ಪರ್ಥ್: ಸಹಸ್ರಪಾದ ಎಂಬ ಜೀವಿಯ ಹೆಸರನ್ನು ಕನ್ನಡಿಗರು ಕೇಳಿಯೇ ಇರುತ್ತಾರೆ. ಆದರೆ ಅದಕ್ಕೆ ಸಾವಿರಕಾಲು ಇರುವುದಕ್ಕೆ ಯಾವ ಖಾತ್ರಿಯೂ ಇಲ್ಲ. ಪಶ್ಚಿಮ ಆಸ್ಟ್ರೇಲಿಯಾದ ದಕ್ಷಿಣ ಕರಾವಳಿ ಭಾಗದ ಗೋಲ್ಡ್‌ಫೀಲ್ಡ್‌ನಲ್ಲಿ ಕೀಟಶಾಸ್ತ್ರಜ್ಞರು ಸಹಸ್ರಪಾದಿಯನ್ನು ಪತ್ತೆಹಚ್ಚಿದ್ದಾರೆ. ಅದಕ್ಕೆ ಯುಮಿಲ್ಲಿಪೆಸ್ ಪೆರ್ಸೆಫೋನ್ ಎಂದು ಹೆಸರಿಟ್ಟಿದ್ದಾರೆ!
ಇದಕ್ಕೆ ವಸ್ತುಸ್ಥಿತಿಯಲ್ಲಿ 1306 ಕಾಲುಗಳಿವೆ. ಹಾಗಂತ ಈ ಜೀವಿ ಸಿಕ್ಕಿರುವುದು ಭೂಮಿಯ ಮೇಲಲ್ಲ, 60 ಮೀಟರ್ ಆಳದಲ್ಲಿ.
ಈ ಸಹಸ್ರಪಾದಿಗೆ ಬೆನ್ನುಮೂಳೆಯಿಲ್ಲ (ಅಕಶೇರುಕ). ತೆವಳಿಕೊಂಡು ಹೋಗುತ್ತದೆ. ಉದ್ದ 3.2 ಇಂಚು, ಶರೀರದ ಅಗಲ 1 ಮಿ.ಮೀ.ಗಿಂತ ಕಡಿಮೆ (0.95 ಮಿ.ಮೀ). ಇನ್ನೂ ವಿಶೇಷವೆಂದರೆ ಇದಕ್ಕೆ ಕಣ್ಣು ಕಾಣುವುದಿಲ್ಲ, ಭೂಮಿಯಾಳದಲ್ಲಿ ಬಂಡೆಗಳಡಿ ಸಿಕ್ಕಿಕೊಂಡಿರುವುದರಿಂದ ಕಣ್ಣಿನ ಅಗತ್ಯವೂ ಇಲ್ಲ. ಇದಕ್ಕೆ ಪಕ್ಷಿಯ ಕೊಕ್ಕಿನಂತಹ ಬಾಯಿಯಿದೆ, ಅಕ್ಕಪಕ್ಕದಲ್ಲಿ ಆ್ಯಂಟೆನಾದಂತೆ ಚಾಚಿಕೊಂಡಿರುವ ಭಾಗವಿದೆ. ಇದರ ಮೂಲಕವೇ ಅದರ ಸಂವಹನ ವ್ಯವಸ್ಥೆ, ಗ್ರಹಿಕೆಗಳೆಲ್ಲ ನಡೆಯುತ್ತವೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ:ಪ್ರಧಾನಿ ಮೋದಿಗೆ ಭೂತಾನ್‌ನ ಅತ್ಯುನ್ನತ ಪ್ರಶಸ್ತಿ
ಹಿಂದಿನ ದಾಖಲೆ 750:
ಈ ಹಿಂದೆ ವಿಜ್ಞಾನಿಗಳಿಗೆ ಗರಿಷ್ಠವೆಂದರೆ 750 ಪಾದಗಳಿರುವ ಜೀವಿ ಸಿಕ್ಕಿತ್ತು. ಆಗ ಅದೇ ದಾಖಲೆಯಾಗಿತ್ತು. ಈಗ ಸಹಸ್ರಪಾದಿಯನ್ನು ಜೇನ್ ಮೆಕ್‌ರೇ, ಬ್ರೂನೊ ಆಲ್ವೆಸ್ ಬುಝಾಟೊ, ಪೌಲ್ ಮಾರೆಕ್, ಮಾರ್ಕ್ ಹಾರ್ವೆ ತಂಡ ಪತ್ತೆ ಹಚ್ಚಿದೆ.