Advertisement
ಹಿಂದೆ ಹೆಣ್ಣಿಗೊಂದು ಒಳ್ಳೆಯ ಮನೆತನದ ಹುಡುಗ ಸಿಕ್ಕಿದರೆ ಸಾಕು ಎಂಬ ಆಶಯ ಮನೆಯವರಲ್ಲಿತ್ತು. ಉತ್ತಮವಾಗಿ ಸಂಸಾರ ನಿಭಾಯಿಸಿಕೊಂಡು ಹೋದರೆ ಸಾಕು ಎಂಬ ಆಕಾಂಕ್ಷೆ ಅಷ್ಟೇ ಇತ್ತು. ಆದರೆ, ಇಂದು ಸ್ವಾಭಿಮಾನಿ ಹೆಣ್ಣುಮಗಳಿಗೆ ಸ್ವಾತಂತ್ರ್ಯವೇ ಶಕ್ತಿ. ಇದನ್ನು ಪಡೆಯಲು ವೃತ್ತಿಯ ಕನಸು ಕಾಣುತ್ತಾರೆ. ಯಾಕೆಂದರೆ, ಸ್ವಾಭಿಮಾನದ ಬದುಕು ಕೊಡುವ ಸಂಭ್ರಮ ತುಂಬಾ ಹಿತವಾಗಿರುತ್ತದೆ. ಇದಕ್ಕೆ ಹೆಚ್ಚುತ್ತಿರುವ ದುಡಿಯುವ ಮಹಿಳೆಯರ ಸಂಖ್ಯೆಯೇ ನಿದರ್ಶನ. ಮನೆಕೆಲಸಕ್ಕಷ್ಟೇ ಸೀಮಿತವಾಗಿರುವ ಮಹಿಳೆಯರು ಮತ್ತು ಕುಟುಂಬಕ್ಕಾಗಿ ಹೊರಗಡೆ ದುಡಿಯುವ ಪುರುಷರು ಎಂಬ ಭಿನ್ನತೆಯ ಅಡ್ಡಗೆರೆ ಅಳಿಸುತ್ತಿರುವ ಇಪ್ಪತ್ತೂಂದನೆ ಶತಮಾನ ಇದು. ಸಂಸಾರ ಮತ್ತು ಸಂಬಳದ ದುಡಿಮೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ನಿಜವಾಗಿಯೂ ಸಾಧಕಿಯರೆನಿಸಿಕೊಂಡಿರುವ ನಮ್ಮ ಹೆಂಗಳೆಯರ ಕಾಲ ಇದು. ಸ್ವಾವಲಂಬನೆಯ ಸಿಹಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಸವಿಯುತ್ತಿರುವ ಮಹಿಳೆಯರಿರುವ ಜಮಾನವಿದು. ಇಲ್ಲಿ ಹಣ ಸಂಪಾದನೆಯೇ ಮಹಿಳೆಯ ಮುಖ್ಯ ಗುರಿಯಲ್ಲ. ಸಂಪಾದನೆಯ ಮುಖಾಂತರ ಸ್ವತಂತ್ರ್ಯಳಾಗಿ ಬದುಕುವುದು, ಸ್ವಾಭಿಮಾನಿಯಾಗುವುದು ಅವಳಿಚ್ಛೆಯಾಗಿರುತ್ತದೆ. ಅದು ಮಾನಸಿಕ ಸ್ಥೈರ್ಯವನ್ನು ನೀಡುತ್ತದೆ. ಅಪ್ಪನೆದುರು ಅಥವಾ ಗಂಡನೆದುರು ಹಣಕ್ಕಾಗಿ ಕೈ ಚಾಚುವುದನ್ನು ಬಿಟ್ಟು ತನ್ನ ಖರ್ಚನ್ನು ತಾನೇ ಹೊಂದಿಸಿಕೊಂಡು ಹೋದಾಗ, ಪೋಷಕರು ಹೊತ್ತುಕೊಂಡ ಮದುವೆ ಖರ್ಚನ್ನು ತನ್ನ ಮೇಲೆ ಹೊರಿಸಿಕೊಂಡಾಗ, ಸಮಾಜಭಾಂದವರ ಕಷ್ಟಕ್ಕೆ ಸ್ಪಂದನೆಯಾದಾಗ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ವಲ್ಪ ಸಹಾಯವಾದಾಗ, ಅನಾಥಶ್ರಮ, ವೃದ್ಧಾಶ್ರಮಕ್ಕೆ ತನ್ನಿಂದಾದ ಸಹಾಯ ಮಾಡಿದಾಗ ಎಲ್ಲಕ್ಕಿಂತ ಹೆಚ್ಚಾಗಿ ಸ್ವಾಭಿಮಾನ, ಸ್ವಾತಂತ್ರ್ಯದ ಆತ್ಮವಿಶ್ವಾಸವನ್ನು ಹೊಂದಿದಾಗ ಸಿಗುವ ಸಂಭ್ರಮ ಅನುಭವಿಸುವ ಮಹಿಳೆಯರಿಗಷ್ಟೇ ಗೊತ್ತು. ವಿದ್ಯೆ, ಉದ್ಯೋಗ, ಸಂಬಳ, ಸ್ವಾತಂತ್ರ್ಯ ಹಾಗೂ ಮಾನಸಿಕ ಸದೃಢತೆ ಇದು ಮಹಿಳೆಯರ ಭವ್ಯ ಭವಿಷ್ಯಕ್ಕೆ ಹಾದಿ ತೋರುತ್ತದೆ.
ಜ್ಞಾನಸುಧಾ ಕಾಲೇಜು, ಕಾರ್ಕಳ