Advertisement
ಒಂದು ಲಗೇಜ್‌ಗೆ ಯಾವುದೇ ಟಿಕೆಟ್ ಇರುವುದಿಲ್ಲ. ಎರಡು ಅಥವಾ ಎರಡಕ್ಕಿಂತ ಹೆಚ್ಚು ಇರುವ ಲಗೇಜ್‌ಗಳಿಗೆಲ್ಲಾ ತಲಾ 30 ರೂ. ಟಿಕೆಟ್ ನಿಗದಿಪಡಿಸಲು ಬಿಎಂಆರ್‌ಸಿ ನಿರ್ಧರಿಸಿದೆ. ಇದು ಲಂಚ್ ಬ್ಯಾಗ್, ಲ್ಯಾಪ್‌ಟಾಪ್ ಬ್ಯಾಗ್, ಹ್ಯಾಂಡ್‌ಬ್ಯಾಗ್, ಹೆಗಲಿಗೆ ಹಾಕಿಕೊಳ್ಳುವ ಬ್ಯಾಗ್‌ಗಳಿಗೆ ಅನ್ವಯಿಸುವುದಿಲ್ಲ. ತುಂಬಿತುಳುಕುತ್ತಿರುವ ಬೋಗಿಗಳಲ್ಲಿ ಆದಷ್ಟು ಬ್ಯಾಗುಗಳ ಹಾವಳಿ ಕಡಿಮೆ ಮಾಡಿ, ಹೆಚ್ಚು ಪ್ರಯಾಣಿಕರು ಸಂಚರಿಸಲು ಈ ನಿಯಮ ಜಾರಿಗೆ ತರಲಾಗುತ್ತಿದೆ.
Related Articles
Advertisement
ಈಗಾಗಲೇ ಈ ಸಂಬಂಧ ಮೆಟ್ರೋ ನಿಲ್ದಾಣದಲ್ಲಿ ಸೂಚನಾ ಪತ್ರ ಕೂಡ ಅಂಟಿಸಲಾಗಿದ್ದು, ಅದರಲ್ಲಿ ಲಗೇಜ್ ಟಿಕೆಟ್ ದರ 30 ರೂ. ಹಾಗೂ ಟಿಕೆಟ್‌ರಹಿತ ಲಗೇಜ್ ತೆಗೆದುಕೊಂಡು ಹೋದರೆ, 200 ರೂ. ಎಂದು ಸೂಚಿಸಲಾಗಿದೆ. ಆದರೆ, ಅದರಲ್ಲಿ ಯಾವುದೇ ಅಧಿಕಾರಿಗಳ ಸಹಿ ಇಲ್ಲ. ಬಿಎಂಆರ್‌ಸಿಯ ಈ ಹೊಸ ನಿಯಮಕ್ಕೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಗೇಜಿಗೆ ಟಿಕೆಟ್ ವಿಧಿಸಿದ್ದರ ಅರ್ಥ ಮೆಜೆಸ್ಟಿಕ್‌ನ ಬಸ್ ಅಥವಾ ರೈಲು ನಿಲ್ದಾಣದಿಂದ ಮೆಟ್ರೋದಲ್ಲಿ ಓಡಾಡಬೇಡಿ. ಆಟೋ ಅಥವಾ ಖಾಸಗಿ ವಾಹನ ಬಳಸಿ ಎಂದು ಸೂಚಿಸಿದಂತಿದೆ. ಇಷ್ಟೇ ಹಣದಲ್ಲಿ ಕ್ಯಾಬ್‌ನಲ್ಲೇ ಹೋಗಬಹುದಲ್ಲಾ? ಹಾಗಿದ್ದರೆ, ಮೆಟ್ರೋ ಸೇವೆ ಉದ್ದೇಶ ಏನು?’ ಎಂದು ಪ್ರಯಾಣಿಕರು ಕೇಳುತ್ತಾರೆ.
“ಈ ಹಿಂದೆ ಕೂಡ ಲಗೇಜ್‌ಗೆ ಟಿಕೆಟ್ ಇತ್ತು. 15 ಕೆಜಿಗಿಂತ ದೊಡ್ಡ ಬ್ಯಾಗ್‌ಗಳಿಗೆ ಅಲ್ಲಿನ ಸೆಕ್ಯುರಿಟಿ ಸಿಬ್ಬಂದಿಯೇ 10 ರೂ. ನಿಗದಿಪಡಿಸಿದ್ದರು. ಅದನ್ನು ಈಗ 30 ರೂ.ಗೆ ಹೆಚ್ಚಿಸಲಾಗಿದೆ. ಜತೆಗೆ ತೂಕ ನಿಗದಿಗೆ ಪ್ರತಿ ನಿಲ್ದಾಣದಲ್ಲಿ ತೂಕದ ಯಂತ್ರ ಇಡಬೇಕು. ಇದರಿಂದ ಪ್ರಯಾಣಿಕರಿಗೂ ಕಿರಿಕಿರಿ ಆಗುತ್ತದೆ.
ಆದ್ದರಿಂದ ಒಂದು ಲಗೇಜ್ ಉಚಿತ ಹಾಗೂ ಎರಡ ಅಥವಾ ಅದಕ್ಕಿಂತ ಹೆಚ್ಚು ಬ್ಯಾಗ್‌ಗಳಿಗೆ ತಲಾ 30 ರೂ. ನಿಗದಿಪಡಿಸಲು ಉದ್ದೇಶಿಸಲಾಗಿದೆ. ಸೀಘ್ರದಲ್ಲೇ ಇದು ಜಾರಿಗೆ ಬರಲಿದೆ’ ಎಂದು ಹೆಸರು ಹೇಳಲಿಚ್ಛಿಸದ ನಿಗಮದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
ತಾತ್ಕಾಲಿಕ ವ್ಯವಸ್ಥೆ?: ವರ್ಷಾಂತ್ಯಕ್ಕೆ “ನಮ್ಮ ಮೆಟ್ರೋ’ದ ಈಗಿರುವ ಮೂರು ಬೋಗಿಗಳಿಗೆ ಇನ್ನೂ ಮೂರು ಬೋಗಿಗಳು ಸೇರ್ಪಡೆಗೊಳ್ಳಲಿವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇದು ಸಾಧ್ಯವಾಗದ ಹಿನ್ನೆಲೆಯಲ್ಲಿ ಬಿಎಂಆರ್‌ಸಿ ಹಲವು ತಾತ್ಕಾಲಿಕ ಪರಿಹಾರಗಳನ್ನು ಕಂಡುಕೊಳ್ಳುತ್ತಿದೆ. ಆ ಪೈಕಿ ಲಗೇಜಿಗೆ ಟಿಕೆಟ್ ಕೂಡ ಒಂದಾಗಿದೆ.
ಈಗಾಗಲೇ ಮೆಟ್ರೋ ರೈಲುಗಳು ತುಂಬಿತುಳುಕುತ್ತಿವೆ. ಇದರಲ್ಲಿ ನಿಲ್ಲಲಿಕ್ಕೂ ಜಾಗವಿಲ್ಲ. ಅಂತಹದ್ದರಲ್ಲಿ ಲಗೇಜುಗಳು ಕೂಡ ಹೆಚ್ಚು ಜಾಗ ಆಕ್ರಮಿಸಿಕೊಳ್ಳುತ್ತಿವೆ. ಟಿಕೆಟ್ ವಿಧಿಸುವ ಮೂಲಕ ಅವುಗಳನ್ನು ಕಡಿಮೆ ಮಾಡಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದು ಇದರ ಹಿಂದಿನ ಉದ್ದೇಶ. ಆರು ಬೋಗಿಗಳಿಗೆ ವಿಸ್ತರಣೆ ಆಗುತ್ತಿದ್ದಂತೆ, ಈ ಟಿಕೆಟ್ ವ್ಯವಸ್ಥೆ ತೆರವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.