Advertisement

ಮೊದ ಮೊದಲ ಮತ ಚೆಂದ

12:56 PM Apr 18, 2019 | mahesh |

ಎಲ್ಲ ಪ್ರಥಮಗಳಿಗೂ ಅದರದ್ದೇ ಆದ ಕನಸು, ಕಾತರಿಕೆಗಳಿರುತ್ತವೆ. ಮೊದಲ ದಿನದ ಕಾಲೇಜು, ಮೊದಲ ಪರೀಕ್ಷೆ, ಮೊದಲ ಸಂಬಳ, ಮೊದಲ ಪ್ರೀತಿ… ಮೊದಲ ಮತದಾನ ಕೂಡಾ ಆ ಸಾಲಿನಲ್ಲಿ ಜಾಗ ಪಡೆಯುತ್ತದೆ. ಮಕ್ಕಳು ಎನ್ನಿಸಿಕೊಳ್ಳುತ್ತಿದ್ದವರಿಗೆ, ನಾನೂ ದೊಡ್ಡವನಾದೆ ಅನ್ನಿಸುವುದು ವೋಟರ್‌ ಐಡಿ ಕೈಗೆ ಸಿಕ್ಕ ದಿನ. ಭವಿಷ್ಯದ ನಾಯಕನನ್ನು ಆರಿಸುವ ಹಕ್ಕನ್ನು ಮೊದಲ ಬಾರಿಗೆ ಪಡೆದ ಯುವ ಮನಸ್ಸುಗಳು ಇಲ್ಲಿ ಮಾತಾಡಿವೆ…

Advertisement

ದೇವರನ್ನು ನೆನೆದು ಮತ ಹಾಕ್ತೀನಿ…
“ನಂಗೆ ಮೊನ್ನೆಯಷ್ಟೇ ವೋಟರ್‌ ಐಡಿ ಸಿಕ್ಕಿತು. ಮೊದಲ ಬಾರಿಗೆ ಮತ ಚಲಾಯಿಸ್ತಿರೋದ್ರಿಂದ, ನಮ್ಮ ಮತಗಟ್ಟೆಯಲ್ಲಿ ನಂದೇ ಮೊದಲ ವೋಟ್‌ ಆಗಿರ್ಬೇಕು ಅಂತ ಆಸೆ ಇದೆ. ಬೆಳಗ್ಗೆ ಬೇಗ ಎದ್ದು, ಸ್ನಾನ ಮಾಡಿ, ದೇವರಿಗೆ ದೀಪ ಹಚ್ಚಿ, ನನ್ನ ಆಯ್ಕೆಯ ವ್ಯಕ್ತಿಯೇ ಗೆದ್ದು ಬರಲಿ ಅಂತ ಪ್ರಾರ್ಥಿಸಿ, ಮತಗಟ್ಟೆಗೆ ಹೋಗುವ ಪ್ಲಾನ್‌ ಮಾಡಿದ್ದೇನೆ. ಕೇಂದ್ರದಲ್ಲಿ ಸುಭದ್ರ ಸರ್ಕಾರ ಅಧಿಕಾರಕ್ಕೆ ಬರಬೇಕು. ಸರ್ಕಾರದ ಯೋಜನೆಗಳು ದೂರದೃಷ್ಟಿ ಹೊಂದಿರಬೇಕು. ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಸರ್ಕಾರಕ್ಕೆ ಮಾತ್ರ ನನ್ನ ಮತ. ನನ್ನಮ್ಮ ಟೀಚರ್‌. ಇ.ವಿ.ಎಂ.ನಲ್ಲಿ ಹೇಗೆ ಮತ ಹಾಕೋದು ಅಂತ ಅವರಿಂದ ಮಾಹಿತಿ ಪಡೆದಿದ್ದೇನೆ. ಚಿಕ್ಕಮಗಳೂರಿಗೆ ಹೋಗಿ, ಮತ ಚಲಾಯಿಸಲು ರೆಡಿ ಆಗಿದ್ದೇನೆ.
ವಿನಮ್ರ ಎಚ್‌.ಜಿ., ಎಂಜಿನಿಯರಿಂಗ್‌ ವಿದ್ಯಾರ್ಥಿನಿ, ಮಲ್ನಾಡ್‌ ಎಂಜಿನಿಯರಿಂಗ್‌ ಕಾಲೇಜು, ಹಾಸನ

ಪರೀಕ್ಷೆ ಇದ್ರೂ ವೋಟರ್‌ ಐಡಿ ಮಾಡಿಸ್ಕೊಂಡೆ
ನಾನಂತೂ ಹದಿನೆಂಟು ವರ್ಷ ಆಗೋದನ್ನೇ ಕಾಯ್ತಾ ಇದ್ದೆ. ಯಾಕಂದ್ರೆ, ಈ ಬಾರಿಯ ಚುನಾವಣೆಯನ್ನು ಮಿಸ್‌ ಮಾಡಿಕೊಳ್ಳೋದಕ್ಕೆ ಇಷ್ಟ ಇರಲಿಲ್ಲ. ಹಾಗಾಗಿ, ನನ್ನ ಬೋರ್ಡ್‌ ಎಕ್ಸಾಂ ಮಧ್ಯೆಯೇ ಬಿಡುವು ಮಾಡಿಕೊಂಡು ಹೋಗಿ ವೋಟರ್‌ ಐಡಿಗೆ ಅಪ್ಲೆ„ ಮಾಡಿ ಬಂದಿದ್ದೆ. ಅದರಲ್ಲೂ ಈ ಬಾರಿ ನಮ್ಮ ಕ್ಷೇತ್ರದಲ್ಲಿ ಯುವ ನಾಯಕರೊಬ್ಬರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ರಾಜಕೀಯದಲ್ಲಿ ಯುವಕರಿಗೆ ಆದ್ಯತೆ ನೀಡುತ್ತಿರುವುದು ನಿಜಕ್ಕೂ ಒಳ್ಳೆಯ ವಿಚಾರ. ಸುಭದ್ರ ಸರ್ಕಾರ ಅಧಿಕಾರಕ್ಕೆ ಬರಬೇಕು. ಹಾಗಾಗಿ ಯುವ ಪ್ರಜೆಯಾಗಿ ನಾನು ನನ್ನ ಹಕ್ಕು ಚಲಾಯಿಸಲು ಬದ್ಧನಾಗಿದ್ದೇನೆ.
ಪ್ರಸನ್ನ ಚಂದ್ರ, ದ್ವಿತೀಯ ಪಿಯು ವಿದ್ಯಾರ್ಥಿ, ಶ್ರೀಕುಮಾರನ್ಸ್‌ ಕಾಲೇಜು , ಬೆಂಗಳೂರು

ಪರೀಕ್ಷೆ ಅಂತ ವೋಟ್‌ ಮಿಸ್‌ ಮಾಡಲ್ಲ
ಸರ್ಕಾರದ ಕೆಲಸಗಳು ಬೇಗ ಮುಗಿಯುವುದಿಲ್ಲ ಅಂತ ಎಲ್ಲರೂ ಹೇಳ್ತಾರೆ. ಅದು ನಿಜ ಅಂತ ಅರಿವಾಗೋದು ಸರ್ಕಾರಿ ಕಚೇರಿಗಳಿಗೆ ಹೋದಾಗ. ಸಣ್ಣ ಮಟ್ಟದಿಂದ ಹಿಡಿದು, ದೊಡ್ಡ ಮಟ್ಟದವರೆಗೆ ಎಲ್ಲ ಕಡೆಯೂ ಲಂಚ, ಭ್ರಷ್ಟಾಚಾರ ನಡೆಯುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕುವಂಥ ಸರ್ಕಾರ ಅಧಿಕಾರಕ್ಕೆ ಬರಬೇಕು. ಅಂಥ ಸರ್ಕಾರವನ್ನು ಆಯ್ಕೆ ಮಾಡುವುದು ನಮ್ಮ ಕೈಯಲ್ಲೇ ಇದೆ. ನಾವೆಲ್ಲರೂ ಮತದಾನ ಮಾಡಿದರೆ, ಅದರಲ್ಲೂ ಯಾವುದೇ ಆಮಿಷಕ್ಕೆ ಬಲಿಯಾಗದೆ, ಉತ್ತಮ ವ್ಯಕ್ತಿಯನ್ನು ಆರಿಸಿದರೆ ಮಾತ್ರ ಒಳ್ಳೆ ಸರ್ಕಾರಕ್ಕೆ ಅಧಿಕಾರ ಸಿಗುತ್ತದೆ. ಇಲ್ಲದಿದ್ದರೆ, “ಅಯ್ಯೋ ಸರ್ಕಾರ ಸರಿ ಇಲ್ಲ’ ಅಂತ ಮತ್ತೆ ಐದು ವರ್ಷ ಕೊರಗಬೇಕಾಗುತ್ತೆ. ಹಾಗಾಗಿ, ನಾನಂತೂ ಈ ಸಲ ವೋಟ್‌ ಮಾಡೇ ಮಾಡ್ತೀನಿ. ಏ.25ರಿಂದ ಬಿ.ಕಾಂ. ಪರೀಕ್ಷೆಗಳು ಶುರುವಾಗಲಿವೆ. ಆದ್ರೂ, ಪರವಾಗಿಲ್ಲ. ನಮ್ಮೂರಿಗೆ ಹೋಗಿ ವೋಟು ಹಾಕಿ, ಬರಿ¤àನಿ ಅಂತ ನಿರ್ಧರಿಸಿದ್ದೇನೆ.
ಮೊದಲ ಮತದಾನ

ಅರ್ಹರಿಗಷ್ಟೇ ನನ್ನ ವೋಟು
ಒಂದು ತಿಂಗಳ ಹಿಂದಷ್ಟೇ ನನಗೆ ವೋಟರ್‌ ಐಡಿ ಸಿಕ್ಕಿತು. ಆ ಕ್ಷಣ, “ವಾವ್‌, ಈಗ ನಾನೂ ಈ ಪ್ರಜಾಪ್ರಭುತ್ವದ ಭಾಗ’ ಅಂತ ಅನ್ನಿಸಿ ಖುಷಿಯಾಯ್ತು. ಇದೇ ಮೊದಲ ಸಲ ವೋಟ್‌ ಮಾಡುತ್ತಿದ್ದೇನೆ. ನನ್ನ ಮತ ವ್ಯರ್ಥವಾಗಬಾರದು. ಹಾಗಾಗಿ ಅರ್ಹ ಅಭ್ಯರ್ಥಿಯನ್ನೇ ಆಯ್ಕೆ ಮಾಡಲು ನಿರ್ಧರಿಸಿದ್ದೇನೆ. ನಮ್ಮಿಂದ ಮತ ಪಡೆದವರು, ಅದಕ್ಕೆ ಪ್ರತಿಫ‌ಲವಾಗಿ ನಮ್ಮ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು. ದೇಶದ ಅಭಿವೃದ್ಧಿ ವಿಷಯದಲ್ಲಿ ಬದ್ಧತೆ ತೋರಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಎಲ್ಲ ವಿಷಯದಲ್ಲೂ ಮನ್ನಣೆ ಸಿಗುವಂತೆ ಮಾಡಬೇಕು. ಅದನ್ನು ಬಿಟ್ಟು, ಸ್ವಂತಕ್ಕೆ, ಸ್ವಂತದವರಿಗೆ ಅಂತ ಆಸ್ತಿ ಮಾಡಿಕೊಳ್ಳುವುದಲ್ಲ. ಅಂಥ ರಾಜಕಾರಣಿಗಳಿಗೆ ನಾನು ಯಾವತ್ತೂ ಮತ ಹಾಕುವುದಿಲ್ಲ.
ಸುಮನ್‌ ಗೌಡ, ಬಿಸಿಎ ವಿದ್ಯಾರ್ಥಿ, ಬಾಳೆಬೈಲು ಪದವಿ ಕಾಲೇಜು, ತೀರ್ಥಹಳ್ಳಿ

Advertisement

ಜಾತಿ ರಾಜಕೀಯಕ್ಕೆ ನನ್ನ ಮತವಿಲ್ಲ…
ಇದು ನನಗೆ ಮೊದಲ ಮತದಾನವಾದ್ದರಿಂದ ಕಾತರ, ಉತ್ಸಾಹವಂತೂ ಇದ್ದೇ ಇದೆ. ಮತದಾನ ಅನ್ನೋದು ದೊಡ್ಡ ಜವಾಬ್ದಾರಿ ಅನ್ನೋದನ್ನು ಗಮನದಲ್ಲಿಟ್ಟುಕೊಂಡು, ಅರ್ಹ ಅಭ್ಯರ್ಥಿಗೇ ಮತ ಹಾಕುತ್ತೇನೆ. ನನ್ನ ಪ್ರಕಾರ ಜನಪ್ರತಿನಿಧಿಯಾದವನು ಜನರ ಕಷ್ಟಕ್ಕೆ ಸ್ಪಂದಿಸಬೇಕು ಮತ್ತು ಸುಲಭವಾಗಿ ಜನರ ಸಂಪರ್ಕಕ್ಕೆ ಸಿಗುವಂತಿರಬೇಕು. ತನ್ನ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿಯೂ ಅವನಿಗಿರಬೇಕು. ಆತ ಭ್ರಷ್ಟನಾಗಿರಬಾರದು. ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಬಾರದು. ನಮ್ಮನ್ನಾಳುವ ನಾಯಕ ಅಭಿವೃದ್ಧಿಗೆ ಆದ್ಯತೆ ಕೊಡುವವನಾಗಿರಬೇಕು ಎಂಬುದು ನನ್ನ ಅಭಿಪ್ರಾಯ. ಅಂಥ ನಾಯಕನನ್ನೇ ನಾನು ಆಯ್ಕೆ ಮಾಡುತ್ತೇನೆ.
ಓಂ ಯಲಿಗಾರ, ಆಯುರ್ವೇದ ವಿದ್ಯಾರ್ಥಿ, ಎಸ್‌ಬಿಎಸ್‌ ಆಯುರ್ವೇದ ಕಾಲೇಜು, ಮುಂಡರಗಿ

Advertisement

Udayavani is now on Telegram. Click here to join our channel and stay updated with the latest news.

Next