Advertisement

ಕರಾವಳಿಯಲ್ಲಿ ಮೀನಿನ ದರ ಏರಿಕೆ

02:06 AM Apr 21, 2019 | Sriram |

ಮಂಗಳೂರು/ಉಡುಪಿ:ಲೋಕಸಭಾ ಚುನಾವಣೆಯ ಪರಿಣಾಮ ಕರಾವಳಿಯ ಮೀನುಗಾರಿಕೆಗೂ ತಟ್ಟಿದೆ. ಇಲ್ಲಿನ ಮೀನು ಗಾರಿಕೆಯಲ್ಲಿ ದುಡಿಯುವ ಬಹುತೇಕ ಕಾರ್ಮಿಕರು ಒಡಿಶಾ,ಕೇರಳ, ತಮಿಳುನಾಡು, ಆಂಧ್ರದವರಾಗಿದ್ದು, ತಮ್ಮ ರಾಜ್ಯಗಳಿಗೆ ಮತದಾನ ಮಾಡಲು ತೆರಳಿರುವುದರಿಂದ ಮೀನುಗಾರಿಕೆಗೆ ಕಾರ್ಮಿಕರ ಕೊರತೆ ಎದು ರಾಗಿದೆ. ಪರಿಣಾಮವಾಗಿ ಮೀನುಗಳ ಬೆಲೆಯೂ ಏರಿದೆ!

Advertisement

ಮೂರನೇ ಹಂತದ ಚುನಾವಣೆ ಎ. 23ರಂದು ಜರಗಲಿದ್ದು, ಒಡಿಶಾ ದಲ್ಲಿ ಮೊದಲ ಮೂರೂ ಹಂತಗಳಲ್ಲಿ ಚುನಾವಣೆ ನಡೆಯುತ್ತದೆ. ಹಾಗಾಗಿ ಒಡಿಶಾದ ಮೀನುಗಾರ ಕಾರ್ಮಿಕರ ಕೊರತೆ ಎಪ್ರಿಲ್‌ 25ರ ವರೆಗೂ ಇರಬಹುದು ಎಂದು ಮಂಗಳೂರಿನ ಟ್ರಾಲ್‌ಬೋಟ್‌ ಮೀನುಗಾರರ ಸಂಘ ತಿಳಿಸಿದೆ. ಮಲ್ಪೆ ಬಂದರಿನಲ್ಲಿ 700ಕ್ಕೂ ಅಧಿಕ ಬೋಟುಗಳು, ಮಂಗಳೂರು ಬಂದರಿನಲ್ಲಿ 250ಕ್ಕೂ ಹೆಚ್ಚಿನ ಬೋಟುಗಳು ಲಂಗರು ಹಾಕಿವೆ. ಸಹಜವಾಗಿಯೇ ಮೀನಿನ ದರದಲ್ಲೂ ಏರಿಕೆಯಾಗಿದೆ.

ಮಂಗಳೂರಿನ
ಹೆಚ್ಚಿನ ಬೋಟ್‌ಗಳು
ಮಹಾರಾಷ್ಟ್ರ, ಗೋವಾ, ರತ್ನಗಿರಿ ಕಡೆಗೆ ತೆರಳುತ್ತವೆ. 11 ದಿನಗಳ ಬಳಿಕ ಮರಳಿ ಬರುವ ಪ್ರತಿಯೊಂದು ಬೋಟಿನಲ್ಲಿ ಸುಮಾರು 7 ಲಕ್ಷ ರೂ. ಮೌಲ್ಯದ ಮೀನುಗಳನ್ನು ಹೊತ್ತು ತರುತ್ತವೆ. ಆದರೆ ಬೋಟುಗಳ ಸಂಖ್ಯೆ ಹೆಚ್ಚಳ, ಹವಾಮಾನ ವೈಪರೀತ್ಯ ಕಾರಣದಿಂದಾಗಿ ಒಂದು ಟ್ರಿಪ್‌ನಲ್ಲಿ ಸುಮಾರು 75 ಸಾವಿರ ರೂ. ನಷ್ಟ ಉಂಟಾಗುತ್ತಿದೆ. ಈ ನಷ್ಟ ಸರಿದೂಗಿಸಲು ಅದರ ಹೊರೆ ಗ್ರಾಹಕರ ಮೇಲೆ ಬೀಳುತ್ತಿದೆ.

ಶೇ. 30ರಷ್ಟು ಇಳಿಮುಖ
ಆಗಸ್ಟ್‌ನಿಂದ ಮೀನುಗಾರಿಕೆ ಆರಂಭವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 30ರಷ್ಟು ಮೀನುಗಾರಿಕೆ ಕಡಿಮೆಯಾಗಿದೆ ಎನ್ನುತ್ತಾರೆ ಮೀನುಗಾರ ಮುಖಂಡ ಸತೀಶ್‌ ಕುಂದರ್‌. ಮೀನಿನ ಅಭಾವ ವಿಪರೀತವಾಗಿದೆ. ಮುಖ್ಯವಾಗಿ ಅತೀ ಹೆಚ್ಚು ಬೇಡಿಕೆಯಿರುವ ಅಂಜಲ್‌ ಮತ್ತು ಬಂಗುಡೆ ಮೀನು ಲಭ್ಯವಾಗುತ್ತಿಲ್ಲ ಎನ್ನುತ್ತಾರೆ ಅವರು.

ಮೀನಿನ ದರ ಏರಿಕೆ
ದ..ಕ., ಉಡುಪಿ ಮಾರುಕಟ್ಟೆಯಲ್ಲಿ ಅಂಜಲ್‌ ಮೀನಿಗೆ ಸಾಮಾನ್ಯ ದಿನಗಳಲ್ಲಿ ಒಂದು ಕೆ.ಜಿ.ಗೆ ಸುಮಾರು 600 ರೂ. ಇತ್ತು. ಇದೀಗ 800 ರೂ.ಗೆ ಏರಿಕೆಯಾಗಿದೆ. ಬೆಳ್ಳಿ ಮೀನು ಕೆ.ಜಿ.ಗೆ 180 ರೂ. ಇತ್ತು. ಇದೀಗ 250 ರೂ.ಗೆ ಏರಿಕೆಯಾಗಿದೆ. ಮಧ್ಯಮ ಗಾತ್ರದ ಬಂಗುಡೆಗೆ ಈ ಹಿಂದೆ 90 ರೂ. ಇತ್ತು ಇದೀಗ 150 ರೂ.ಗೆ ಏರಿಕೆಯಾಗಿದೆ. ಕೊಡ್ಡಾಯಿ ಮಧ್ಯಮ ಗಾತ್ರದ ಮೀನಿಗೆ ಈ ಹಿಂದೆ ಕೆ.ಜಿ.ಗೆ 140 ರೂ.ಇತ್ತು. ಇದೀಗ 180 ರೂ.ಗೆಏರಿಕೆಯಾಗಿದೆ. ಬೂತಾಯಿ ದರ ಕೆ.ಜಿ.ಗೆ 150 ರೂ., ಬಂಗುಡೆ ಕೆ.ಜಿ.ಗೆ 180ರಿಂದ 200 ರೂ. ಇದೆ. ಅಂಜಲ್‌ ಮೀನಿನ ದರವೂ ದುಪ್ಪಟ್ಟಾಗಿದ್ದು, ಕೆ.ಜಿ.ಗೆ 800ರಿಂದ 1,200 ರೂ. ಇದೆ. ಮೀನುಗಳ ದರ ಹೆಚ್ಚಳ ಮತ್ತು ಲಭ್ಯತೆಯ ಕೊರತೆಯಿಂದ ನಗರದ ಕೆಲವೊಂದು ಮಾಂಸಾಹಾರಿ ಹೊಟೇಲ್‌ಗ‌ಳಿಗೆ ತೊಂದರೆ ಉಂಟಾಗಿದೆ.

Advertisement

ಮೀನುಗಳ ಅಲಭ್ಯತೆ ಮತ್ತು ಚುನಾವಣೆಯ ಪರಿಣಾಮದಿಂದ ಮೀನಿದ ದರ ಹೆಚ್ಚಳವಾಗಿದೆ. ಮತದಾನದ ಕಾರಣ ತಮಿಳುನಾಡು, ಆಂಧ್ರಪ್ರದೇಶದ ಮಂದಿ ತಮ್ಮ ಊರುಗಳಿಗೆ ತೆರಳಿದ್ದು, ಕಳೆದ ಒಂದು ವಾರದಿಂದ ಸುಮಾರು 250ರಷ್ಟು ಬೋಟ್‌ಗಳು ಸಮುದ್ರಕ್ಕೆ ಇಳಿದಿಲ್ಲ.
– ನಿತಿನ್‌ ಕುಮಾರ್‌,
ಟ್ರಾಲ್‌ ಬೋಟ್‌ ಮೀನುಗಾರರ ಸಂಘದ ಅಧ್ಯಕ್ಷ

ಸಮುದ್ರದಲ್ಲಿ ಮೀನಿನ ಕೊರತೆಯೂ ಎದುರಾಗಿರುವುದರಿಂದ ಮೀನುಗಾರರಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ವರ್ಷದಿಂದ ವರ್ಷಕ್ಕೆ ಮೀನಿನ ಕೊರತೆ ಕಂಡುಬರುತ್ತಿರುವುದು ಆತಂಕಕಾರಿಯಾಗಿದೆ.
– ಸತೀಶ್‌ ಕುಂದರ್‌, ಮೀನುಗಾರರ ಸಂಘದ ಅಧ್ಯಕ್ಷರು, ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next