Advertisement

Drought: 30 ಲಕ್ಷ ರೈತರ ಖಾತೆಗೆ ವಾರದಲ್ಲಿ ಮೊದಲ ಕಂತಿನ ಬರ ಪರಿಹಾರ: ಕೃಷ್ಣ ಬೈರೇಗೌಡ

10:26 PM Jan 19, 2024 | Team Udayavani |

ಬೆಂಗಳೂರು: ಫ್ರೂಟ್ಸ್‌ ತಂತ್ರಾಂಶದಲ್ಲಿ ಶೇ.75ರಷ್ಟು ರೈತರ ಸಂಪೂರ್ಣ ಜಮೀನು ಮಾಹಿತಿಯನ್ನು ದಾಖಲಿಸಲಾಗಿದ್ದು, ವಾರದಲ್ಲಿ 30 ಲಕ್ಷ ರೈತರಿಗೆ ಮೊದಲ ಕಂತಿನ ಬರ ಪರಿಹಾರದ ಹಣ ಬ್ಯಾಂಕ್‌ ಖಾತೆಗೆ ತಲುಪಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Advertisement

ಬರ ಪರಿಹಾರದ ಮೊದಲ ಕಂತಿನ ಹಣವನ್ನು ಶೀಘ್ರವೇ ರೈತರಿಗೆ ತಲುಪಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳ ಜತೆಗಿನ ಮಾಸಿಕ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರೈತರಿಗೆ ಬರ ಹಾಗೂ ಮಳೆಹಾನಿ ಪರಿಹಾರ ತಲುಪಿಸುವ ವಿಚಾರದಲ್ಲೂ ಈ ಹಿಂದೆ ಭಾರೀ ಅವ್ಯವಹಾರಗಳು ನಡೆದಿವೆ. ಯಾರದೋ ಜಮೀನಿಗೆ ಇನ್ಯಾರೋ ಪರಿಹಾರ ಪಡೆದಿರುವ ಪ್ರಕರಣಗಳು ನನ್ನ ಗಮನಕ್ಕೆ ಬಂದಿದೆ. ಕಡೂರು ತಾಲೂಕೊಂದರಲ್ಲೇ 6 ಕೋಟಿ ರೂ. ಅಕ್ರಮವಾಗಿದೆ. ಹಣ ದುರ್ಬಳಕೆಯಾದವರ ಪಟ್ಟಿ ನನ್ನಲ್ಲಿದೆ. ಹಾನಗಲ್‌, ಶಿಗ್ಗಾಂವಿಯಲ್ಲೂ ಇಂತಹ ಪ್ರಕರಣಗಳು ಕಂಡುಬಂದಿದೆ ಎಂದರು.

ಈ ಹಿಂದೆ ಫ್ರೂಟ್ಸ್‌ ಡೇಟಾಬೇಸ್‌ನಲ್ಲಿ 7.7 ಲಕ್ಷ ರೈತರ ಮಾಹಿತಿಯೇ ಇರಲಿಲ್ಲ. ಈಗ ಹೊಸದಾಗಿ ಸೇರಿಸಲಾಗಿದೆ. 34 ಲಕ್ಷ ರೈತರ ಜಮೀನು ಮಾಹಿತಿಯನ್ನು ಈ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಬಿಟ್ಟುಹೋಗಿರುವ ಅರ್ಹ ರೈತರ ಮಾಹಿತಿಯನ್ನು ಮತ್ತೆ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಳೆದ 15 ದಿನಗಳಿಂದ ನಮ್ಮ ಅಧಿಕಾರಿಗಳು ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ್ದು, ರೈತರ ಹಣ ದುರುಪಯೋಗವಾಗದಂತೆ ಅವರಿಗೆ ತಲುಪಿಸಲಾಗುವುದು. ಈಗಾಗಲೇ ಈ ಪ್ರಕ್ರಿಯೆ ಆರಂಭವಾಗಿದ್ದು, 15 ಲಕ್ಷಕ್ಕೂ ಅಧಿಕ ರೈತರಿಗೆ ಈಗಾಗಲೇ ಹಣ ತಲುಪಿಸಲಾಗಿದೆ. ಮುಂದಿನ ವಾರದೊಳಗೆ 30 ಲಕ್ಷ ರೈತರಿಗೆ ಪರಿಹಾರದ ಹಣ ತಲುಪಲಿದೆ ಎಂದು ವಿವರಿಸಿದರು.

ಪರಿಹಾರ ಇನ್ನೂ ಬಂದಿಲ್ಲ
ಬರ ಘೋಷಿಸಿ ನಾಲ್ಕು ತಿಂಗಳಾದರೂ ಕೇಂದ್ರದಿಂದ ಬರ ಪರಿಹಾರ ಹಣ ಇನ್ನೂ ಬಂದಿಲ್ಲ. ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ 18,177.44 ಕೋಟಿ ರೂ. ಪರಿಹಾರ ನೀಡುವಂತೆ ಸೆ.22ರಂದೇ ಕೇಂದ್ರ ಕೃಷಿ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಸಭೆ ನಡೆಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದರೂ ಉಪಯೋಗವಾಗಿಲ್ಲ. ಪರಿಣಾಮವಾಗಿ ರಾಜ್ಯ ಸರಕಾರವೇ ಮೊದಲ ಕಂತಿನಲ್ಲಿ 2,000 ರೂ. ನೀಡಲು ಮುಂದಾಗಿದೆ ಎಂದರು.

Advertisement

ಚಿತ್ರದುರ್ಗದ ಕೆಲವು ಭಾಗ ಹೊರತುಪಡಿಸಿ ಬೇರೆಲ್ಲೂ ಮೇವಿನ ಕೊರತೆ ಇಲ್ಲ. 7 ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್‌ ಉಚಿತವಾಗಿ ವಿತರಿಸಲಾಗಿದೆ. ಫೆಬ್ರವರಿಯಲ್ಲಿ ಮತ್ತೂಮ್ಮೆ ಕಿಟ್‌ ನೀಡಲಿದ್ದೇವೆ. 16 ಜಿಲ್ಲೆಗಳಲ್ಲಿ ಮೇವು ಖರೀದಿಗೆ ಟೆಂಡರ್‌ ನಡೆದಿದೆ ಎಂದರು.

ರಾಜ್ಯದ ಎಲ್ಲ ತಾಲೂಕು ಕಚೇರಿಗಳನ್ನು ಆಧುನೀಕರಣಗೊಳಿಸಲು ನಿರ್ಧರಿಸಲಾಗಿದೆ. ಫೆಬ್ರವರಿ ಮೊದಲ ವಾರದಿಂದ 31 ತಾಲೂಕುಗಳಲ್ಲಿ ಈ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಫೆ.1ರಿಂದ ಎಲ್ಲ ಕಚೇರಿಗಳಲ್ಲಿ ಇ-ಕಡತ ಕಡ್ಡಾಯಗೊಳಿಸುತ್ತೇವೆ. ತಪ್ಪಿದರೆ ಅಧಿಕಾರಿಗಳಿಗೆ ನೋಟಿಸ್‌ ನೀಡಲಾಗುವುದು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next