Advertisement

ಮೀನು ಕೊರತೆ: ಹೊರ ರಾಜ್ಯಗಳಿಗೆ ಕಳಿಸಲು ತೊಂದರೆ

11:36 AM Sep 08, 2019 | Team Udayavani |

ಕಾರವಾರ: ಆಳ ಸಮುದ್ರದಲ್ಲಿ ವಾತಾವರಣ ಪೂರಕವಾಗಿಲ್ಲದ ಕಾರಣ ಕಳೆದ 15 ದಿನಗಳಿಂದ ಮೀನುಗಾರಿಕೆಗೆ ಸ್ತಬ್ಧವಾಗಿದೆ. ಆಳ ಸಮುದ್ರದಲ್ಲಿ ಭಾರೀ ಅಲೆಗಳು ಹಾಗೂ ಭಾರಿ ಗಾಳಿ ಪರಿಣಾಮ ಟ್ರಾಲರ್‌ ಮತ್ತು ಪರ್ಶಿಯನ್‌ ಬೋಟ್‌ಗಳು ಕಡಲಿಗೆ ಇಳಿದಿಲ್ಲ. ಮೀನುಗಾರಿಕೆ ಮೇಲೆ ಭಾರೀ ಪರಿಣಾಮ ಬೀರಿದ್ದು, ವ್ಯಾಪಾರ ವಹಿವಾಟು ಇಲ್ಲದೇ ಮೀನುಗಾರರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಇತ್ತ ಮೀನು ಆಹಾರ ಪ್ರಿಯರಿಗೂ ಸಹ ತಿನ್ನಲು ಮೀನು ಸಿಗದೆ ಪರದಾಡುವಂತಾಗಿದೆ.

Advertisement

ಮೀನು ಆಹಾರದಿಂದ ಕೋಳಿ ಹಾಗೂ ಆಡು, ಕುರಿ ಮಾಂಸಕ್ಕೆ ಹಲವರು ಮೊರೆ ಹೋಗಿದ್ದಾರೆ. ರಾಜ್ಯ ಕರಾವಳಿಯಲ್ಲಿ ಮೀನುಗಾರಿಕೆ ಸಾಧ್ಯವಾಗಿಲ್ಲ. ದಡದ ಮೀನುಗಾರಿಕೆ ಸಹ ಅಲ್ಪ ಪ್ರಮಾಣದಲ್ಲಿ ನಡೆಯುತ್ತಿದ್ದು, ಅಲ್ಲಿ ಸಹ ಮೀನು ಸಿಗುತ್ತಿಲ್ಲ. ಹಾಗಾಗಿ 2019 ಮೀನು ಕೊರತೆ ವರ್ಷ ಎಂದು ಘೋಷಿಸುವ ಸನ್ನಿವೇಶ ನಿರ್ಮಾಣವಾಗಿದೆ. ಸಾವಿರಾರು ಮೆಟ್ರಿಕ್‌ ಟನ್‌ ಮೀನು ಹೊರ ರಾಜ್ಯ ಮತ್ತು ಹೊರ ದೇಶಗಳಿಗೆ ರಫ್ತಾಗುತ್ತಿತ್ತು. ಹವಾಮಾನ ವೈಪರಿತ್ಯದಿಂದ ಮೀನುಗಾರಿಕೆಯೇ ಸಾಧ್ಯವಾಗಿಲ್ಲ. ಆಗಸ್ಟ್‌ ಮೊದಲ ಮೂರು ದಿನ ಮೀನುಗಾರಿಕೆ ನಡೆಯಿತು. ನಂತರ ನಿರಂತರ ಮಳೆ ಹಾಗೂ ತೂಫಾನ್‌ ಕಾರಣವಾಗಿ ಮೀನುಗಾರಿಕೆ ಸಾಧ್ಯವಾಗಿಲ್ಲ. ಇನ್ನು ಹೊರ ರಾಜ್ಯಗಳ ಯಾಂತ್ರೀಕೃತ ಬೋಟ್‌ಗಳು ಕಾರವಾರ ಕಡಲಿನಲ್ಲಿ ಲಂಗುರ ಹಾಕಿ ವಾರ ಕಳೆದಿದೆ. ತಮಿಳುನಾಡು, ಕೇರಳ, ಮಹಾರಾಷ್ಟ್ರ, ಗೋವಾ ರಾಜ್ಯದ ಕೆಲ ಯಾಂತ್ರೀಕೃತ ಬೋಟ್‌ಗಳು ಕಾರವಾರ ಸುತ್ತಮುತ್ತ ಸಮುದ್ರ ಹಾಗೂ ನಡುಗಡ್ಡೆಗಳ ಸಮೀಪ ಲಂಗುರ ಹಾಕಿವೆ. ಕಾರವಾರ ಮೀನುಗಾರಿಕಾ ಬಂದರಿನಲ್ಲಿ ಸಾವಿರಾರು ಬೋಟ್‌ಗಳು ಕೆಲಸವಿಲ್ಲದೆ ನಿಂತಿವೆ.

ಹವಾಮಾನ ಇಲಾಖೆ ಎಚ್ಚರ: ಇನ್ನು ಮೂರು ದಿನ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣವಿದೆ. ಮೀನುಗಾರಿಕಾ ಇಲಾಖೆ ಸಹ ಯಾಂತ್ರೀಕೃತ ಮೀನುಗಾರರಿಗೆ ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಹಾಗಾಗಿ ಯಾಂತ್ರೀಕೃತ ಮೀನುಗಾರಿಕೆ ಕಳೆದ 15 ದಿನಗಳಿಂದ ಸ್ತಬ್ಧವಾಗಿದೆ. ಈ ವೇಳೆಗೆ ಹೊರ ರಾಜ್ಯಗಳಿಗೆ ಹತ್ತಿರ ಹತ್ತಿರ ಸಾವಿರ ಮೆಟ್ರಿಕ್‌ ಟನ್‌ ಮೀನು ರಫ್ತಾಗುತ್ತಿತ್ತು. ಈ ವರ್ಷ ಮೀನುಗಾರಿಕೆ ಸಾಧ್ಯವಾಗಿಲ್ಲ. ಆಳ ಸಮುದ್ರದಲ್ಲಿನ ಭಾರೀ ಗಾಳಿ ಕಾರಣ ಮೀನುಗಾರಿಕೆ ನಡೆದಿಲ್ಲ. ಮೀನುಗಾರಿಕೆ ಮೇಲೆ ಹೊಡೆತ ಬಿದ್ದಿರುವುದು ನಿಜ ಎನ್ನುತ್ತಾರೆ ಮೀನುಗಾರಿಕಾ ನಿರ್ದೇಶಕ ಪಿ.ನಾಗರಾಜು. ಯಾಂತ್ರೀಕೃತ ಮೀನುಗಾರಿಕೆ ಮೇಲೆ ವ್ಯತಿರಿಕ್ತ ಪರಿಣಾಮಕ್ಕೆ ಹವಾಮಾನ ವೈಪರಿತ್ಯ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.

ಕೈಕಟ್ಟಿ ಕುಳಿತ ಕಾರ್ಮಿಕರು: ಮೀನುಗಾರಿಕೆ ಸಾಧ್ಯವಾಗದೇ ನೂರಾರು ಸಂಖ್ಯೆಯ ಹೊರ ರಾಜ್ಯದ ಹಾಗೂ ಸ್ಥಳೀಯ ಕಾರ್ಮಿಕರು ಸುಮ್ಮನೇ ಕೂರುವಂತಾಗಿದೆ. ಕೆಲವರಂತೂ ದಿನಗಳನ್ನು ಹೇಗೆ ಕಳೆಯುವುದು ಎಂದು ತಲೆಯ ಮೇಲೆ ಕೈ ಹೊತ್ತಿದ್ದಾರೆ. ಶ್ರಮಜೀವಿಗಳ ಬದುಕು ಈ ವರ್ಷ ದುಸ್ತರವಾಗಿದೆ. ಸರ್ಕಾರಗಳು ಹೆಚ್ಚಿನ ನೆರವಿಗೆ ಮುಂದೆ ಬರುತ್ತಿಲ್ಲ ಎಂಬ ಅಸಮಾಧಾನ ಕಾರ್ಮಿಕರಿಂದ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next