ತನ್ನ ಮೊದಲ ಅಂತಾರಾಷ್ಟ್ರೀಯ ಶತಕಕ್ಕೆ ಯುವರಾಜ್ ಸಿಂಗ್ ಅವರೇ ಸ್ಫೂರ್ತಿ ಎಂದಿದ್ದಾರೆ ಯುವ ಬ್ಯಾಟರ್ ಶುಭಮನ್ ಗಿಲ್.
“ಜಿಂಬಾಬ್ವೆ ಪ್ರವಾಸಕ್ಕೂ ಮುನ್ನ ನಾನು ಯುವರಾಜ್ ಸಿಂಗ್ ಅವರನ್ನು ಭೇಟಿಯಾಗಿದ್ದೆ. ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಿ ಎಂಬುದಾಗಿ ಅವರು ಪ್ರಶಂಸಿಸಿದರು. ಒಮ್ಮೆ ಸೆಟ್ ಆದ ಬಳಿಕ ಸುದೀರ್ಘ ಅವಧಿಗೆ ಬ್ಯಾಟಿಂಗ್ ವಿಸ್ತರಿಸಬೇಕು ಎಂದ ಅವರು, ಸೆಂಚುರಿ ಬಾರಿಸುವಂತೆಯೂ ಪ್ರೇರೇಪಿಸಿದರು. ಇದೀಗ ಈಡೇರಿದೆ’ ಎಂದು ಶುಭಮನ್ ಗಿಲ್ ಹೇಳಿದರು.
ಶುಭಮನ್ ಗಿಲ್ ಶತಕ ಹೊಡೆದ ಬಳಿಕ ಯುವರಾಜ್ ಸಿಂಗ್ ಅಭಿನಂದಿಸಿದ್ದು ಕೂಡ ಉಲ್ಲೇಖನೀಯ. “ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ. ಈ ಸೆಂಚುರಿಗೆ ನೀವು ಅರ್ಹರು. ಅಭಿನಂದನೆಗಳು. ಇದು ಕೇವಲ ಆರಂಭ ಮಾತ್ರ. ಇನ್ನಷ್ಟು ಶತಕಗಳು ನಿಮ್ಮಿಂದ ಬರಲಿ…’ ಎಂದು ಯುವರಾಜ್ ಸಿಂಗ್ ಹಾರೈಸಿದ್ದರು.
ಅವಳಿ ಪ್ರಶಸ್ತಿ: ಜಿಂಬಾಬ್ವೆ ಎದುರಿನ ಅಂತಿಮ ಏಕದಿನ ಪಂದ್ಯದಲ್ಲಿ 130 ರನ್ ಬಾರಿಸುವ ಮೂಲಕ ಗಿಲ್ ಚೊಚ್ಚಲ ಶತಕದ ಸಂಭ್ರಮ ಆಚರಿಸಿದರು. ಪಂದ್ಯಶ್ರೇಷ್ಠ ಜತೆಗೆ ಸರಣಿಶ್ರೇಷ್ಠ ಗೌರವಕ್ಕೂ ಪಾತ್ರರಾದರು. ಸರಣಿಯ 3 ಪಂದ್ಯಗಳಲ್ಲಿ 122.50 ಸರಾಸರಿಯಲ್ಲಿ 245 ರನ್ ಬಾರಿಸಿದ ಸಾಧನೆ ಇವರದಾಗಿದೆ.
ಸತತ ಎರಡು ಸರಣಿಗಳಲ್ಲಿ ಶುಭಮನ್ ಗಿಲ್ ಅವರಿಗೆ ಈ ಗೌರವ ಒಲಿದಿರುವುದು ವಿಶೇಷ. ಕಳೆದ ವೆಸ್ಟ್ ಇಂಡೀಸ್ ಪ್ರವಾಸದಲ್ಲೂ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್, ಅಲ್ಲಿಯೂ ಸರಣಿಶ್ರೇಷ್ಠರಾಗಿ ಮೂಡಿಬಂದಿದ್ದರು.
ಶುಭಮನ್ ಗಿಲ್ ಐಪಿಎಲ್ ಚಾಂಪಿಯನ್ ತಂಡವಾದ ಗುಜರಾತ್ ಜೈಂಟ್ಸ್ ತಂಡದ ಆಟಗಾರ ಎಂಬುದನ್ನು ಮರೆಯುವಂತಿಲ್ಲ.