Advertisement

ಮತ್ಸ್ಯಕ್ಷಾಮ: ಸಾಲದ ಸುಳಿಯಲ್ಲಿ ಮೀನುಗಾರರು

04:19 AM May 18, 2019 | Sriram |

ಕುಂದಾಪುರ: ಹಿಂದೆಂದಿಗಿಂತಲೂ ಹೆಚ್ಚು ಅನ್ನುವ ರೀತಿಯಲ್ಲಿ ಈ ಋತುವಿನಲ್ಲಿ ಮತ್ಸ್ಯಕ್ಷಾಮ ಉಂಟಾಗಿದ್ದು, ಮೀನುಗಾರಿಕೆಯನ್ನೇ ಆಶ್ರಯಿಸಿರುವ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ವೃತ್ತಿಯನ್ನು ನಂಬಿಕೊಂಡು ಲಕ್ಷಾಂತರ ರೂ. ಸಾಲ ಮಾಡಿರುವ ಬೆಸ್ತರು ಅದನ್ನು ತೀರಿಸಲಾಗದೇ ಒದ್ದಾಡುತ್ತಿದ್ದಾರೆ.

Advertisement

ಮೀನುಗಾರಿಕೆಯನ್ನೇ ನಂಬಿಕೊಂಡು, ಮನೆ ಕಟ್ಟಲು, ತಂಗಿ ಮದುವೆ, ಪುತ್ರನ ಚಿಕಿತ್ಸೆಗೆಂದು ಲಕ್ಷಾಂತರ ರೂ.ಸಾಲ ಮಾಡಿ, ಕೊನೆಗೆ ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಹೊಸಾಡು ಗ್ರಾಮದ ಕಂಚುಗೋಡಿನ ಸುಬ್ರಾಯ ಖಾರ್ವಿ ಇದಕ್ಕೊಂದು ಜ್ವಲಂತ ನಿದರ್ಶನ.

ಕುಟುಂಬಕ್ಕೆ ಆಧಾರವಾಗಿದ್ದರು..
ಸುಮಾರು 15 ವರ್ಷಗಳಿಂದ ಮೀನುಗಾರಿಕೆಯಲ್ಲಿ ತೊಡಗಿದ್ದ ಸುಬ್ರಾಯ ಖಾರ್ವಿ ಅವರು ರಜೆಮಾಡಿದ್ದೇ ಇಲ್ಲ. ತಾನು ಖಾಯಂ ಹೋಗುತ್ತಿದ್ದ ದೋಣಿಗೆ ರಜೆಯಿದ್ದರೂ ಬೇರೆ ದೋಣಿಗಳಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. 4 ವರ್ಷದ ಹಿಂದೆತಂಗಿಯ ವಿವಾಹ ಹಾಗೂ ಕಿರಿಯ ಪುತ್ರನ ಚಿಕಿತ್ಸೆಗಾಗಿ ರಾಷ್ಟ್ರೀಕೃತ ಬ್ಯಾಂಕಿನಿಂದ 4 ಲಕ್ಷ ರೂ., ಮನೆ ಕಟ್ಟಲೆಂದು ಸ್ವ- ಸಹಾಯ ಸಂಘವೊಂದರಿಂದ 6 ಲಕ್ಷ ರೂ. ಸಾಲ ಪಡೆದಿದ್ದರು. ಅವರು ಪತ್ನಿ ಲಕ್ಷ್ಮೀ ಖಾರ್ವಿ, ಪುತ್ರರಾದ ಗುರುಕಿರಣ್‌ (15), ಗುರು ಚರಣ್‌ (12) ಅವರನ್ನುಅಗಲಿದ್ದಾರೆ. ಹಿರಿಯ ಪುತ್ರ ಎಸೆಸೆಲ್ಸಿಮುಗಿದಿದ್ದು, ರಜೆಯಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಿರಿಯ ಪುತ್ರ 6ನೇ ತರಗತಿ ಮುಗಿಸಿದ್ದಾನೆ. ಕುಟಂಬಕ್ಕೆ ಅವರೇ ಆಧಾರವಾಗಿದ್ದರು. ಹಿಂದೆಲ್ಲ ವರ್ಷದಲ್ಲಿ 2.50 ಲಕ್ಷ ರೂ.ನಿಂದ 3 ಲಕ್ಷ ರೂ. ವರೆಗೆ ದುಡಿಯುತ್ತಿದ್ದರು. ಆದರೆ ಈ ಬಾರಿ ಏನು ಆದಾಯವೇ ಬಂದಿಲ್ಲ ಎನ್ನುತ್ತಾರೆ ಮನೆ ಮಂದಿ.

ಕೋಡಿ, ಗಂಗೊಳ್ಳಿ, ಮರವಂತೆ, ಕೊಡೇರಿ, ಉಪ್ಪುಂದ, ಶಿರೂರು ಸೇರಿ ಒಟ್ಟು 58,023 ಮೀನುಗಾರರಿದ್ದಾರೆ. 1,140 ಪಾತಿ ದೋಣಿಗಳು, 2,451 ನಾಡದೋಣಿಗಳು ಹಾಗೂ 335 ಯಾಂತ್ರೀಕೃತ ಬೋಟುಗಳಿವೆ.

ಸಾಲದ ಒಟ್ಟು ಲೆಕ್ಕವೇ ಇಲ್ಲ!
ಸಹಾಯ ಸಂಘಗಳು, ಸಹಕಾರಿ ಸಂಸ್ಥೆಗಳು, ಖಾಸಗಿ ಬ್ಯಾಂಕ್‌ಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಮೀನುಗಾರರು ಸಾಲ ಪಡೆದಿದ್ದಾರೆ. ಆದರೆ ಈ ಬಗ್ಗೆ ಜಿಲ್ಲಾವಾರು ಅಥವಾ ತಾಲೂಕುವಾರು ಮೀನುಗಾರರ ಸಾಲ ಎಷ್ಟಿದೆ ಎನ್ನುವ ಒಟ್ಟು ಲೆಕ್ಕ ಸಂಬಂಧಪಟ್ಟ ಇಲಾಖೆ ಸೇರಿದಂತೆ ಯಾರ ಬಳಿಯೂ ಇಲ್ಲ! ಹಾಗಾದರೆ ಮೀನುಗಾರರ ಸಾಲಮನ್ನಾ ಮಾಡುತ್ತೇವೆ ಎನ್ನುವ ರಾಜಕಾರಣಿಗಳು, ಒಟ್ಟು ಲೆಕ್ಕವೇ ಇಲ್ಲದೇ ಹೇಗೆ ಕ್ರಮ ಕೈಗೊಳ್ಳುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ. 2018 – 19ನೇ ಸಾಲಿನಲ್ಲಿ 58 ಸ್ವ – ಸಹಾಯ ಸಂಘಗಳಿಂದ 557 ಮಹಿಳಾ ಮೀನುಗಾರರಿಗೆ ಶೇ. 2 ಬಡ್ಡಿಯಲ್ಲಿ ನೀಡಲಾದ ಸಾಲದ ಲೆಕ್ಕ ಮಾತ್ರ ಇದೆ.

Advertisement

ಸಬ್ಸಿಡಿ ಹಣವೂ ಸಿಗುತ್ತಿಲ್ಲ
ಉಡುಪಿ ಜಿಲ್ಲೆಯಲ್ಲಿ ಪ್ರತಿ ವರ್ಷ 1,600 ಮೀನುಗಾರರಿಗೆ 7 ಕೋ.ರೂ. ಹಾಗೂ ದ.ಕ. ಜಿಲ್ಲೆಯಲ್ಲಿ 953 ಮೀನುಗಾರರಿಗೆ 6.32 ಕೋ.ರೂ. ಡೀಸೆಲ್ ಸಬ್ಸಿಡಿ ನೀಡಲಾಗುತ್ತಿದೆ. ಈ ವರ್ಷ ಸಕಾಲದಲ್ಲಿ ಸಿಕ್ಕಿಲ್ಲ ಎನ್ನುವುದು ಮೀನುಗಾರರ ಅಳಲು. ಇನ್ನು ಸರಕಾರ ಒಂದು ನಾಡದೋಣಿ ಪರ್ಮಿಟ್‌ಗೆ ಪ್ರತಿ ತಿಂಗಳಿಗೆ 300 ಲೀ. ಸೀಮೆಎಣ್ಣೆ ನೀಡಬೇಕು. ಆದರೆ ಈಗ ಉಡುಪಿ ಜಿಲ್ಲೆಯಲ್ಲಿರುವ 4,332 ನಾಡ ದೋಣಿಗಳ ಪೈಕಿ ಕೇವಲ 2,600 ದೋಣಿಗಳಿಗೆ ಮಾತ್ರ 300 ಲೀಟರ್‌ ನೀಡುತ್ತಿದ್ದು, ಬಾಕಿ ಉಳಿದಿದ್ದಕ್ಕೆ 200 ಲೀ. ಅಷ್ಟೇ ಕೊಡಲಾಗುತ್ತಿದೆ ಎನ್ನುತ್ತಾರೆ ಮೀನುಗಾರರು.

ಸಾಲ ಮನ್ನಾಕ್ಕೆ ಆಗ್ರಹ
ಮೀನಿಗೆ ಬರ, ಹವಾಮಾನ ವೈಪರೀತ್ಯ, ಆಗಾಗ ಸಂಭವಿಸುವ ಚಂಡಮಾರುತಗಳಿಂದಾಗಿ ಮೀನುಗಾರಿಕೆಗೆ ಈ ಬಾರಿ ಹಿಂದಿನ ವರ್ಷಗಳಿಗಿಂತಲೂ ದೊಡ್ಡ ಹೊಡೆತ ಬಿದ್ದಿದೆ. ಸರಿಯಾದ ಸಮಯಕ್ಕೆ ಡೀಸೆಲ್ ಸಬ್ಸಿಡಿ ಸಿಗುತ್ತಿಲ್ಲ. ನಾಡದೋಣಿಗಳಿಗೆ ಕೂಡ ಸಬ್ಸಿಡಿ ಸೀಮೆಎಣ್ಣೆ ಅಗತ್ಯದಷ್ಟು ಪೂರೈಕೆಯಾಗುತ್ತಿಲ್ಲ. ಲಕ್ಷಾಂತರ ರೂ. ಸಾಲ ಮಾಡಿ ಮರುಪಾವತಿ ಸಾಧ್ಯವಾಗದೆ ಸಂಕಷ್ಟದಲ್ಲಿರುವ ಮೀನುಗಾರರ ಸಾಲವನ್ನು ಕೂಡ ಸರಕಾರ ಮನ್ನಾ ಮಾಡಬೇಕು ಎನ್ನುವುದು ಮೀನುಗಾರರ ಆಗ್ರಹವಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳಬೇಡಿ
ಈಗ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಾಲ ಮನ್ನಾ ಕುರಿತಂತೆ ಯಾವುದೇ ಆಶ್ವಾಸನೆ ಕೊಡಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಿ, ಮೀನುಗಾರರಿಗೆ ಒಳಿತಾಗುವ ನಿರ್ಧಾರ ಕೈಗೊಳ್ಳಲಾಗುವುದು. ಆದರೆ ಮೀನುಗಾರರು ಯಾರು ಕೂಡ ಆತ್ಮಹತ್ಯೆ ಮಾಡಿಕೊಳ್ಳುವಂತ ನಿರ್ಧಾರ ತೆಗೆದುಕೊಳ್ಳಬೇಡಿ.
– ವೆಂಟಕರಾವ್‌ ನಾಡಗೌಡ, ಮೀನುಗಾರಿಕೆ ಸಚಿವರು

ಮೀನುಗಾರರ ಸಾವಿಗೆ ಬೆಲೆಯೇ ಇಲ್ಲ
ರೈತ ಸಾಲ ಕಟ್ಟಲಾಗದೇ ಆತ್ಮಹತ್ಯೆ ಮಾಡಿಕೊಂಡರೆ ಎಲ್ಲ ರಾಜಕಾರಣಿಗಳು, ಅಧಿಕಾರಿಗಳು ನೆರವಿಗೆ ಧಾವಿಸುತ್ತಾರೆ. ಅದೇ ಮೀನುಗಾರನೊಬ್ಬ ಮೀನಿನ ಬರದಿಂದಾಗಿ ಸಾಲ ಕಟ್ಟಲು ಕಷ್ಟವಾಗಿ, ಕೊನೆಗೆ ಆತ್ಮಹತ್ಯೆ ಮಾಡಿಕೊಂಡರೂ ಯಾರೂ ಕೇಳುವವರೇ ಇಲ್ಲ. ಯಾಕೆ ಈ ರೀತಿಯ ತಾರತಮ್ಯ?
– ವಾಸುದೇವ ಖಾರ್ವಿ ಕಂಚುಗೋಡು (ಮೃತ ಸುಬ್ರಾಯ ಖಾರ್ವಿ ಅವರ ಸಹೋದರ)

-ಪ್ರಶಾಂತ್‌ ಪಾದೆ
Advertisement

Udayavani is now on Telegram. Click here to join our channel and stay updated with the latest news.

Next