ಗಂಗೊಳ್ಳಿ: ಸರಕಾರ ಮೀನುಗಾರಿಕೆಗೆ ಅನುಕೂಲ ಮಾಡಿಕೊಟ್ಟಿದ್ದು, ಸರಕಾರದ ಆದೇಶ ಮತ್ತು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿ ಸಬೇಕು. ಮೀನುಗಾರರು ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳಬೇಕು ಮತ್ತು ಮಾಸ್ಕ್ ಧರಿಸಬೇಕು. ದೋಣಿಯಲ್ಲಿ ಮೀನು ಹರಾಜು ಹಾಕುವುದು, ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
ಮೀನುಗಳನ್ನು ತಂದು ನಿಗದಿತ ಸಮಯ ದೊಳಗೆ ವಿಲೇವಾರಿ ಮಾಡಬೇಕು ಎಂದು ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೀಪ ಜಿ.ಎಸ್. ಹೇಳಿದರು.ಗಂಗೊಳ್ಳಿಯ ಲೈಟ್‌ಹೌಸ್ ಮತ್ತು ಹೊಸಾಡು ಗ್ರಾಮದ ಕಂಚುಗೋಡು ಪ್ರದೇಶದಲ್ಲಿ ಮೀನುಗಾರರಿಗೆ ರವಿವಾರ ಸಂಜೆ ಮೀನುಗಾರಿಕೆ ನಡೆಸುವ, ಹರಾಜು ಪ್ರಕ್ರಿಯೆ ಹಾಗೂ ಮಾರಾಟದ ಕುರಿತು ಮಾಹಿತಿ ನೀಡಿದರು.
ಮೀನು ಮಾರಾಟ ಮಾಡುವ ಸಲುವಾಗಿ ಖರೀದಿ ಮಾಡಲು ಬರುವವರಿಗೆ ಇಲಾಖೆ ಯಿಂದ ಪಾಸ್ ನೀಡಲು ಉದ್ದೇಶಿಸಲಾಗಿದ್ದು, ಪಾಸ್ ಹೊಂದಿದವರಿಗೆ ಮಾತ್ರ ಮೀನು ಖರೀದಿಸಲು ಅವಕಾಶ ನೀಡಲಾಗುವುದು. ಈ ಪ್ರದೇಶಗಳಲ್ಲಿ ಅನಧಿಕೃತವಾಗಿ ಸಂಚರಿಸುವ ಬೈಕ್ ಮತ್ತು ಇನ್ನಿತರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಯಾವುದೇ ಸಮಸ್ಯೆ ಬಾರದ ಹಾಗೆ ಉತ್ತಮ ರೀತಿಯಲ್ಲಿ ಮೀನುಗಾರಿಕೆ ನಡೆಸಬೇಕು. ಸಮಸ್ಯೆಗಳಿದ್ದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.
ಠಾಣೆಯ ಉಪನಿರೀಕ್ಷಕ ಭೀಮಾಶಂಕರ ಎಸ್. ಮಾಹಿತಿ ನೀಡಿ ಮೀನುಗಾರರು ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ದಿವಾಕರ ಎನ್.ಖಾರ್ವಿ, ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಹೊಸಾಡು ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಉಪಾಧ್ಯಕ್ಷೆ ವಂದನಾ ಖಾರ್ವಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ, ಉಪಾಧ್ಯಕ್ಷ ಸೂರಜ್ ಖಾರ್ವಿ, ನಿರ್ದೇಶಕ ಚಂದ್ರ ಖಾರ್ವಿ, ವ್ಯವಸ್ಥಾಪಕ ಮೋಹನ ಖಾರ್ವಿ, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ ಉಪಸ್ಥಿತರಿದ್ದರು.