ಕಾರವಾರ: ಮೀನು ಮಾರಾಟ ಮಾಡುವ ಮಹಿಳೆಯರಿಗೆ ಮೀನುಗಾರಿಕಾ ಇಲಾಖೆಯಿಂದ ಅನೇಕ ಸೌಲತ್ತು ಸೌಲಭ್ಯ ಸಿಗಲಿದೆ. ಐಸ್ ಬಾಕ್ಸ್ ಖರೀದಿ, ಮೀನಿನ ಉಪ್ಪಿನಕಾಯಿ, ಮೀನಿನ ಸಾಂಬಾರ ಪೌಡರ್ ತಯಾರಿಕೆಗೆ ಶೂನ್ಯ ಬಡ್ಡಿ ಸಾಲದಂತಹ ಯೋಜನೆಗಳಿವೆ. ಮೀನುಗಾರ ಮಹಿಳೆಯರು ಇವುಗಳ ಪ್ರಯೋಜನ ಪಡೆದು ಸಬಲರಾಗಬೇಕು ಎಂದು ಮೀನುಗಾರಿಕಾ ಇಲಾಖೆ ಉಪನಿರ್ದೇಶಕಿ ಕವಿತಾ ಆರ್. ಕೆ. ಹೇಳಿದರು.
ಸೋಮವಾರ ಕಾರವಾರದ ದೈವಜ್ಞ ಸಭಾಭವನದಲ್ಲಿ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮೀನು ವ್ಯಾಪಾರಕ್ಕಾಗಿ ಇರುವ ದ್ವಿಚಕ್ರ ವಾಹನಗಳ ಮೇಲಿನ ಸಾಲ ಸೌಲಭ್ಯಕ್ಕೂ ರಿಯಾಯಿತಿ ಇದೆ. ಮಹಿಳೆಯರು ಮೀನುಗಾರಿಕೆ ಇಲಾಖೆಯ ಅನೇಕ ಯೋಜನೆಗಳ ಪ್ರಯೋಜನ ಪಡೆದು ವ್ಯಾಪಾರವನ್ನು ಉಪ ಕಸುಬನ್ನಾಗಿಸಿಕೊಂಡು ತಮ್ಮ ಆರ್ಥಿಕ ಜೀವನ ಮಟ್ಟ ಸುಧಾರಿಸಿಕೊಳ್ಳಿ ಎಂದರು.
ನಬಾರ್ಡನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ರೆಜಿಸ್ ಇಮ್ಯಾನುವೆಲ್ ಮಾತನಾಡಿ ಮೀನು ಉತ್ಪಾದಕ ಕಂಪನಿಗಳ ಮೂಲಕ ಮಹಿಳೆಯರು ತಮ್ಮ ಆರ್ಥಿಕ ಮಟ್ಟ ಸುಧಾರಿಸಿಕೊಂಡು ಉತ್ತಮ ಜೀವನ ನಡೆಸಲು ಸಾಧ್ಯ. ಮಹಿಳೆಯರಿಗೆ ಪೂರಕ ಚಟುವಟಿಕೆಗಳನ್ನು ನಡೆಸಲು ನಬಾರ್ಡನಿಂದ ಅಗತ್ಯ ಯಂತ್ರೋಪಕರಣಗಳ ಖರಿದಿಗೂ ನೆರವು ಸಿಗಲಿದೆ ಎಂದರು.
ಮನುವಿಕಾಸ ಸಂಸ್ಥೆ ನಿರ್ದೇಶಕ ಗಣಪತಿ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ ಮನುವಿಕಾಸ ಸ್ವಯಂ ಸೇವಾ ಸಂಸ್ಥೆ ಕಳೆದ 18 ವರ್ಷಗಳಿಂದ ನೆಲ-ಜಲ ಸಂರಕ್ಷಣೆ, ಪರಿಸರ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಹಲವಾರು ಕಾರ್ಯಚಟುವಟಿಕೆ ನಡೆಸುತ್ತ ಬಂದಿದೆ. ಈಗಾಗಲೇ ಉತ್ತರ ಕನ್ನಡ ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಯಲ್ಲಿ ಕೆರೆಗಳನ್ನು ನಿರ್ಮಿಸಲಾಗಿದೆ ಎಂದರು.
ಸಮಾವೇಶದಲ್ಲಿ ನ್ಯಾಯವಾದಿ ಜಯಂತಿ ಮತ್ತು ನಯನಾ ನೀಲಾವರ್ ಮಹಿಳೆ ಮತ್ತು ಸವಾಲುಗಳು ವಿಷಯದ ಸಂವಾದ ನಡೆಸಿದರು. ಸಮಾವೇಶದಲ್ಲಿ ಸ್ವಸಹಾಯ ಸಂಘದ ಮಹಿಳೆಯರು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್.ಡಿ.ಎಮ್ ರುದ್ರೇಶ, ಮಹಿಳಾ ಮೀನು ಮಾರಾಟಗಾರರ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷೆ ಸುಜಾತಾ ದುರ್ಗೇಕರ, ಗೋಕರ್ಣ ತರಕಾರಿ ಬೆಳೆಗಾರರ ರೈತ ಉತ್ಪಾದಕರ ಸಂಘದ ಸದಸ್ಯೆ ಮಾದೇವಿ ಗೌಡ, ಸೇರಿದಂತೆ ಮನುವಿಕಾಸ ಸಂಸ್ಥೆ ಸಿಬ್ಬಂದಿ ಗೋಪಾಲ ಬಾಡ್ಕರ್, ಮಹೇಶ ನಾಯ್ಕ, ರಮೇಶ ನಾಯ್ಕ, ನಾಗರಾಜ ಗೌಡ, ನಿರಂಜನ ಕದಮ್, ಗಣಪತಿ ಹೆಗಡೆ, ಗಣಪತಿ ಗಾಮದ, ಸುನೀತಾ ಫರ್ನಾಂಡಿಸ್, ಗೀತಾ ನೀಲೆಕಣಿ, ಮಾಧುರಿ ಪಟಗಾರ, ಕುಸುಮಾ ಕೆ.ಎಸ್ ಸೇರಿದಂತೆ ಸಂಸ್ಥೆಯ ಸ್ವಯಂ ಸೇವಕರು ಮತ್ತಿತರರು ಇದ್ದರು.