ಗಂಗಾವತಿ: ಭಾರತದ ಪುರಾತನ ಯೋಗವನ್ನು ಇನ್ನಷ್ಟು ಜನಪ್ರಿಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ತಾಲೂಕಿನ ಆನೆಗೊಂದಿ ಹತ್ತಿರದ ಏಳುಗುಡ್ಡದ ಪ್ರದೇಶದಲ್ಲಿ ದೇಶದ ಪ್ರಥಮ ಯೋಗ ವಿಶ್ವವಿದ್ಯಾಲಯ ಶೀಘ್ರವೇ ತಲೆ ಎತ್ತಲಿದೆ.
ಗಂಗಾವತಿ ತಾಲೂಕಿನ ಆನೆಗೊಂದಿ ಹನುಮನಹಳ್ಳಿ ಸಾಣಾಪೂರ ಜಂಗ್ಲಿ ರಂಗಾಪೂರ ಪ್ರದೇಶದಲ್ಲಿರುವ ಏಳು ಗುಡ್ಡದ ಪ್ರದೇಶದಲ್ಲಿ ಕಂದಾಯ ಇಲಾಖೆಯ ಸುಮಾರು 100 ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆದು ಹಂಪಿ ಕನ್ನಡ ವಿವಿ ಮಾದರಿಯಲ್ಲಿ ಪ್ರಕೃತಿ ದತ್ತವಾಗಿ ವಿವಿ ಕಟ್ಟಡ ವಿನ್ಯಾಸ ಮಾಡಲು ಯೋಜಿಸಲಾಗಿದೆ. ಸರ್ವೇ ನಂ.4ರಲ್ಲಿ ಕಂದಾಯ ಇಲಾಖೆ 340 ಎಕರೆ, ಅರಣ್ಯ ಇಲಾಖೆಯ 227 ಎಕರೆ ಭೂಮಿ ಲಭ್ಯವಿದ್ದು ತಹಶೀಲ್ದಾರ್ ಹಾಗೂ ತಾಲೂಕು ಅರಣ್ಯಾಧಿಕಾರಿಗಳು ವಿವಿಗೆ ಭೂಮಿ ಇರುವ ಕುರಿತು ಪ್ರಮಾಣ ಪತ್ರ ಸಲ್ಲಿಸಲಿದ್ದು, ವಿವಿಗೆ ಬೇಕಾಗುವ ವಾತಾವರಣ ಬಗ್ಗೆ ವಿವರವಾದ ಮಾಹಿತಿ ನೀಡಲು ಕೇಂದ್ರ ಸರ್ಕಾರ ಸೂಚಿಸಿದೆ.
ತುಂಗಭದ್ರಾ ನದಿ ಎಡದಂಡೆ ಕಾಲುವೆ, ಬೆಟ್ಟದ ಮಧ್ಯೆ ವಿಶಾಲವಾದ ಭೂಮಿ ಇರುವುದರಿಂದ ಮೊದಲ ಯೋಗ ವಿವಿ ಸ್ಥಾಪನೆಗೆ ಸೂಕ್ತ ಸ್ಥಳವಾಗಿದೆ. ಇಲ್ಲಿ ಯೋಗ ವಿವಿ ಸ್ಥಾಪನೆಯಾದರೆ ಹಂಪಿ, ಆನೆಗೊಂದಿ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರು ವಿವಿಗೆ ಭೇಟಿ ನೀಡಿ ಯೋಗ ಕುರಿತು ಮಾಹಿತಿ ಪಡೆಯುತ್ತಾರೆ ಎಂದು ಚಿಂತಿಸಲಾಗಿದೆ.
ಕಿಷ್ಕಿಂದಾದಲ್ಲೇ ಏಕೆ?: ಈಗಾಗಲೇ ಹಂಪಿ, ಆನೆಗೊಂದಿ, ವಿರೂಪಾಪೂರಗಡ್ಡಿ ಪ್ರದೇಶದಲ್ಲಿ ಹಲವು ಯೋಗ ನ್ಯಾಚುರೋಪಥಿ ಚಿಕಿತ್ಸಾ ಕೇಂದ್ರಗಳು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿಗೆ ಬರುವ ದೇಶ, ವಿದೇಶ ಪ್ರವಾಸಿಗರಿಗೆ ಯೋಗ ಹಾಗೂ ಇತರೆ ಚಿಕಿತ್ಸೆ ನೀಡುವ ಪದ್ಧತಿ ಜಾರಿಯಲ್ಲಿದ್ದು, ಇಲ್ಲಿ ಯೋಗ ವಿವಿ ಸ್ಥಾಪನೆಯಿಂದ ಸ್ಥಳೀಯರಿಗೆ ಹಲವು ಮಾಹಿತಿ ಲಭ್ಯವಾಗಲಿವೆ. ಏಳು ಗುಡ್ಡದ ಪ್ರದೇಶದಲ್ಲಿ ಹಲವಾರು ವನಸ್ಪತಿ ಗಿಡಮೂಲಿಕೆಗಳಿದ್ದು, ಆಯುರ್ವೇದ ಚಿಕಿತ್ಸೆ ನೀಡುವ ನೂರಾರು ಜನ ಪ್ರತಿವರ್ಷ ಇಲ್ಲಿಗೆ ಆಗಮಿಸಿ ಗಿಡಮೂಲಿಕೆ ಸಂಗ್ರಹಿಸುತ್ತಾರೆ. ವಿವಿ ಸ್ಥಾಪನೆಯಿಂದ ಇಲ್ಲಿರುವ ಗಿಡಮೂಲಿಕೆಗಳನ್ನು ಸಂರಕ್ಷಣೆ ಮಾಡಲು ಅನುಕೂಲವಾಗುತ್ತದೆ.
ಕಿಷ್ಕಿಂದಾ ಏಳುಗುಡ್ಡದ ಪ್ರದೇಶದ ಪ್ರಕೃತಿಯಲ್ಲಿ ಕೇಂದ್ರ ಯೋಗ ವಿವಿ ಸ್ಥಾಪಿಸುವ ಪ್ರಸ್ತಾಪ ಅತ್ಯುತ್ತಮವಾದದ್ದು. ಪ್ರಧಾನಿ ಮೋದಿ ಜೂ.21 ಯೋಗದಿನ ಘೋಷಣೆ ಮಾಡಿದ ನಂತರ ದೇಶ, ವಿದೇಶದವರು ಯೋಗ ಮಾಡಲು ಆರಂಭಿಸಿದ್ದು, ತರಬೇತಿದಾರರ ಅಗತ್ಯ ಹೆಚ್ಚಾಗಿದೆ. ಹೀಗಾಗಿ ಯೋಗ ವಿವಿ ಸ್ಥಾಪನೆ ಮಾಡಲಿ, ಪತಂಜಲಿ ಯೋಗ ಸಮಿತಿ ಕೇಂದ್ರ ಸರ್ಕಾರಕ್ಕೆ ಸೂಕ್ತ ಸಲಹೆ- ಸೂಚನೆ-ಮಾರ್ಗದರ್ಶನ ಮಾಡಲಿದೆ.
-ಭವರಲಾಲ್ ಆರ್ಯ, ರಾಜ್ಯ ಪ್ರಭಾರಿ, ಪತಂಜಲಿ ಯೋಗ ಸಮಿತಿ
ವಿವಿ ಸ್ಥಾಪನೆ ಕುರಿತು ಕೇಂದ್ರ ಸಚಿವ ಶ್ರೀಪಾದ ಯಸ್ಸೋ ನಾಯಕ್ ತಮ್ಮ ಜತೆ ಚರ್ಚೆ ನಡೆಸಿದ್ದು, ಸುಮಾರು 100 ಎಕರೆ ಪ್ರದೇಶದ ಭೂಮಿ ಸರ್ಕಾರ ಕಲ್ಪಿಸಿದರೆ ವಿವಿ ಸ್ಥಾಪನೆಗೆ ಹಣಕಾಸು ನೆರವು ನೀಡಲಾಗುತ್ತದೆ. ಅಗತ್ಯ ದಾಖಲೆಗಳ ಕಡತ ವನ್ನು ಶೀಘ್ರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ವರದಿ ನೀಡುವಂತೆ ತಹಶೀಲ್ದಾರ್ ಹಾಗೂ ಅರಣ್ಯ ಅಧಿ ಕಾರಿಗಳಿಗೆ ಸೂಚಿಸಲಾಗಿದೆ.
-ಕರಡಿ ಸಂಗಣ್ಣ, ಸಂಸದ
* ಕೆ.ನಿಂಗಜ್ಜ