ತೆಕ್ಕಟ್ಟೆ: ತೆಕ್ಕಟ್ಟೆ ಗ್ರಾಮ ಪಂಚಾಯತ್‌ನ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಟಿ.ಶೋಭನಾ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಆ.23ರ ಶುಕ್ರವಾರ ತೆಕ್ಕಟ್ಟೆ ಶ್ರೀ ದುರ್ಗಾಪರಮೇಶ್ವರೀ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಜಿ.ಪಂ. ಶಿಕ್ಷಣ ಮತ್ತು ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಗಣಪತಿ ಟಿ.ಶ್ರೀಯಾನ್ ಮಾತನಾಡಿ, ಈಗಾಗಲೇ ತೆಕ್ಕಟ್ಟೆ ಹೃದಯ ಭಾಗದಲ್ಲಿ ಅವ್ಯವಸ್ಥಿತವಾದ ಬಸ್ ತಂಗುದಾಣದಿಂದಾಗಿ ಸ್ಥಳೀಯ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಉದಯವಾಣಿ ಪತ್ರಿಕೆಯಲ್ಲಿ ಹಲವು ಭಾರೀ ವಿಸ್ತೃತವಾದ ವರದಿ ಪ್ರಕಟಿಸಿದೆ. ಈ ತಂಗುದಾಣ ತೆಕ್ಕಟ್ಟೆಗೆ ಕಳಂಕವಾಗಿದ್ದು, ಸಂಭವನೀಯ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ಗ್ರಾಮ ಪಂಚಾಯತ್ ವೈಜ್ಞಾನಿಕವಾಗಿ ಚಿಂತನೆ ನಡೆಸಿ, ತುರ್ತಾಗಿ ಬಸ್ ತಂಗುದಾಣವನ್ನು ಸುರಕ್ಷಿತವಾದ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಇಂದೇ ಅಂತಿಮ ನಿರ್ಣಯ ಕೈಗೊಳ್ಳುವಂತೆ ಸಾರ್ವಜನಿಕರ ಪರವಾಗಿ ಆಗ್ರಹಿಸುತ್ತಿದ್ದಂತೆ ಸಭೆಯಲ್ಲಿ ಹಾಜರಿದ್ದ ನೂರಾರು ಗ್ರಾಮಸ್ಥರು ಒಮ್ಮತದಿಂದ ಒತ್ತಾಯಿಸಿದ ಘಟನೆ ಕೂಡಾ ಸಂಭವಿಸಿದೆ.
ಈ ಸಂದರ್ಭದಲ್ಲಿ ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಟಿ.ಶೋಭನಾ ಶೆಟ್ಟಿ ಪ್ರತಿಕ್ರಿಯಿಸಿ, ತೆಕ್ಕಟ್ಟೆ ರಾ.ಹೆ.66 ಈಗಿರುವ ಪ್ರಯಾಣಿಕರ ತಾತ್ಕಾಲಿಕ ಬಸ್ ತಂಗುದಾಣಗಳಿಂದ ವಾಹನ ಸವಾರರಿಗೆ ಆಗುತ್ತಿರುವ ತೊಂದರೆಗಳನ್ನು ಅರಿತು ಕುಂದಾಪುರದಿಂದ ಉಡುಪಿ ಕಡೆಗೆ ಹೋಗುವ ಮಾರ್ಗದಲ್ಲಿನ ಬಸ್ ಸ್ಟ್ಯಾಂಡ್‌ನ ದಿ| ಬಾಲಕೃಷ್ಣ ಸೇರ್ವೆಗಾರ್ ಅವರ ಮನೆ ಎದುರಿನ ಖಾಲಿ ಜಾಗಕ್ಕೆ ಸ್ಥಳಾಂತರಿಸಲಾಗುವುದು. ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುವ ಮಾರ್ಗದಲ್ಲಿನ ಬಸ್ ಸ್ಟ್ಯಾಂಡ್‌ನ ನಾರಾಯಣ ಪೈ ಕಾಂಪ್ಲೆಕ್ಸ್ ಎದುರಿಗೆ (ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇಗುಲದ ಸಮೀಪ) ಸ್ಥಳಾಂತರಿಸುವ ಬಗ್ಗೆ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ತೆಕ್ಕಟ್ಟೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ, ಡೆಂಗ್ಯೂ ಮತ್ತು ಮಲೇರಿಯಾದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಿಂದ ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಕರಪತ್ರಗಳನ್ನು ಮುದ್ರಿಸುವ ಜವಾಬ್ದಾರಿಯನ್ನು ಗ್ರಾ.ಪಂ.ಗಳಿಗೆ ನೀಡುವ ಮೂಲಕ ಪ್ರತಿ ಗ್ರಾಮಸ್ಥರಿಗೂ ಕೂಡಾ ಕರಪತ್ರವನ್ನು ತಲುಪಿಸುವ ಮಹತ್ವದ ಕಾರ್ಯವಾಗಬೇಕಾಗಿದೆ ಎಂದು ಹೇಳಿದರು.
ಸ್ಥಳೀಯ ಯುವ ಮುಖಂಡ ಶ್ರೀನಾಥ ಶೆಟ್ಟಿ ಮೇಲ್ತಾರುಮನೆ ಮಾತನಾಡಿ, ತೆಕ್ಕಟ್ಟೆ ರಾ.ಹೆ.66ರ ಇಕ್ಕೆಲದಲ್ಲಿ ಮಳೆ ನೀರು ಸರಾಗವಾಗಿ ಹರಿಯದೇ ಬೃಹತ್ ಹೊಂಡಗಳು ಸೃಷ್ಟಿಯಾಗಿ ಕಳೆದ ಒಂದು ತಿಂಗಳಿನಿಂದಲೂ ಹೊಂಡದಲ್ಲಿ ಕೊಳಚೆ ನೀರು ಶೇಖರಣೆಯಾಗಿದೆ. ಅಲ್ಲದೇ ಇಲ್ಲಿನ ಬೃಹತ್ ರೈಸ್ ಮಿಲ್‌ನ ಹಿಂಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಕಸಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದ್ದು ಪ್ರಸ್ತುತ ಸೊಳ್ಳೆ ಉತ್ಪಾದನೆಯಾಗಿ ಪರಿಸರದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ . ಈ ಬಗ್ಗೆ ಸಂಬಂಧಪಟ್ಟ ಆರೋಗ್ಯ ಇಲಾಖೆ ತುರ್ತು ಗಮನ ಹರಸಬೇಕಾಗಿದೆ. ರಾ.ಹೆ.66 ಅಪಾಯಕಾರಿ ರಸ್ತೆ ಅಂಚುಗಳಿಂದಾಗಿ ಸ್ಥಳೀಯ ಸರಕಾರಿ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಕನ್ನುಕೆರೆ ಲಕ್ಷ್ಮೀನಾರಾಯಣ ವೈದ್ಯ ಮಾತನಾಡಿ, ಕನ್ನುಕೆರೆ ರಾ.ಹೆ.66ರ ರಸ್ತೆ ಬದಿಯಲ್ಲಿ ಉದ್ಯಮಿ ಟಿ.ವಾಸುದೇವ ನಾಯಕ್ ಮತ್ತು ಕೋ ಕಂಪೆನಿ ಹೆಸರಿನ ಖಾಸಗಿ ಅಕ್ಕಿ ಉದ್ಯಮ ಸಂಸ್ಥೆ ಹಾಗೂ ವೇ ಬ್ರಿಜ್‌ಗಳಿಗೆ ಅಪಾರ ಸಂಖ್ಯೆಯ ಘನ ವಾಹನಗಳು ರಸ್ತೆಯ ಬದಿಯಲ್ಲಿ ಸಾಲು ಸಾಲಾಗಿ ಬಂದು ನಿಲ್ಲಿಸುವ ಪರಿಣಾಮ ಸ್ಥಳೀಯ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ಅಪಾಯದ ನಡುವೆ ಸಂಚರಿಸಬೇಕಾದ ಅನಿವಾರ್ಯತೆ ಇದೆ ಈ ಬಗ್ಗೆ ತುರ್ತುಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ ಘಟನೆ ಕೂಡಾ ನಡೆಯಿತು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಮಲ್ಯಾಡಿ ಸದಾರಾಮ ಶೆಟ್ಟಿ ಅವರು ಮಾತನಾಡಿ, ತೆಕ್ಕಟ್ಟೆ ಪ್ರಮುಖ ಭಾಗದಲ್ಲಿರುವ ಬಸ್ ಸ್ಟ್ಯಾಂಡ್‌ನಲ್ಲಿ ಎಲ್ಲೆಂದರಲ್ಲಿ ಬೈಕ್ ಹಾಗೂ ಕಾರುಗಳು ತಂದು ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ . ಈ ಬಗ್ಗೆ ವಾಹನ ನಿಲುಗಡೆ ಮಾಡಬಾರದು ಎಂದು ಗ್ರಾ.ಪಂ. ಸ್ಥಳದಲ್ಲಿ ನಾಮಫಲಕ ಅಳವಡಿಸಿದೆ ಆದರೂ ಕೂಡಾ ಸಮಸ್ಯೆಗಳನ್ನು ಬಗೆಹರಿಸುವವರು ಯಾರು ಎಂದು ಹೇಳಿದರು.
ಕುಂಭಾಶಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶೋಭಾ ಮಾತನಾಡಿ, ಸಾರ್ವಜನಿಕರ ಮಾಹಿತಿಯ ಮೇರೆಗೆ ತೆಕ್ಕಟ್ಟೆಯ ವಿನಯ ಬಾರ್ ಹಾಗೂ ಕನ್ನುಕೆರೆ ಐಶಬಿ ಕಾಂಪ್ಲೆಕ್ಸ್ ನ ಎದುರಿನ ಹೊಂಡದಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆದಿರುವುದು ಕಂಡು ಬಂದಿದ್ದು ಇದಕ್ಕೆ ಸೂಕ್ತ ಕ್ರಮ ವಹಿಸಬೇಕಾಗಿದೆ . ಈ ಬಗ್ಗೆ ಜನರು ಬದಲಾಗಬೇಕು ಜತೆಗೆ ಸ್ವತ್ಛತೆಗೆ ಆದ್ಯತೆ ನೀಡಿ ಎಂದು ಹೇಳಿದರು.
ರೈಲ್ವೆ ಇಲಾಖೆಯ ಉದ್ಯೋಗಿ ಸಂತೋಷ್ ಪೂಜಾರಿ ಅವರು ಮಾತನಾಡಿ, ತೆಕ್ಕಟ್ಟೆ ರಾತ್ರಿ ವೇಳೆ ಕರೆಂಟ್ ಹೋದಾಗ ರಾತ್ರಿ ಪಾಳಯದಲ್ಲಿ ಮೆಸ್ಕಾಂ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಸಿಬಂದಿಗಳಿಲ್ಲದ ಕುರಿತು ಕಳೆದ ಎರಡು ವರ್ಷಗಳ ಹಿಂದೆಯೇ ಗ್ರಾ.ಪಂ.ನ ಗಮನಕ್ಕೆ ತಂದಿದ್ಧೇನೆ ಆದರೆ ಎರಡು ವರ್ಷವಾದರೂ ಕೂಡಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದ್ದೇವೆ. ಈ ಕುರಿತು ವಾರ್ಡ್ ಸದಸ್ಯರು ಏನು ಮಾಡುತ್ತಿದ್ದಾರೆ ? ಸಭೆ ಮಾದರಿಯಾಗಬೇಕಾಗಿತ್ತು ಆದರೆ ಕಳೆದ ಎರಡು ವರ್ಷದ ಹಿಂದೆ ಕೇಳಿದ ಪ್ರಶ್ನೆಗೆ ಅದೇ ಉತ್ತರ ಬರುತ್ತಿರುವುದು ವಿಪರ್ಯಾಸ ಗ್ರಾ.ಪಂ.ಸದಸ್ಯರಿಗೆ ಬದ್ದತೆ ಇದೆಯಾ? ಇದರಿಂದಾಗಿ ಜನ ಗ್ರಾಮ ಪಂಚಾಯತ್ ಮೇಲಿನ ಭರವಸೆ ಕಳೆದುಕೊಳ್ಳುತ್ತಿದ್ದು, ಗ್ರಾಮಸ್ಥರು ಸಭೆಗೆ ಹಾಜರಾಗಲು ಹಿಂಜರಿಯುತ್ತಿದ್ದಾರೆ ಎಂದರು.
ಹಿರಿಯ ಕೃಷಿಕ ಸೂರ್ಯ ಶೆಟ್ಟಿ ಮಾತನಾಡಿ, ತೆಕ್ಕಟ್ಟೆ ಭಾಗದಲ್ಲಿ ಕರೆಂಟ್ ಹೋದರೆ ಸುಮಾರು 3ರಿಂದ 4 ಗಂಟೆಗಳ ಕಾಲ ಬರುವುದಿಲ್ಲ ಆದರೆ ಆ ಸಮಯದಲ್ಲಿ ನಮ್ಮ ಸುತ್ತಮುತ್ತಲಿನ ಮಣೂರು, ಕೋಟ ಗ್ರಾಮಗಳಲ್ಲಿ ಕರೆಂಟ್ ಇರುತ್ತದೆ ಈ ಬಗ್ಗೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ನೊಡೆಲ್ ಅಧಿಕಾರಿ ರಾಜೇಶ್ ಕೆ.ಸಿ., ಗ್ರಾ.ಪಂ.ಉಪಾಧ್ಯಕ್ಷೆ ರೇಣುಕಾ, ಗ್ರಾ.ಪಂ. ಸದಸ್ಯರಾದ ಶೇಖರ್ ಕಾಂಚನ್, ವಿಜಯ ಭಂಡಾರಿ , ಸಂಜೀವ ದೇವಾಡಿಗ, ಮಮತಾ ದೇವಾಡಿಗ, ಸುರೇಶ್ ಶೆಟ್ಟಿ, ಸತೀಶ್ ದೇವಾಡಿಗ, ಗೋಪಾಲ, ವಿನೋದ್ ದೇವಾಡಿಗ, ಕಮಲ, ಪ್ರೇಮ, ಲಕ್ಷ್ಮೀ, ಪ್ರತಿಮಾ ಯು., ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ಪಿಡಿಒ ಸುನಿಲ್ ಸ್ವಾಗತಿಸಿ, ಗ್ರಾ.ಪಂ. ಸಿಬಂದಿಗಳಾದ ಭಾರತಿ ಶೆಟ್ಟಿ, ಆಶಾ, ಶ್ರೀನಿವಾಸ ಪೂಜಾರಿ, ಮಂಜುನಾಥ ಕೊಮೆ ಸಹಕರಿಸಿ, ಕಾರ್ಯದರ್ಶಿ ಚಂದ್ರ ವಂದಿಸಿದರು.
ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಂಚೆ ಇಲಾಖೆ ಹಾಗೂ ಕಸ್ಟಮ್ ಇಲಾಖೆಗೆ ಮೀಸಲಿರಿಸಿ ಜಾಗದಲ್ಲಿ ಯಾವುದೇ ಅಭಿವೃದ್ಧಿ ಕಾಣದೇ ಸಂಪೂರ್ಣ ಗಿಡಗಂಟಿಗಳು ಆವರಿಸಿದೆ. ಪ್ರಸ್ತುತ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರಕಾರಿ ಜಾಗದ ಕೊರತೆ ಇರುವುದರಿಂದ ಗ್ರಾಮದ ಹಿತದೃಷ್ಟಿಯಿಂದ ಆ ಜಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಆಸ್ಪತ್ರೆ ನಿರ್ಮಾಣದ ಉದ್ದೇಶಕ್ಕೆ ಗ್ರಾ.ಪಂ.ಗೆ ಜಾಗವನ್ನು ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.