Advertisement

ಕೆರೆಗೆ ಹಾರವಾಯಿತು ಮತ್ಸ್ಯ ಶಿಖಾರಿ

11:49 AM Apr 22, 2022 | Team Udayavani |

ಧಾರವಾಡ: ಕೆರೆಯಂಗಳದಲ್ಲಿ ವಕ ವಕ ಬಾಯಿ ಬಿಡುತ್ತಿರುವ ಸುಂದರ ಮತ್ಸ್ಯಗಳು, ಹಣ ಹಾಕಿ ಮತ್ಸ್ಯ ಸಾಕಿದವರ ಕಣ್ಣೀರು, ತಿರುಗಿಯೂ ನೋಡದ ಅಧಿಕಾರಿಗಳು, ಚರ್ಚಿಸೋಣ ಎನ್ನುತ್ತಿರುವ ಜನಪ್ರತಿನಿಧಿಗಳು. ಒಟ್ಟಿನಲ್ಲಿ ಕೆರೆಗೆ ಹಾರವಾದ ಬಡ ಮೀನುಗಾರರ ಹಣ.

Advertisement

ಹೌದು. ಒಳನಾಡು ಮೀನುಗಾರಿಕೆ ನಂಬಿಕೊಂಡು ಜಿಲ್ಲೆಯ ಕೆರೆಗಳಲ್ಲಿ ಮೀನು ಬಿಟ್ಟು ಒಂದಿಷ್ಟು ಹೊಟ್ಟೆಪಾಡು ನಡೆಸು ತ್ತಿದ್ದ ಬಡ ಮೀನುಗಾರರ ಕುಟುಂಬಗಳಿಗೆ ರೈತರ ಕಬ್ಬಿನ ಗದ್ದೆಗಳಿಗೆ ಸಿಂಪಡಿಸುತ್ತಿರುವ ಕ್ರಿಮಿನಾಶಕಗಳು ಶಾಪವಾಗಿ ಪರಿಣಮಿಸುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದೊಂದು ತಿಂಗಳಿನಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸುರಿದ ಭಾರಿ ಮುಂಗಾರು ಪೂರ್ವ ಮಳೆಯ ನೀರು ಕೆರೆಗಳ ಅಂಗಳ ಸೇರುತ್ತಿದ್ದಂತೆ ಕೆರೆಯಲ್ಲಿನ ಮೀನುಗಳು ಸತ್ತು ಬೀಳುತ್ತಿವೆ.

ಕಲಘಟಗಿ ತಾಲೂಕಿನ ದೇವಿಕೊಪ್ಪ, ಗಲಗಿನಗಟ್ಟಿ, ಆಸಗಟ್ಟಿ, ಮುಕ್ಕಲ್ಲು, ಹಿರೇಹೊನ್ನಳ್ಳಿ, ಧಾರವಾಡ ತಾಲೂಕಿನ ವೀರಾಪೂರ, ರಾಮಾಪೂರ, ಅಳ್ನಾವರ ತಾಲೂಕಿನ ಡೋರಿ, ಹುಬ್ಬಳ್ಳಿ ಸಮೀಪದ ತಡಸ ಸೇರಿದಂತೆ ಅರೆಮಲೆನಾಡು ಪ್ರದೇಶದಲ್ಲಿನ ಕೆರೆಯಂಗಳಕ್ಕೆ ರೈತರ ಹೊಲದಿಂದ ಹೊರ ಬರುತ್ತಿರುವ ನೀರು ಕೆರೆಗಳನ್ನು ಸೇರುತ್ತಿದ್ದಂತೆಯೇ ಈ ಆವಾಂತರವಾಗುತ್ತಿದೆ.

ಜಿಲ್ಲೆಯ 1200 ಕೆರೆಗಳ ಪೈಕಿ 700ಕ್ಕೂ ಹೆಚ್ಚು ಕೆರೆಗಳಲ್ಲಿ ಒಳನಾಡು ಮೀನುಗಾರಿಕೆ ನಡೆಯುತ್ತಿದೆ. ಈ ಪೈಕಿ 128 ಕೆರೆಗಳು ಮೀನುಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿದ್ದು, 577 ಕೆರೆಗಳಲ್ಲಿ ಗ್ರಾಪಂ ನೇತೃತ್ವದಲ್ಲಿ ಮೀನುಗಾರಿಕೆ ನಡೆಸಲಾಗುತ್ತಿದೆ. ಜೀವನ ನಡೆಸುತ್ತಿವೆ ಸಾವಿರಕ್ಕೂ ಅಧಿಕ ಕುಟುಂಬಗಳು. ಇವರೆಲ್ಲ ರಿಗೂ ಹಿಂದೆಂದೂ ಕಾಣದ ಹೊಸ ಸಮಸ್ಯೆಯೊಂದು ಈ ವರ್ಷ ಕಾಣಿಸಿಕೊಂಡಿದ್ದು, ಮುಂಗಾರು ಪೂರ್ವ ಮಳೆಗಳ ನಂತರ ಕೆರೆಯಲ್ಲಿನ ಮೀನುಗಳು ಇದ್ದಕ್ಕಿದ್ದಂತೆ ಸತ್ತು ದಡಕ್ಕೆ ಬಂದು ಬೀಳುತ್ತಿವೆ.

ಮಳೆ ತಂದ ಸೌಭಾಗ್ಯ: ಕಳೆದ ಮೂರು ವರ್ಷಗಳು ಅಂದರೆ 2019ರಿಂದ 2021ರವರೆಗೆ ಪ್ರತಿವರ್ಷದ ಮುಂಗಾರು ಮಳೆಗಳು ವಿಪರೀತ ಸುರಿದಿದ್ದು, ಜಿಲ್ಲೆಯಲ್ಲಿನ ಎಲ್ಲ ಕೆರೆಗಳು ಹೆಚ್ಚು ಕಡಿಮೆ ಕೋಡಿ ಬಿದ್ದಿವೆ. ಅಷ್ಟೇಯಲ್ಲ, ಬೇಸಿಗೆ ಕಾಲದವರೆಗೂ ನೀರು ಹಿಡಿದಿಟ್ಟುಕೊಂಡಿವೆ. ಇದರಿಂದ ಒಳನಾಡು ಮೀನುಗಾರಿಕೆ ಮಾಡುವ ಬಡ ಮೀನುಗಾರರು ಒಂದಿಷ್ಟು ಲಾಭ ಪಡೆದದ್ದು ಸತ್ಯ. ಸತತ ಬರಗಾಲದಿಂದ ಕಂಗೆಟ್ಟಿದ್ದ ಒಳನಾಡು ಮೀನುಗಾರರು 2019ರಲ್ಲಿ ಜಿಲ್ಲೆಯಲ್ಲಿ ಅತ್ಯಂತ ಸೂಕ್ಷ್ಮ ತಳಿಯ ಮೀನುಗಾರಿಕೆಯನ್ನು ಮಾಡಿ ಯಶಸ್ಸು ಕಂಡಿದ್ದರು. ಕೆರೆಯಂಗಳು ಮಾತ್ರವಲ್ಲ ಕೆಲವು ರೈತರು ಮಳೆಗಾಲದಲ್ಲಿ ತಮ್ಮ ಕೃಷಿ ಹೊಂಡಗಳಲ್ಲಿ ಕೂಡ ಮೀನುಗಾರಿಕೆ ಮಾಡುತ್ತಿದ್ದು, ರೈತರಿಗೆ ಉಪಕಸಬು ಲಾಭ ಕೊಟ್ಟಿತ್ತು. ಈ ಮೂರು ವರ್ಷ ತಲಾ 7500 ಮೆಟ್ರಿಕ್‌ ಟನ್‌ ಮೀನು ಉತ್ಪಾದನೆಯಾಗಿದೆ.

Advertisement

2020ರಲ್ಲಿ ಮತ್ತು 2021ರಲ್ಲಿ ಲಾಕ್‌ಡೌನ್‌ ಮತ್ತು ಕೊರೊನಾ ಹೊಡೆತಗಳ ಮಧ್ಯೆಯೂ ಮೀನುಗಾರರು ಲಾಭ ಮಾಡಿಕೊಂಡಿದ್ದು ಸತ್ಯ. ಜಿಲ್ಲೆಯ ಸಾವಿರಕ್ಕೂ ಅಧಿಕ ಕೆರೆಗಳಲ್ಲಿ ಮೀನುಗಾರಿಕೆಗೆ ಉತ್ತಮ ಅವಕಾಶಗಳಿದ್ದು, 2022ರಲ್ಲಿ ಈ ವರೆಗೂ ಅಂದಾಜು 8600 ಮೆಟ್ರಿಕ್‌ ಟನ್‌ನಷ್ಟು ಮೀನು ಉತ್ಪಾದನೆ ಮಾಡಲಾಗಿದೆ.

ನಿಂತಿಲ್ಲ ಕೆರೆ ನೀರಿನ ಅವಲಂಬನೆ: ಇನ್ನು ಏರು ಬಿಸಿಲಿಗೆ ಆಹಾರದ ಕೊರತೆಯಿಂದ ಕಿರುಚುತ್ತಿರುವ ಪಕ್ಷಿ ಪ್ರಪಂಚ ಸತ್ತು ಬಿದ್ದ ಮೀನುಗಳನ್ನು ತಿನ್ನುತ್ತಿವೆ. ಇವುಗಳ ಕಥೆ ದೇವರಿಗೆ ಪ್ರೀತಿ. ಕೆಲವು ಕೆರೆಗಳಲ್ಲಿ ಕ್ರಿಮಿನಾಶಕ ಸೇರುತ್ತಿರುವುದು ಗೊತ್ತಿದ್ದರೂ, ಜಾನುವಾರುಗಳಿಗೆ ಅಲ್ಲಿಯ ನೀರೆ ಗತಿಯಾಗಿದೆ. ಹಾವು, ಮುಂಗಲು, ಹೊಕ್ಕು ಹೊರಡುವ ಸರ್ಪ ಉಡಗಳು, ಇಕ್ಕೆಲದಲಾಡುವ ನರಿಶಶಕಾದಿ ತೋಳಗಳು ಕ್ರಿಮಿನಾಶಕ ಮಿಶ್ರಿತ ಕೆರೆಯ ನೀರನ್ನೇ ಅವಲಂಬಿಸಿರುವುದು ಜೀವ ವೈವಿಧ್ಯಕ್ಕೆ ಕಂಟಕಪ್ರಾಯವಾಗುವಂತಾಗಿವೆ. ಇನ್ನು ಕಾಗೆ, ಗುಬ್ಬಿ, ಕೋಗಿಲೆ, ಬಾತುಕೋಳಿ, ಬೆಳ್ಳಕ್ಕಿ, ಹಳದಿ ಗುಬ್ಬಿ, ನೀಲಿ ಗುಬ್ಬಿ, ನವಿಲುಗಳು ಧಾರವಾಡ ಜಿಲ್ಲೆಯ ಪಶ್ಚಿಮ ಭಾಗದ ಅರೆಮಲೆನಾಡು ಅರಣ್ಯ ಪ್ರದೇಶದ ಜೀವವೈವಿಧ್ಯದ ಸಂಕೇತವಾಗಿ ನಿಂತಿವೆ. ಇವೆಲ್ಲದಕ್ಕೂ ಕಬ್ಬಿನ ಕ್ರಿಮಿನಾಶಕ ಕಂಟಕಪ್ರಾಯವಾಗಿ ಪರಿಣಮಿಸಿದೆ.

ಜೀವ ವೈವಿಧ್ಯಕ್ಕೆ ಕುತ್ತು ತಂದಿಟ್ಟ ಕ್ರಿಮಿನಾಶಕ:

ಜಿಲ್ಲೆಗೆ ಅಗತ್ಯವಿರುವ ಮತ್ಸ್ಯಾಹಾರದ ಬೇಡಿಕೆಯನ್ನು ಒಳನಾಡು ಮೀನುಗಾರಿಕೆ ಅತ್ಯಂತ ಸುರಕ್ಷಿತವಾಗಿ ಮಾಡಿಕೊಂಡು ಬಂದಿದೆ. ಇಲ್ಲಿನ ಮುಗದ, ನೀರಸಾಗರ, ದೇವಿಕೊಪ್ಪ, ಸೊಂಟಿಕೊಪ್ಪ, ರಾಮಪೂರ, ವೀರಾಪೂರ, ಡೋರಿ, ಹುಲಿಕೆರಿ, ಮಂಡಿಹಾಳ, ನಿಗದಿ, ಜೋಡಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿನ ಕೆರೆಗಳಲ್ಲಿ ನಡೆಯುವ ಮೀನುಗಾರಿಕೆ ಅತ್ಯಂತ ಉತ್ತಮ ಗುಣಮಟ್ಟದ ಮೀನುಗಳ ಉತ್ಪಾದನೆ ಮಾಡುತ್ತಿತ್ತು. ಅಷ್ಟೇಯಲ್ಲ ಕೆರೆಯಂಗಳದ ನೀರನ್ನು ಸ್ವತ್ಛವಾಗಿಟ್ಟು ಪಶುಪಕ್ಷಿ, ಜಾನುವಾರು ಮತ್ತು ಗ್ರಾಮಗಳ ಜನರು ಕುಡಿಯಲು ಕೆರೆಯ ನೀರು ಬಳಸುವುದಕ್ಕೆ ಸಹಾಯಕವಾಗಿತ್ತು. ಆದರೆ ಇದೀಗ ಈ ಎಲ್ಲಾ ಕೆರೆಗಳ ಜಲಾನಯನ ಪ್ರದೇಶದಲ್ಲಿ ಕಬ್ಬು ಬೆಳೆ ಆವರಿಸಿಕೊಂಡಿದ್ದು, ವಿಪರೀತ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳ ಬಳಕೆ ಮಾಡುತ್ತಿದ್ದು, ಕೆರೆಯಾಧಾರಿತ ಜೀವ ವೈವಿಧ್ಯಕ್ಕೆ ಕುತ್ತು ತಂದಿಟ್ಟಿದೆ. 870 ಮೆಟ್ರಿಕ್‌ ಟನ್‌ನಷ್ಟು ಮೀನು ನಾಶ.

ಕ್ರಿಮಿನಾಶಕಗಳ ಬಳಕೆಯಿಂದ ಜಿಲ್ಲೆಯ ಕೆಲವು ಕೆರೆಗಳಲ್ಲಿ ಮೀನುಗಳು ಸಾಯುತ್ತಿರುವ ಕುರಿತು ಮೀನುಗಾರರಿಂದ ದೂರು ಬಂದಿವೆ. ಸದ್ಯಕ್ಕೆ ವಿಷಯುಕ್ತ ನೀರು ಹೊರ ಹೋಗುವಂತೆ ಕಾವಲಿಗಳನ್ನು ತೋಡಲು ಹೇಳಿದ್ದೇವೆ. ಆರಂಭದಲ್ಲಿ ಹೀಗಾಗುತ್ತಿದ್ದು, ನಂತರ ಸರಿಯಾಗುತ್ತದೆ. –ವೆಂಕಟರಾಮ ಹೆಗಡೆ, ಉಪನಿರ್ದೇಶಕರು ಮೀನುಗಾರಿಕೆ ಇಲಾಖೆ, ಧಾರವಾಡ.

ಸಾವಿರ ಸಾವಿರ ಹಣ ಖರ್ಚು ಮಾಡಿ ಮೀನು ಸಾಕಾಣಿಕೆ ಮಾಡುತ್ತೇವೆ. ಕಳ್ಳರ ಕಾಟ ತಡೆದು ಸಾಕಾಗಿತ್ತು. ಇದೀಗ ಕೆರೆಯ ಮೇಲ್ಭಾಗದ ರೈತರು ಕಬ್ಬಿಗೆ ಕಳೆನಾಶಕ ಹೊಡೆಯುತ್ತಿದ್ದು ಅಲ್ಲಿನ ನೀರು ಬಂದು ಮೀನು ಸಾಯುತ್ತಿವೆ. ಯಾರಿಗೆ ಹೇಳೋದು ನಮ್ಮ ಕಷ್ಟ. –ಯಲ್ಲಪ್ಪ ಭೋವಿ, ದೇವಿಕೊಪ್ಪ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next