬರೆದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಕರಾವಳಿ ಕಾವಲು ಪಡೆಯ ಎಸ್ಪಿ ಅಬ್ದುಲ್ ಅಹದ್ ಹೇಳಿದರು.
ಮಲ್ಪೆ ಕರಾವಳಿ ಪೊಲೀಸ್ ಕಾವಲು ಪಡೆ ಕಚೇರಿಯಲ್ಲಿ ನಡೆದ ಉಡುಪಿ ಜಿಲ್ಲೆಯ ಮೀನುಗಾರ ಮುಖಂಡರೊಂದಿಗೆ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.
ಮೀನುಗಾರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ ಮಾತನಾಡಿ ಹೊರರಾಜ್ಯದಲ್ಲಿ ಮೀನುಗಾರಿಕೆ ನಡೆಸುವ ವೇಳೆ ವಿನಾಕಾರಣ ಅಲ್ಲಿನ ಮೀನುಗಾರಿಕೆ ಇಲಾಖೆ ದಂಡ ವಿಧಿಸುತ್ತಿದೆ ಮಾತ್ರವಲ್ಲದೇ ತಾಂತ್ರಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಮತ್ತು ಪ್ರಾಕೃತಿಕ ವಿಕೋಪದ ಸಂದರ್ಭ ಅಲ್ಲಿನ ಅಧಿಕಾರಿಗಳು ಬಂದರು ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು ಆನ್ಯರಾಜ್ಯದ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮತ್ತು ಮೀನುಗಾರರ ಸಭೆಯನ್ನು ಕರೆಯಬೇಕು ಮತ್ತು ರಾಜ್ಯಮಟ್ಟದ ಮೀನುಗಾರರ ಸಮನ್ವಯ ಸಭೆಯನ್ನು ನಡೆಸಬೇಕು ಎಂದು ಆಗ್ರಹಿಸಿದರು.
ಮೀನುಗಾರರು ತ್ಯಾಜ್ಯವನ್ನು ಸಮುದ್ರಕ್ಕೆ ಎಸೆಯದಂತೆ ಎಚ್ಚರ ವಹಿಸುವಂತೆ, ತ್ಯಾಜ್ಯ ವಿಲೇವಾರಿಗೆ ಮೀನುಗಾರಿಕೆ ಸಂಘಟನೆಗಳು ನಗರಸಭೆಯ ಗಮನಕ್ಕೆ ತಂದು ಕಸಸಂಗ್ರಹದ ತೊಟ್ಟಿಗಳನ್ನು ಇಡುವ ಬಗ್ಗೆ ನಿರ್ಣಯಿಸಲಾಯಿತು. ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಡಾ| ಲತಾ ನಾಯಕ್, ಡಾ| ತೇಜಸ್ವಿ ಅವರು ಆಯುಷ್ಮಾನ್ ಭಾರತ್ ಯೋಜನೆಯ, ಶರತ್‌ರಾಜ್ ಯಶಸ್ವಿನಿ ಯೋಜನೆ, ಅಂಚೆ ಇಲಾಖೆಯ ಅಧಿಕಾರಿ ಪೂರ್ಣಿಮಾ ಜನಾರ್ದನ್, ನಿಕಿಲ್‌ರಾಜ್ ಪೋಸ್ಟಲ್ ವಿಮೆಯ ಬಗ್ಗೆ ಮಾಹಿತಿ ನೀಡಿದರು.
ಮೀನು ಮಾರಾಟ ಫೆಡರೇಶನಿನ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ, ಅಗ್ನಿಶಾಮಕ ದಳದ ಅಧಿಕಾರಿ ಗಣೇಶ್ ಆಚಾರ್ಯ, ಸುಭಾಷ್ ಮೆಂಡನ್, ನಾಗರಾಜ್ ಸುವರ್ಣ, ರವಿರಾಜ್ ಸುವರ್ಣ, ಹರಿಶ್ಚಂದ್ರ ಕಾಂಚನ್, ವಿಕ್ರಂ ಸಾಲ್ಯಾನ್, ಪಾಂಡುರಂಗ ಕೋಟ್ಯಾನ್, ಸಂತೋಷ್ ಸಾಲ್ಯಾನ್, ಬೀಚ್ ಅಭಿವೃದ್ದಿ ಸಮಿತಿಯ ಗುತ್ತಿಗೆದಾರ, ಸುದೇಶ್ ಶೆಟ್ಟಿ, ಮುಳುಗು ತಜ್ಞ ಈಶ್ವರ್ ಮಲ್ಪೆ ಮೊದಲಾದವರು ಪಾಲ್ಗೊಂಡಿದ್ದರು.
ಅನಾಹುತವಾದಲ್ಲಿ 1093ಕ್ಕೆ ಕರೆ
ಮೀನುಗಾರಿಕೆ ನಡೆಸುವ ವೇಳೆ ಯಾವುದೇ ಆನಾಹುತವಾದಲ್ಲಿ ಸಿಎಸ್‌ಪಿ ಕಂಟ್ರೋಲ್ ರೂಂ. 1093 ಟೋಲ್ ಫ್ರಿ ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ವೇಳೆ ಅನುಮಾನಿತ ಬೋಟುಗಳ ಬಗ್ಗೆ ಮಾಹಿತಿ ನೀಡಿದವರಿಗೆ ಮತ್ತು ಸಮುದ್ರದಲ್ಲಿ ಜೀವ ರಕ್ಷಣೆ ಮಾಡಿದ ಮೀನುಗಾರರನ್ನು ಗುರುತಿಸಿ ಕರಾವಳಿ ಕಾವಲು ಪಡೆಯಿಂದ ಸಮ್ಮಾನಿಸಲಾಗುತ್ತದೆ.