ಬೀಳಗಿ: ರೈತರ ಕೃಷಿ ಚಟುವಟಿಕೆ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಲವಾರು ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಕೃಷಿ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ಬೆಲೆ ಸಿಗುವಂತಾಗಬೇಕು ಮತ್ತು ನೀರಾವರಿಗೆ ಮೊದಲ ಆದ್ಯತೆ ಸಿಗಬೇಕು ಎನ್ನುವ ಉದ್ದೇಶದಿಂದ ಸರಕಾರ ಸದಾ ರೈತರ ಪರವಾಗಿ ನಿಂತಿದೆ ಎಂದು ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಹೇಳಿದರು.
ಪಟ್ಟಣದ ತಾಲೂಕು ಆಸ್ಪತ್ರೆ ಹತ್ತಿರ ರವಿವಾರ ಹಮ್ಮಿಕೊಂಡ ಲೋಕೋಪಯೋಗಿ ಇಲಾಖೆಯ ಐದು ಕೋಟಿ ವೆಚ್ಚದ ಬಾರಖೇಡ-ಬೀಳಗಿ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆ (ಆಯ್ದ ಭಾಗಗಳಲ್ಲಿ) ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೃಷಿ-ನೀರಾವರಿಗೆ ಒತ್ತು ನೀಡುವುದರ ಜತೆಗೆ ಗ್ರಾಮೀಣ ಭಾಗದ ಎಲ್ಲ ರಸ್ತೆಗಳ ಸುಧಾರಣೆ ಹಾಗೂ ಕುಡಿವ ನೀರಿನ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬೇಸಿಗೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ತಾಲೂಕು ಅಡಳಿತ ಸನ್ನದ್ಧವಾಗಿದೆ. ಬೇಸಿಗೆಯಲ್ಲಿ ನೀರಿನ ತೊಂದರೆಯಾಗದಂತೆ ಈಗಾಗಲೇ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನಲ್ಲಿ ಅಗತ್ಯ ನೀರಿನ ಸಂಪನ್ಮೂಲವಿದ್ದು, ಬೇಸಿಗೆ ಕಾಲದಲ್ಲಿ ನೀರಿನ ತೊಂದರೆಯಾಗದು. ಆದರೂ, ಅಂತಹ ಸ್ಥಿತಿ ಉದ್ಭವಿಸಿದರೆ ಅಗತ್ಯ ಕ್ರಮಕ್ಕೆ ಸಂಬಂಧಿಸಿದ ಇಲಾಖೆಗಳು ಸಿದ್ಧತೆ ಮಾಡಿಕೊಂಡಿವೆ ಎಂದರು.
ಮುಳುಗಡೆ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಯುಕೆಪಿ ಮೂರನೇ ಹಂತದ ಯೋಜನೆಗೆ 10 ಸಾವಿರ ಕೋಟಿ ಹಣ ನೀಡುವುದಾಗಿ ಘೊಷಣೆ ಮಾಡಿರುವುದು ಶ್ಲಾಘನೀಯ. ಯುಕೆಪಿ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರಕಾರ ಅಗತ್ಯ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎದು ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಈರಣ್ಣ ಗಿಡ್ಡಪ್ಪಗೋಳ, ಸಂಗಪ್ಪ ಕಟಗೇರಿ, ಮಲ್ಲಪ್ಪ ಶಂಭೋಜಿ, ಪಿಬ್ಲೂಡಿ ಎಇಇ ಸರೇಶ ವಿ.ಎಂ., ಎಇ ಆರ್.ಎಸ್. ಹಿರೇಮಠ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಿರಾದಾರ, ಎಪಿಎಂಸಿ ಅಧ್ಯಕ್ಷ ಗುರಪ್ಪ ಜಾಲಿ, ಗುತ್ತಿಗೆದಾರ ಕೆ.ಎನ್. ಕಂಕಾಳೆ, ಮಲ್ಲು ಲಮಾಣಿ, ಮಹಾಂತೇಶ ಸುತಗುಂಡಿ, ಪಪಂ ಸದಸ್ಯ ವಿಠಲ ಬಾಗೇವಾಡಿ, ಮುತ್ತು ಬೋರ್ಜಿ, ಮಹ್ಮಮದ ಹುಸೇನ ಬಾಗವಾನ, ರಮೇಶ ಗಾಣಿಗೇರ, ವಿಠಲ ನಿಂಬಾಳಕರ, ಸುರೇಶ ಜಿಡ್ಡಿಮನಿ, ಮಲ್ಲಯ್ಯ ಸುರಗಿಮಠ, ಪಡಿಯಪ್ಪ ಕಳ್ಳಿಮನಿ, ಸಿದ್ದು ಮಾದರ, ನಿಂಗಪ್ಪ ದಂಧರಗಿ, ಸಿದ್ದು ಪಾತ್ರೋಟ, ಬಸವರಾಜ ಉಮಚಗಿಮಠ ಇತರರು ಇದ್ದರು.