Advertisement

ನಿಶ್ಚಿತ ಠೇವಣಿಗೆ’ಭರ್ಜರಿ ಬಡ್ಡಿ; ಶೇ. 8 ದಾಟಿದ ಎಫ್ ಡಿ ಬಡ್ಡಿ ದರ

10:04 PM Feb 28, 2023 | |

ಮುಂಬಯಿ: ಉಳಿತಾಯಕ್ಕೆ ಇದೇ ಸುಸಮಯ…! ಹಣದುಬ್ಬರ ಪ್ರಭಾವದಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೋ ದರ ಹೆಚ್ಚಳ ಮಾಡಿದ್ದು, ಬ್ಯಾಂಕ್‌ಗಳಿಗೆ ಅನಿವಾರ್ಯವಾಗಿ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳಕ್ಕೂ ಅನುವು ಮಾಡಿಕೊಟ್ಟಿದೆ. ಹೀಗಾಗಿ, ರಾಷ್ಟ್ರೀಯ ಬ್ಯಾಂಕುಗಳು ಸೇರಿದಂತೆ ಬಹುತೇಕ ಎಲ್ಲ ಬ್ಯಾಂಕುಗಳು ನಿಶ್ಚಿತ ಠೇವಣಿ ಬಡ್ಡಿದರವನ್ನು ಸುಮಾರು ಶೇ.8ರ ಆಸುಪಾಸಿಗೆ ತೆಗೆದುಕೊಂಡು ಹೋಗಿವೆ. ವಿಶೇಷವೆಂದರೆ, ಹಲವಾರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರ ಶೇ.8 ಅನ್ನು ದಾಟಿದೆ.

Advertisement

ಒಂದು ರೀತಿಯಲ್ಲಿ ಇದು ನಿಶ್ಚಿತ ಠೇವಣಿಗಳ ಮೇಲೆ ಹಣ ಹಾಕುವವರಿಗೆ ಸಿಹಿ ಸುದ್ದಿ ಕೊಟ್ಟಂತಾಗಿದೆ. ಅಷ್ಟೇ ಅಲ್ಲ, ದೇಶದ ಅತ್ಯಂತ ನಂಬಿಕಸ್ತ ಬ್ಯಾಂಕು ಎಂದೆನಿಸಿರುವ ಭಾರತೀಯ ಸ್ಟೇಟ್‌ ಬ್ಯಾಂಕು ಶೇ.8ರ ಆಸುಪಾಸಿಗೆ ಬಡ್ಡಿದರ ನೀಡುತ್ತಿದೆ. ಹಾಗೆಯೇ ಪಂಜಾಬ್‌ ಆ್ಯಂಡ್‌ ಸಿಂದ್‌ ಬ್ಯಾಂಕ್‌ ಅತ್ಯಂತ ಹೆಚ್ಚು ಅಂದರೆ, ಶೇ.8ರಿಂದ 8.5ರ ವರೆಗೆ ವಾರ್ಷಿಕವಾಗಿ ನಿಶ್ಚಿತ ಠೇವಣಿ ಮೇಲೆ ಬಡ್ಡಿ ನೀಡುತ್ತಿದೆ. ಅಲ್ಲದೆ, ಹೆಚ್ಚು ಕಡಿಮೆ ಎಲ್ಲ ಬ್ಯಾಂಕುಗಳು 200ರಿಂದ 800 ದಿನಗಳ ಅವಧಿಗೆ ವಿವಿಧ ಬಡ್ಡಿದರಗಳಲ್ಲಿ ನಿಶ್ಚಿತ ಠೇವಣಿ ಇರಿಸಿಕೊಳ್ಳುತ್ತಿವೆ.

ಬ್ಯಾಂಕುಗಳ ವಿವಿಧ ಠೇವಣಿ ದರ
ದೇಶದ ಅತಿ ದೊಡ್ಡ ರಾಷ್ಟ್ರೀಯ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾವು, ಸಾಮಾನ್ಯ ನಾಗರಿಕರಿಗೆ ಶೇ.7.10ರ ಬಡ್ಡಿದರದಲ್ಲಿ ನಿಶ್ಚಿತ ಠೇವಣಿ ಇರಿಸಿಕೊಳ್ಳುತ್ತಿದೆ. ಹಿರಿಯ ನಾಗರಿಕರಿಗೆ ಶೇ.7.60ರಷ್ಟು ಬಡ್ಡಿ ನೀಡುತ್ತಿದೆ. 400 ದಿನಗಳ ಅವಧಿಯ ಎಫ್ಡಿಗೆ ಈ ಬಡ್ಡಿದರ ಅನ್ವಯವಾಗಲಿದೆ.

ಪಂಜಾಬ್‌ ಮತ್ತು ಸಿಂದ್‌ ಬ್ಯಾಂಕ್‌ ಇಡೀ ದೇಶದಲ್ಲೇ ಅತ್ಯಂತ ಹೆಚ್ಚು ಎಫ್ಡಿ ಬಡ್ಡಿ ದರ ನೀಡುತ್ತಿದೆ. ಇದು ಸಾಮಾನ್ಯರಿಗೆ ಶೇ.8 ಮತ್ತು ಹಿರಿಯ ನಾಗರಿಕರಿಗೆ ಶೇ.8.50ರ ಬಡ್ಡಿದರದಲ್ಲಿ 221 ದಿನಗಳ ವರೆಗೆ ಎಫ್ಡಿ ಇರಿಸಿಕೊಳ್ಳುತ್ತಿದೆ.

ಇನ್ನು ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾ ಹಿರಿಯ ನಾಗರಿಕರಿಗೆ ಉತ್ತಮ ಬಡ್ಡಿದರ ನೀಡುತ್ತಿದೆ. ಇದು 444 ದಿನಗಳ ಅವಧಿಗೆ ಹಿರಿಯ ನಾಗರಿಕರಿಗೆ ಶೇ.7.85 ಬಡ್ಡಿ, ಸಾಮಾನ್ಯ ನಾಗರಿಕರಿಗೆ ಶೇ.7.35ರಷ್ಟು ಬಡ್ಡಿ ನೀಡುತ್ತಿದೆ. ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾವು 800 ದಿನಗಳ ಠೇವಣಿಗೆ ಸಾಮಾನ್ಯರಿಗೆ ಶೇ.7.30 ಮತ್ತು ಹಿರಿಯ ನಾಗರಿಕರಿಗೆ ಶೇ.7.80ರಷ್ಟು ಬಡ್ಡಿ ನೀಡುತ್ತಿದೆ.

Advertisement

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸಾಮಾನ್ಯ ನಾಗರಿಕರಿಗೆ 666 ದಿನಗಳ ಅವಧಿಗೆ ಶೇ.7.25 ಮತ್ತು ಹಿರಿಯರಿಗೆ ಶೇ.7.75 ಬಡ್ಡಿ ದರ, ಬ್ಯಾಂಕ್‌ ಆಫ್ ಬರೋಡಾ 399 ದಿನಗಳಿಗೆ ಸಾಮಾನ್ಯರಿಗೆ ಶೇ.7.05 ಮತ್ತು ಹಿರಿಯರಿಗೆ ಶೇ.7.75 ಬಡ್ಡಿ ದರ ನೀಡುತ್ತಿದೆ.

ಕೆನರಾ ಬ್ಯಾಂಕ್‌ 400 ದಿನಗಳಿಗೆ ಸಾಮಾನ್ಯರಿಗೆ ಶೇ.7.15 ಮತ್ತು ಹಿರಿಯರಿಗೆ ಶೇ.7.65, ಇಂಡಿಯನ್‌ ಬ್ಯಾಂಕ್‌ 555 ದಿನಗಳಿಗೆ ಸಾಮಾನ್ಯರಿಗೆ ಶೇ.7 ಮತ್ತು ಹಿರಿಯರಿಗೆ ಶೇ.7.50 ನೀಡುತ್ತಿದೆ. ಸಾಮಾನ್ಯ ನಾಗರಿಕರು ಮತ್ತು ಹಿರಿಯರಿಗೆ ಕ್ರಮವಾಗಿ ಯುಕೋ ಬ್ಯಾಂಕ್‌ 666 ದಿನಗಳಿಗೆ ಶೇ.7.15 ಮತ್ತು ಶೇ.7.25, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ 444 ದಿನಗಳಿಗೆ ಶೇ.7 ಮತ್ತು ಶೇ.7.50 ಬಡ್ಡಿ ದರ ನೀಡುತ್ತಿದೆ.

ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ 5 ವರ್ಷಗಳ ಅವಧಿಯ ಎಫ್ಡಿಗೆ ಸಾಮಾನ್ಯ ನಾಗರಿಕರಿಗೆ ಶೇ.7 ಮತ್ತು ಹಿರಿಯರಿಗೆ ಶೇ.7.50ರಷ್ಟು ಬಡ್ಡಿದರ ನೀಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next