Advertisement

ಮೀನುಗಾರರಿಗೆ ಬರೆ; ಮೀನೂಟ ಪ್ರಿಯರಿಗೆ ಹೊರೆ; ಕಡಲಿಗಿಳಿದರೂ ಸಿಗುತ್ತಿಲ್ಲ ಮೀನು

03:02 AM Apr 07, 2022 | Team Udayavani |

ಕುಂದಾಪುರ: ಒಂದೆಡೆ ಡೀಸೆಲ್‌ ಬೆಲೆ ಏರಿಕೆ, ಮತ್ತೊಂದೆಡೆ ಮತ್ಸ್ಯಕ್ಷಾಮ; ಇದರಿಂದ ನಷ್ಟದ ಸುಳಿಯಲ್ಲಿ ಸಿಲುಕಿ ರುವ ಮೀನುಗಾರರು ಗಂಗೊಳ್ಳಿ, ಮಲ್ಪೆ, ಮರವಂತೆ, ಕೊಡೇರಿ, ಶಿರೂರು, ಉತ್ತರ ಕನ್ನಡ ಸಹಿತ ಬಹುತೇಕ ಎಲ್ಲ ಕಡೆಗಳಲ್ಲಿ ಮೀನುಗಾರಿಕೆಯನ್ನೇ ಸ್ಥಗಿತಗೊಳಿಸಿದ್ದಾರೆ. ಇದರ ನೇರ ಪರಿಣಾಮ ಮೀನೂಟ ಪ್ರಿಯರಿಗೆ ತಟ್ಟಿದ್ದು, ಎಲ್ಲ ಬಗೆಯ ಮೀನುಗಳ ದರ ಏರಿಕೆಯಾಗುತ್ತಿದೆ.

Advertisement

ಗಂಗೊಳ್ಳಿ, ಮಲ್ಪೆ ಸಹಿತ ಹಲವು ಬಂದರುಗಳಲ್ಲಿ ಒಂದು ವಾರದಿಂದ ಮೀನುಗಾರಿಕೆಗೆ ತೆರಳಿದ ಬೋಟು, ದೋಣಿ ಗಳು ಬರಿಗೈಯಲ್ಲಿ ವಾಪಾಸಾಗುತ್ತಿವೆ. ಇದರಿಂದ ಬಹುತೇಕ ಮೀನುಗಾರರು ಮೀನುಗಾರಿಕೆ ಸ್ಥಗಿತ ಗೊಳಿಸಿದ್ದಾರೆ. ಮೀನುಗಾರಿಕೆಗೆ ತೆರಳಿ ದರೂ ಸಿಗುವ ಮೀನಿನಲ್ಲಿ ಡೀಸೆಲ್‌, ಸೀಮೆಎಣ್ಣೆಯ ಖರ್ಚು ಕೂಡ ಭರಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಅಳಲು ಮೀನುಗಾರರದು.

ಸೀಸನ್‌ನಲ್ಲೇ ಹೊಡೆತ
ಮೀನುಗಾರರಿಗೆ ಮಾರ್ಚ್‌, ಎಪ್ರಿಲ್‌ ಸಮೃದ್ಧವಾಗಿ ಮೀನು ಸಿಗುವ ಸೀಸನ್‌. ಮೇ ಅಂತ್ಯದಿಂದ ಯಾಂತ್ರಿಕೃತ ಮೀನುಗಾರಿಕೆಗೆ ರಜೆ, ಮತ್ತೆ 60 ದಿನ ಮೀನುಗಾರಿಕೆ ನಡೆಯುವುದಿಲ್ಲ. ಅದಕ್ಕೆ ಮುನ್ನ ಒಂದಷ್ಟು ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದ ಮೀನುಗಾರರಿಗೆ ಸೀಸನ್‌ನಲ್ಲೇ ಭಾರೀ ಹೊಡೆತ ಬಿದ್ದಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈವರೆಗಿನ ಒಟ್ಟಾರೆ ಸೀಸನ್‌ ಉತ್ತಮ ವಾಗಿದ್ದು, ಒಂದಷ್ಟು ಲಾಭ ತಂದಿತ್ತು. ಆದರೆ ಈಗ ಮತ್ಸ್ಯಕ್ಷಾಮ ಸಂಕಷ್ಟ ತಂದೊಡ್ಡಿದೆ.

ಶೇ. 30ರಷ್ಟು ಮಾತ್ರ
ಉಡುಪಿಯಲ್ಲಿ 1,600 ಮತ್ತು ದ.ಕ.ದಲ್ಲಿ 953 ಡೀಸೆಲ್‌ ಸಬ್ಸಿಡಿಯುಕ್ತ ಬೋಟುಗಳಿವೆ. ದ.ಕ., ಉಡುಪಿ ಮತ್ತು ಉ. ಕನ್ನಡ ಜಿಲ್ಲೆಗಳ 5 ಸಾವಿರಕ್ಕೂ ಅಧಿಕ ಯಾಂತ್ರೀಕೃತ ಮೀನುಗಾರರು ಇದರ ಫಲಾನುಭವಿಗಳಾಗಿದ್ದಾರೆ. ಮಂಗಳೂರಿನಿಂದ ಕಾರವಾರದ ವರೆಗೆ 9,900ಕ್ಕೂ ಅಧಿಕ ದೋಣಿಗಳಿದ್ದು, 25 ಸಾವಿರಕ್ಕೂ ಅಧಿಕ ನಾಡ
ದೋಣಿ ಮೀನು ಗಾರ ರಿದ್ದಾರೆ. ಸದ್ಯ ಎದುರಾಗಿರುವ ಸ್ಥಿತಿಯಿಂದಾಗಿ ಮಂಗಳೂರಿನಲ್ಲಿ ಮಾತ್ರ ಪರ್ಸಿನ್‌ ಬೋಟುಗಳು ಕಡಲಿಗಿಳಿಯುತ್ತಿದ್ದು, ಮಲ್ಪೆ, ಗಂಗೊಳ್ಳಿ, ಕಾರವಾರ ಸಹಿತ ಬಹುತೇಕ ಕಡೆಗಳಲ್ಲಿ ಪರ್ಸಿನ್‌ ಬೋಟುಗಳು ಮೀನುಗಾರಿಕೆಯನ್ನು ಸ್ಥಗಿತಗೊಳಿಸಿವೆ. ನಾಡದೋಣಿಗಳು ಕೂಡ ಬಹುತೇಕ ದಿನಗಳಲ್ಲಿ ಮೀನುಗಾರಿಕೆ ನಡೆಸುತ್ತಿಲ್ಲ. ಈಗ ಸ್ವಲ್ಪ ಮಟ್ಟಿಗೆ ಮೀನುಗಾರಿಕೆಯಲ್ಲಿ ನಿರತವಾಗಿರುವುದು ಟ್ರಾಲ್‌ ಹಾಗೂ ತ್ರಿಸೆವೆಂಟಿ ಬೋಟುಗಳು ಮಾತ್ರ. ಅವರಿಗೂ ಅಷ್ಟೇನೂ ಮೀನು ಸಿಗುತ್ತಿಲ್ಲ.

ಮೀನು ದುಬಾರಿ
ಮಾಂಸವೂ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಇದಕ್ಕೀಗ ಮೀನು ಸೇರ್ಪಡೆಯಾಗಿದ್ದು, ಇದು ಮೀನೂಟ ಪ್ರಿಯರಿಗೆ ಕಹಿಯಾಗಿ ಪರಿಣಮಿಸಿದೆ. ನೂರರ ಆಸುಪಾಸಿನಲ್ಲಿದ್ದ 1 ಕೆ.ಜಿ. ಬಂಗುಡೆಗೆ ಈಗ 110-140 ರೂ. ಇದೆ. ಅಂಜಲ್‌ 700 ರೂ.ಗಿಂತ ಹೆಚ್ಚಿದೆ. ಪಾಂಪ್ಲೆಟ್‌ ಹರಾಜು ಕೇಂದ್ರದಲ್ಲಿಯೇ 900 ರೂ. ಇದ್ದು, ಮಾರುಕಟ್ಟೆಯಲ್ಲಿ 1,100 ರೂ.ಗಿಂತಲೂ ಹೆಚ್ಚಿದೆ. ಸಿಗಡಿಗೆ ಬೇರೆ ಬೇರೆ ದರವಿದ್ದು, 400 ರೂ. ಆಸುಪಾಸಿನಲ್ಲಿದೆ.

Advertisement

ಮೀನುಗಾರಿಕೆಗೆ ಹೋದರೂ ಮೀನು ಸಿಗುತ್ತಿಲ್ಲ. ಬೋಟಿಗೆ ಒಂದು ಟ್ರಿಪ್‌ಗೆ 5-6 ಸಾವಿರ ಲೀ. ಡೀಸೆಲ್‌ ಅಗತ್ಯವಿದೆ. ಒಮ್ಮೆ ಹೊರಟರೆ 10 ದಿನ ಮೀನು ಗಾರಿಕೆಯಲ್ಲಿರುತ್ತದೆ. ಈ 10 ದಿನಗಳಲ್ಲಿ ಡೀಸೆಲ್‌ ಬೆಲೆ 5-10 ರೂ. ಏರಿಕೆಯಾದರೆ ಕನಿಷ್ಠ 5 ಸಾವಿರ ಲೀ.ಗೆ 50 ಸಾವಿರ ರೂ. ಹೆಚ್ಚಳವಾಗಿರುತ್ತದೆ. ಡೀಸೆಲ್‌ ಬೆಲೆ, ಖರ್ಚು ಹುಟ್ಟುವಷ್ಟು ಕೂಡ ಮೀನು ಸಿಗುತ್ತಿಲ್ಲ.
– ರಮೇಶ್‌ ಕುಂದರ್‌ ಗಂಗೊಳ್ಳಿ, ಮೀನುಗಾರರು

ಮಲ್ಪೆಯಲ್ಲಿ ಪರ್ಸಿನ್‌, ನಾಡದೋಣಿಗಳು ಬಹುತೇಕ ನಿಲ್ಲಿಸಿವೆ. ಟ್ರಾಲ್‌- ತ್ರಿಸೆವೆಂಟಿ ಶೇ. 70ರಷ್ಟು ಮಾತ್ರ ಹೋಗುತ್ತಿದ್ದು, ಸಾಧಾರಣ ಮೀನು ಸಿಗುತ್ತಿವೆ. ನಿರೀಕ್ಷೆಯಷ್ಟು ಮೀನು ಸಿಗುತ್ತಿಲ್ಲ. ಡೀಸೆಲ್‌ ಬೆಲೆಯೂ ಏರಿಕೆ ದುಬಾರಿಯಾಗುತ್ತಿದೆ. ಇದರಿಂದಲೇ ಬಹುತೇಕರು ಕಡಲಿಗಿಳಿಯುತ್ತಿಲ್ಲ.
– ನಾರಾಯಣ ಅಮೀನ್‌ ಮಲ್ಪೆ , ಮೀನುಗಾರ ಮುಖಂಡರು


– ಪ್ರಶಾಂತ್‌ ಪಾದೆ

 

Advertisement

Udayavani is now on Telegram. Click here to join our channel and stay updated with the latest news.

Next