Advertisement

ಜನ್ಮಾಂತರವನ್ನೂ ತಿಳಿಸಿದ್ದ ಮಹಾಭಾರತ: ತೋಳ್ಪಾಡಿ

08:32 PM Dec 15, 2019 | Sriram |

ಉಡುಪಿ: ಪ್ರತಿಯೊಬ್ಬರೂ ತಮ್ಮ ಗತ ಇತಿಹಾಸವನ್ನು ನೋಡಬೇಕು. ಹಿಂದಿನ ಜನ್ಮದಲ್ಲಿ ತಾನು ಏನಾಗಿದ್ದೆ ಎನ್ನುವುದನ್ನೂ ಕಂಡುಕೊಳ್ಳಬೇಕು ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.

Advertisement

ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಅಂಗವಾಗಿ ರವಿವಾರ ನಡೆದ ಧಾರ್ಮಿಕ ಚಿಂತನ ಗೋಷ್ಠಿಯಲ್ಲಿ ಅವರು ವಿಷಯ ಮಂಡಿಸಿದರು.

ಸಾರ್ಥಕ ಕ್ಷಣ
ಬರವಣಿಗೆ ಯಾವತ್ತೂ ಅನುಭವ ವೇದ್ಯವಾಗಿರಬೇಕು. ವೇದವ್ಯಾಸರು ಒಳಗಿನವನಾಗಿ ಇತಿಹಾಸವೆಂಬ ಮಹಾ ಭಾರತ ರಚಿಸಿದರು. ಮಧ್ವಾಚಾರ್ಯರು ಈ ಗ್ರಂಥದೊಳಗೆ ಹೋಗಿ ತಾನು ಹೋದ ಜನ್ಮದಲ್ಲಿ ಏನಾಗಿದ್ದೆ (ಭೀಮನಾಗಿ) ಎನ್ನು ವುದನ್ನು ಕಂಡುಕೊಂಡರು. ತಾನು ಹಿಂದೇನಾಗಿದ್ದೆ ಎಂದು ವರ್ತಮಾನ ಕಾಲ ದಲ್ಲಿ ಕಂಡುಕೊಳ್ಳುವುದೇ ಸಾರ್ಥಕ ಕ್ಷಣ. ಇದುವೇ ಆಧ್ಯಾತ್ಮಿಕತೆ ಎಂದು ತೋಳ್ಪಾಡಿ ತಿಳಿಸಿದರು.

ಚಿಂತನೆ ನಿರಂತರ
ಚಿಂತನೆ ನಿರಂತರವಾಗಿರಬೇಕು. ಇದು ಜೀವ, ಆತ್ಮ, ಮನಸ್ಸಿಗೆ ಸಂಬಂಧಪಟ್ಟದ್ದು. ಭಾರತೀಯ ಸಂಸ್ಕೃತಿಯ ವಿಶೇಷವೆಂದರೆ ಒಂದು ಗ್ರಂಥ ತನ್ನನ್ನು ಅಧ್ಯಯನ ನಡೆಸಿದವನಿಗೆ ಬಿಟ್ಟು ಕೊಡಬೇಕು. ನಾವು ಹುಡುಕಿದರೆ ಅದು ಸಿಗುವುದಿಲ್ಲ. ಉಪನಿಷತ್ತಿನಲ್ಲಿ ಮೇಧಾವಿತನಕ್ಕೆ, ಪ್ರವಚನಕ್ಕೆ, ಅಧ್ಯಯನಕ್ಕೆ ದೇವರು (ಸತ್ಯ) ಸಿಗುವುದಿಲ್ಲ ಎಂದಿದೆ. ಗ್ರಂಥವೇ ಅಥವಾ ದೇವರೇ ತನ್ನನ್ನು ತೆರೆದು ತೋರಿಸಿದಾಗ ಮಾತ್ರ ಅದು ಸಾಧ್ಯವಾಗುತ್ತದೆ. ದೇವರಿಗೇ ಪ್ರೀತಿಯಾದರೆ ಮಾತ್ರ ತೆರೆದು ತೋರಿಸುತ್ತಾನೆ ಎಂದರು.

ನನಗೂ, ನಿನಗೂ ಬಹುಜನ್ಮವಾಗಿದೆ. ಅವೆಲ್ಲ ನನಗೆ ಗೊತ್ತಿದೆ, ನಿನಗೆ ಗೊತ್ತಿಲ್ಲ ಎಂದು ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ. ದೇವರ ಅನುಗ್ರಹದಿಂದಲೇ ಇದನ್ನು ತಿಳಿಯುವುದು ಸಾಧ್ಯ ಎಂದು ತೋಳ್ಪಾಡಿ ಹೇಳಿದರು.

Advertisement

ಹೊಸದಿಲ್ಲಿಯ ರಾಮಕೃಷ್ಣ, ಚೆನ್ನೈನ ಬಾಲಕೃಷ್ಣ ಭಟ್‌ ಸಿ.ಆರ್‌., ಮೈಸೂರಿನ ಎಂ.ಕೆ. ಪುರಾಣಿಕ್‌, ಬೆಳ್ತಂಗಡಿಯ ರಾಘವೇಂದ್ರ ಬೈಪಡಿತ್ತಾಯ, ಕಾರ್ಕಳದ ಅನಂತಕೃಷ್ಣ ಆಚಾರ್‌ ಮಾತನಾಡಿದರು.ಅಧ್ಯಕ್ಷತೆಯನ್ನು ಪುತ್ತೂರಿನ ಡಾ| ಬಾಲಕೃಷ್ಣ ಮೂಡಂಬಡಿತ್ತಾಯ ವಹಿಸಿ ದ್ದರು. ಕುಮಾರಗುರು ತಂತ್ರಿ ಸ್ವಾಗತಿಸಿ, ಸುರೇಶ ಜೋಷಿ ವಂದಿಸಿದರು.

ಹೊಸ್ತಿಲಲ್ಲಿರಿಸಿದ ದೀಪ
ಭಾರತೀಯ ಸಂಸ್ಕೃತಿ ಎಂದರೆ ಹೊಸ್ತಿಲಲ್ಲಿರಿಸಿದ ದೀಪದಂತೆ. ಅದು ಹೊರಗೂ ಒಳಗೂ ಬೆಳಕನ್ನು ಕೊಡುತ್ತದೆ. ಹಿಂದೇನಾಗಿದ್ದೆ, ಈಗೇನು ಎಂಬುದನ್ನು ಭಾರತದ ಸಂಸ್ಕೃತಿ ತೋರಿಸುತ್ತದೆ ಎಂದು ತೋಳ್ಪಾಡಿ ಬಣ್ಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next