Advertisement
ಮೃತರು ಪತ್ನಿ, ಮಣಿಪಾಲ ದಂತ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ| ಅಶೀಮಾ ವಲಿಯತ್ತಾನ್, ಪುತ್ರ ಅಮೆರಿಕದಲ್ಲಿರುವ ಇಎನ್‌ಟಿ ಸರ್ಜನ್ ಡಾ| ಮನೀಶ್, ಪುತ್ರಿ ಮಣಿಪಾಲದಲ್ಲಿ ಪೆಥಾಲಜಿ ವಿಭಾಗದ ಪ್ರಾಧ್ಯಾಪಕಿಯಾಗಿದ್ದ ಡಾ| ಮನ್ನಾ ವಲಿಯತ್ತಾನ್ ಅವರನ್ನು ಅಗಲಿದ್ದಾರೆ.
Related Articles
ಪ್ರೊ| ವಲಿಯತ್ತಾನ್ ಅವರು 1993 ರಿಂದ ಮಣಿಪಾಲದ ಮಾಹೆ ವಿ.ವಿ. ಯ ಮೊದಲ ಕುಲಪತಿಯಾಗಿ ಸೇವೆ ಸಲ್ಲಿಸಿದರು. ಅವರ ಅಧಿಕಾರಾವಧಿಯಲ್ಲಿ ಮಾಹೆ ಶೈಕ್ಷಣಿಕ ದಾಪುಗಾಲು ಇರಿಸಿತು. ಉನ್ನತ ಶಿಕ್ಷಣದಲ್ಲಿ ಮತ್ತು ಸಂಶೋಧನಾ ವಲಯದಲ್ಲಿ ಗಣನೀಯವಾದ ಸಾಧನೆ ನಡೆಯಿತು. ಸಂಸ್ಥೆಯ ಜಾಗತಿಕ ಖ್ಯಾತಿಯನ್ನು ಹೆಚ್ಚಿಸುವ ಮೂಲಕ ಅಂತರ್‌ಶಿಸ್ತೀಯ ಸಹಯೋಗ ಮತ್ತು ಅಂತಾರಾಷ್ಟ್ರೀಯ ಸಹಭಾಗಿತ್ವವನ್ನು ಪ್ರೋತ್ಸಾಹಿಸುವ ಪರಿಸರವನ್ನು ಬೆಳೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
Advertisement
ಮಾಹೆಯನ್ನು ವಿಶ್ವದರ್ಜೆಯ ವಿಶ್ವವಿದ್ಯಾನಿಲಯವನ್ನಾಗಿ ಪರಿವರ್ತಿಸುವಲ್ಲಿ, ಜಗತ್ತಿನ ವಿವಿಧ ದೇಶಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಆಕರ್ಷಿಸುವಲ್ಲಿ ಮತ್ತು ಭಾರತ ಮತ್ತು ವಿಶ್ವಾದ್ಯಂತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸುವಲ್ಲಿ ಅವರ ದೃಷ್ಟಿ ಮತ್ತು ಸಮರ್ಪಣೆ ಪ್ರಮುಖವಾಗಿದೆ.
ಆಯುರ್ವೇದ ಸಂಶೋಧನೆನಿವೃತ್ತಿಯ ಅನಂತರ ಆಯುರ್ವೇದಾಚಾರ್ಯರುಗಳಾದ ಸುಶ್ರುತ, ಚರಕ, ವಾಗ್ಭಟರ ಗ್ರಂಥಗಳನ್ನು ದೀರ್ಘ ಕಾಲ ಅಭ್ಯಸಿಸಿ ಇಂಗ್ಲಿಷ್‌ಗೆ ಭಾಷಾಂತರಿಸಿದ್ದರು. ಇದಕ್ಕಾಗಿ ಕೇರಳದ ಕೋಟಕ್ಕಲ್ ಆರ್ಯವೈದ್ಯ ಶಾಲಾ, ಬನಾರಸ್ ಹಿಂದೂ ವಿ.ವಿ.ಗಳಿಗೆ ಭೇಟಿ ನೀಡಿ ಗ್ರಂಥಗಳನ್ನು ಸಂಪಾದಿಸಿದ್ದರು. ಕೊರೊನಾ ಕಾಲಘಟ್ಟದಲ್ಲಿ “ಆಯುರ್ವೇದ ಇನ್‌ಹೆರಿಟೆನ್ಸ್ ಆಫ್ ಇಂಡಿಯ’ ವಿಷಯ ಕುರಿತು ವೀಡಿಯೋ ಉಪನ್ಯಾಸಗಳನ್ನು ನೀಡಿದ್ದರು. ಉಪನ್ಯಾಸ ಮಾಲಿಕೆಯನ್ನು ಮಣಿಪಾಲ್ ಯುನಿವರ್ಸಲ್ ಪ್ರೆಸ್ ಪುಸ್ತಕ ರೂಪದಲ್ಲಿ 2017ರಲ್ಲಿ ಹೊರತಂದಿತ್ತು. ಕುಲಪತಿಯಾಗಿ ನಿವೃತ್ತಿಯಾಗಿದ್ದರೂ ಮೂಲವಿಜ್ಞಾನದಲ್ಲಿ ಸಂಶೋಧನೆಗಳನ್ನು ನಡೆಸುತ್ತಿದ್ದ ಕಾರಣ ಮಾಹೆಯು ಅವರಿಗೆ ಪ್ರತ್ಯೇಕ ಕಚೇರಿಯನ್ನೂ ಒದಗಿಸಿತ್ತು. ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿ.,ನ ನಿರ್ದೇಶಕರಲ್ಲಿ ಒಬ್ಬರಾಗಿಯೂ ಸೇವೆ ಸಲ್ಲಿಸಿದ್ದರು. ಓದು- ನಡಿಗೆಯಲ್ಲಿ ಮಾದರಿ
ಅವರು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಏನನ್ನು ಓದಿದ್ದರೋ, ಏನನ್ನು ಪ್ರತಿಪಾದಿಸುತ್ತಿದ್ದರೋ ಅದನ್ನು ಜೀವನದಲ್ಲಿಯೂ ಅಳವಡಿಸಿಕೊಂಡಿದ್ದರು. ಕೇವಲ ಮೂರು ತಿಂಗಳ ಹಿಂದಿನವರೆಗೂ ಮನೆಯೊಳಗೇ 6ರಿಂದ 9 ಕಿ.ಮೀ.ನಷ್ಟು ನಡೆಯುತ್ತಿದ್ದರು. ಆರು ತಿಂಗಳ ಹಿಂದಿನವರೆಗೂ ದಿನಕ್ಕೆ ಐದಾರು ತಾಸು ಓದುತ್ತಿದ್ದರು. ಕೊನೆಯವರೆಗೂ ಆರೋಗ್ಯಪೂರ್ಣವಾಗಿ ಇರಬೇಕೆಂದು ಅವರು ಆಶಿಸುತ್ತಿದ್ದರು. ಶ್ರೀಕೃಷ್ಣನ ನಾಡಿನಿಂದ ಕೃಷ್ಣನ ನಾಡಿಗೆ
“ನಾನು ಹುಟ್ಟಿ ಬೆಳೆದ ಊರು ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಸಮೀಪ. ನಾನು ಮಣಿಪಾಲಕ್ಕೆ ಬಂದದ್ದೇ ಆಕಸ್ಮಿಕ. ಮಣಿಪಾಲ ವಿ.ವಿ. ಕುಲಾಧಿಪತಿ ಡಾ|ರಾಮದಾಸ್ ಎಂ. ಪೈಯವರು ದಿಲ್ಲಿಗೆ ಹೋಗುವಾಗ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಪ್ರಸ್ತಾವಿತ ವಿ.ವಿ.ಗೆ ಕುಲಪತಿಯಾಗಿ ಬರಲು ಹೇಳಿದರು. ನಿವೃತ್ತಿಯಾದ ಬಳಿಕ ಇಲ್ಲಿಂದ ಹೋಗಬೇಕೆಂದುಕೊಂಡಿದ್ದೆ. ಆದರೆ ಇಲ್ಲಿಯೂ ಶ್ರೀಕೃಷ್ಣನ ಸನ್ನಿಧಿ ಸಮೀಪವೇ ಇರುವಂತೆ ಆಯಿತು’ ಎಂದು ವಲಿಯತ್ತಾನ್ ಹೇಳುತ್ತಿದ್ದರು. ಕೊನೆಗೂ ಅವರು ಪ್ರಥಮನ ಏಕಾದಶಿಯಂದೇ ಇಹಲೋಕ ತ್ಯಜಿಸಿದರು. ಉನ್ನತ ಪುರಸ್ಕಾರಗಳು
ಪ್ರೊ| ವಲಿಯತ್ತಾನ್ ಅವರು ತಮ್ಮ ವೃತ್ತಿ ಜೀವನದುದ್ದಕ್ಕೂ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಕ್ಕೆ ಭಾಜನರಾದರು. ಪದ್ಮವಿಭೂಷಣ (2005), ಪದ್ಮಶ್ರೀ (2002), ಡಾ| ಬಿ. ಸಿ. ರಾಯ್ ರಾಷ್ಟ್ರೀಯ ಪ್ರಶಸ್ತಿ, ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನ ಹಂಟೇರಿಯನ್ ಪ್ರೊಫೆಸರ್‌ಶಿಪ್, ಫ್ರೆಂಚ್ ಸರಕಾರದಿಂದ ಚೆವಲಿಯರ್ ಆಫ್ ದಿ ಆರ್ಡರ್ ಆಫ್ ಪಾಮ್ಸ್ ಅಕಾಡೆಮಿಕ್ಸ್, ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಿಂದ ಅಂತಾರಾಷ್ಟ್ರೀಯ ವೈದ್ಯಕೀಯ ಶಿಕ್ಷಣಕ್ಕಾಗಿ ಡಾ| ಸ್ಯಾಮ್ಯುಯೆಲ್ ಪಿ. ಆಸ್ಪರ್ ಪ್ರಶಸ್ತಿ ಮತ್ತು ಭಾರತೀಯ ವೈದ್ಯಕೀಯ ಸಂಘದಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ಗಳಿಸಿದರು. ವಲಿಯತ್ತಾನ್ ಅವರ ಅಂತ್ಯಕ್ರಿಯೆ ಜು. 18ರಂದು ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ನಡೆಯಿತು.