ಮೀನುಗಾರನ ಬಲೆಗೆ ದೊಡ್ಡದೊಂದು ಮೀನು ಸಿಕ್ಕಿಬಿದ್ದಿತು. ಬಲೆಯಿಂದ ಮೀನನ್ನು ಬಿಡಿಸಿ ಕೈಯಲ್ಲಿ ಎತ್ತಿಕೊಂಡ. ಒಡನೆಯೇ ಒಂದು ಅಚ್ಚರಿ ಬೆಳವಣಿಗೆಯೊಂದು ಜರುಗಿತು. ಮೀನು ಮಾತನಾಡತೊಡಗಿತು . ಅದು “ಅಯ್ನಾ, ನನ್ನನ್ನು ದಯಮಾಡಿ ಬಿಟ್ಟುಬಿಡು’ ಎಂದಿತು.
ಒಂದು ಊರಿನಲ್ಲಿ ಒಬ್ಬ ಜಿಪುಣ ಮೀನುಗಾರನಿದ್ದ. ನದಿಯಲ್ಲಿ ಮೀನು ಹಿಡಿದು ಮಾರಿ ಜೀವನ ಸಾಗಿಸುತ್ತಿದ್ದ. ಅವನ ಬಳಿ ಸಾಕಷ್ಟು ಹಣವಿದ್ದರೂ ಅಗತ್ಯ ಬಿದ್ದಾಗಲೂ ಖರ್ಚು ಮಾಡಲು ಹಿಂದೆಮುಂದೆ ನೋಡುತ್ತಿದ್ದ. ಒಂದು ದಿನ ಮೀನುಗಾರನ ಬಲೆಗೆ ದೊಡ್ಡದೊಂದು ಮೀನು ಸಿಕ್ಕಿಬಿದ್ದಿತು. ಮೀನುಗಾರನಿಗೆ ತುಂಬಾ ಖುಷಿಯಾಯಿತು. ಬಲೆಯಿಂದ ಮೀನನ್ನು ಬಿಡಿಸಿ ಕೈಯಲ್ಲಿ ಎತ್ತಿಕೊಂಡ. ಒಡನೆಯೇ ಒಂದು ಅಚ್ಚರಿ ಬೆಳವಣಿಗೆಯೊಂದು ಜರುಗಿತು. ಮೀನು ಮಾತನಾಡತೊಡಗಿತು . ಅದು “ಅಯ್ನಾ, ನನ್ನನ್ನು ದಯಮಾಡಿ ಬಿಟ್ಟುಬಿಡು’ ಎಂದಿತು. ಮೀನು ಮಾತನಾಡುವುದನ್ನು ಕೇಳಿ ಮೀನುಗಾರನಿಗೆ ಆಶ್ಚರ್ಯವಾಯಿತು. ಅವನು “ನಾನು ನಿನ್ನನ್ನು ಬಿಟ್ಟುಬಿಟ್ಟರೆ ನನಗೇನು ಕೊಡುತ್ತೀಯಾ?’ ಎಂದು ಕೇಳಿದನು. ಅದಕ್ಕೆ ಮೀನು “ನಾನು ಒಂದು ವರವನ್ನು ನೀಡುತ್ತೇನೆ. ನೀನು ಅಪೇಕ್ಷಿಸುವ ಮೂರು ಕೋರಿಕೆಗಳು ಈಡೇರಲಿವೆ’ ಎಂದಿತು. ಸಂತಸಗೊಂಡ ಮೀನುಗಾರ ಮೀನನ್ನು ಮತ್ತೆ ನದಿಯಲ್ಲೇ ಬಿಟ್ಟುಬಿಟ್ಟ. ಈಗ ಅವನ ಬಳಿ ಮೂರು ಅವಕಾಶಗಳಿದ್ದವು. ಆತ ಏನು ಬೇಕಾದರೂ ಕೇಳಿಕೊಳ್ಳಬಹುದಿತ್ತು. ಆದರೆ ಮನೆಗೆ ಹೋಗಿ ಪತ್ನಿ ಜೊತೆ ಸಮಾಲೋಚಿಸಿ ಕೋರಿಕೊಳ್ಳೋಣ ಎಂದುಕೊಂಡು ಬಲೆ ಮತ್ತು ಮೀನಿನ ಬುಟ್ಟಿಯನ್ನು ಕತ್ತೆಯ ಮೇಲೆ ಹೊರಿಸಿ ಮನೆಯ ಕಡೆಗೆ ಹೊರಟ.
ಮೀನುಗಾರನಿಗೆ ಆದಷ್ಟು ಬೇಗನೆ ಮನೆಗೆ ಹೋಗುವ ತವಕ, ಆದರೆ ಕತ್ತೆ ನಿಧಾನವಾಗಿ ನಡೆಯುತ್ತಿತ್ತು. ಏಕೆಂದರೆ ಆ ದಿನ ಮೀನುಗಾರ ದುಡ್ಡು ಉಳಿಸುವ ಸಲುವಾಗಿ ಕ್ತತೆಗೆ ತಿನ್ನಲು ಏನನ್ನೂ ನೀಡಿರಲಿಲ್ಲ. ಕತ್ತೆಯ ನಿಧಾನ ನಡಿಗೆಯಿಂದ ಬೇಸತ್ತ ಮೀನುಗಾರ ಸಿಟ್ಟಿನಿಂದ ಅದಕ್ಕೆ ಜೋರಾಗಿ ಎರಡು ಪೆಟ್ಟು ಕೊಟ್ಟ. ಕತ್ತೆ ಮುಂದಕ್ಕೆ ಹೋಗದೆ ನಿಂತುಬಿಟ್ಟಿತು. ಏನು ಮಾಡಿದರೂ ಅಲ್ಲಾಡಲಿಲ್ಲ. ಮೀನುಗಾರನ ಸಿಟ್ಟು ನೆತ್ತಿಗೇರಿತು. ಅವನು “ಈ ಕತ್ತೆ ಸತ್ತು ಹೋದರೇ ಚೆನ್ನಾಗಿತ್ತು’ ಎಂದುಬಿಟ್ಟನು. ತಕ್ಷಣ ಕತ್ತೆ ಸತ್ತು ಬಿದ್ದಿತು. ಆಗಲೇ ಮೀನುಗಾರನಿಗೆ ಮೀನಿನ ವರದ ನೆನಪಾಗಿದ್ದು. ಕತ್ತೆ ಬದುಕಿ ಬರಲಿ ಎಂದರೆ ಕತ್ತೆ ಮತ್ತೆ ಬದುಕುತ್ತಿತ್ತು ಆದರೆ ಈಗಾಗಲೇ ಒಂದು ಅವಕಾಶ ಕಳೆದುಕೊಂಡಿದ್ದ ಮೀನುಗಾರ ಮತ್ತೆ ಇನ್ನೊಂದು ಅವಕಾಶ ಕಳೆದುಕೊಳ್ಳಲು ಸಿದ್ಧನಿರಲಿಲ್ಲ. ಕತ್ತೆಯ ಮೇಲೆ ಹೊರಿಸಿದ್ದ ಸಾಮಾನುಗಳನ್ನು ತಾನೇ ತಲೆಯ ಮೇಲೆ ಹೇರಿಕೊಂಡು ಮನೆ ತಲುಪಿದ. ಅವನ ಹೆಂಡತಿ “ನಮ್ಮ ಕತ್ತೆ ಎಲ್ಲಿದೆ?’ ಎಂದು ಕೇಳಿದಳು. ಸುಸ್ತಾಗಿದ್ದ ಮೀನುಗಾರ ಉತ್ತರ ಕೊಡಲಿಲ್ಲ. ಆಕೆ ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳಿದಳು. ಆಗಲೂ ಅವನು ಸುಮ್ಮನಿದ್ದ. ಆವಳಿಗೆ ಸಿಟ್ಟು ಬಂದು “ರೀ… ನೀವು ನನ್ನೊಡನೆ ಏಕೆ ಮಾತನಾಡುತ್ತಿಲ್ಲ?’ ಎಂದು ಏರುದನಿಯಲ್ಲಿ ಕೇಳಿದಳು. ಮೀನುಗಾರನ ತಾಳ್ಮೆತಪ್ಪಿ, “ಏ… ನೀನೇಕೆ ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳುತ್ತೀ… ನಿನ್ನ ಬಾಯಿ ಮುಚ್ಚಿಹೋಗಬಾರದೇ…?’ ಎಂದು ಅಬ್ಬರಿಸಿದ. ಮರುಕ್ಷಣವೇ ಹೆಂಡತಿಯ ಬಾಯಿ ಮುಚ್ಚಿಹೋಗಿ ಹೊಲಿಗೆ ಹಾಕಿದಂತೆ ಅವಳ ತುಟಿಗಳು ಹೆಣೆದುಕೊಂಡವು. ಮೀನುಗಾರನ ಎರಡನೇ ಅವಕಾಶವೂ ಖಾಲಿಯಾಯಿತು.
ಹೆಂಡತಿ ಕ್ಷಣಕಾಲ ಸಿಡಿಲು ಬಡಿದವಳಂತೆ ಕೂತಿದ್ದಳು. ಆಕೆ ಒಂದೇ ಸಮನೆ ಕಣ್ಣೀರು ಸುರಿಸುತ್ತಾ ಬಿಕ್ಕಳಿಸತೊಡಗಿದಳು. ಮೀನುಗಾರನ ಬಳಿ ಇನ್ನೊಂದೇ ಅವಕಾಶ ಉಳಿದಿತ್ತು. ಅವನು ಮೀನು ಕೊಟ್ಟ ವರದಿಂದ ಆಗರ್ಭ ಶ್ರೀಮಂತನಾಗುವ ಕನಸು ಕಂಡಿದ್ದ. ದೊಡ್ಡ ಅರಮನೆಯಲ್ಲಿ ತಾನು ಮತ್ತು ಪತ್ನಿ ಇಬ್ಬರೂ ರಾಜ ರಾಣಿಯಂತೆ ಬದುಕಬೇಕೆಂದುಕೊಂಡಿದ್ದ. ಆದರೆ ಈಗ, ಪತ್ನಿಯ ಬಾಯಿಗೆ ಹೊಲಿಗೆಗಳು ಬಿದ್ದಿವೆ. ಅಲ್ಲದೆ ಬರೀ ಒಂದೇ ಅವಕಾಶ ಉಳಿದುಕೊಂಡಿದೆ. ಅವನಿಗೆ ತನ್ನ ಪತ್ನಿಯ ಸ್ಥಿತಿ ನೋಡಲು ಆಗಲಿಲ್ಲ. ಅವನು “ಹೆಂಡತಿ ಬಾಯಿ ಬರಲಿ’ ಎಂದು ಕೇಳಿಕೊಂಡ. ಮರುಕ್ಷಣವೇ ಅವಳು ,ರಿಹೋದಳು. ಅಲ್ಲಿಗೆ ಮೀನು ನೀಡಿದ್ದ ವರ ಮುಗಿದುಹೋಗಿತ್ತು. ಆದರೆ ಆವತ್ತಿನಿಂದ ಮೀನುಗಾರ ಸಂತಸದಿಂದ ಇರುವುದರಲ್ಲೇ ತೃಪ್ತಿ ಕಂಡುಕೊಂಡು ಸಂತಸದಿಂದ ಜೀವಿಸಿದ.
– ಸಹನಾ ಹೆಗ್ಗಳಗಿ