ಮಣಿಪಾಲ: ಉತ್ತರ ಪ್ರದೇಶದ ನೋಯ್ಡಾದ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ), ಹಾಸನ ಮೂಲದ, ಸುರತ್ಕಲ್ ಎನ್‌ಐಟಿಕೆಯಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸಿದ ಸುಹಾಸ್ ಎಲ್ ವೈ. ಟೋಕಿಯೊ ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಮೂರನೇ ರ್‍ಯಾಂಕ್ ಹೊಂದಿರುವುದರಿಂದ ಅವರನ್ನು ಪ್ಯಾರಾಲಿಂಪಿಕ್ಸ್‌ಗೆ ಆಯ್ಕೆ ಮಾಡಲಾಗಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ ತಿಳಿಸಿದೆ. ಐಎಎಸ್ ಅಧಿಕಾರಿಯೊಬ್ಬರು ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವುದು ಇದೇ ಮೊದಲು!
ಪ್ಯಾರಾ-ಬ್ಯಾಂಡ್ಮಿಂಟನ್ ಆಟಗಾರನಾ ಗಿರುವ ಸುಹಾಸ್ ಲಾಲಿನಕೆರೆ ಯತಿರಾಜ್ 2007ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಪ್ರಯಾಗ್‌ರಾಜ್ ಸೇರಿದಂತೆ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಕಳೆದ ಒಂದು ವರ್ಷದಿಂದ ನೋಯ್ಡಾದ ಡಿಎಂ ಆಗಿ ಜಿಲ್ಲೆಯ ಕೋವಿಡ್ ವಿರುದ್ಧದ ಸಮರದ ನೇತೃತ್ವ ವಹಿಸಿದ್ದಾರೆ.
“ದೇಶವನ್ನು ಪ್ರತಿನಿಧಿಸುವುದು ಗೌರವದ ವಿಷಯ. ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವ ಹಿಸುತ್ತಿರುವ ಮೂಲಕ ನನ್ನ ಕನಸು ನನಸಾಗುತ್ತಿದೆ. ಕರ್ತವ್ಯದ ಜತೆಯಲ್ಲೇ ಕ್ರೀಡಾಕೂಟದಲ್ಲಿ ಭಾಗವಹಿಸಲು ನಿತ್ಯ ಅಭ್ಯಾಸದಲ್ಲಿ ತೊಡಗಿಕೊಳ್ಳುತ್ತೇನೆ.
Related Articles
ಪ್ಯಾರಾಲಿಂಪಿಕ್ಸ್‌ಗಾಗಿ ಒಂದು ವಾರವಷ್ಟೇ ರಜೆಯಲ್ಲಿ ತೆರಳಲಿದ್ದೇನೆ. ಇದರಿಂದ ತನ್ನ ಆಡಳಿತಾತ್ಮಕ ಕರ್ತವ್ಯಕ್ಕೆ ಅಡ್ಡಿಯಾಗದು’ ಎಂದು ಸುಹಾಸ್ ಹೇಳಿದ್ದಾರೆ.
ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್‌ಗಾಗಿ ಭಾರತ 7 ಸದಸ್ಯರ ಬಲಿಷ್ಠ ತಂಡವನ್ನು ರವಾನಿಸಲಿದೆ. ಸುಹಾಸ್ ಎಸ್‌ಎಲ್4 ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಹಾಸನ ಮೂಲ
ಸುಹಾಸ್ ಎಲ್.ವೈ. ಹಾಸನ ಮೂಲದವರಾದರೂ ಕರಾವಳಿಯ ನಂಟು ಬೆಸೆದಿದೆ. ಎನ್‌ಐಟಿಕೆ ಸುರತ್ಕಲ್‌ನಲ್ಲಿ ಇವರು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು. 2004ರ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದ ಸುಹಾಸ್ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.
2016ರ ಬೀಜಿಂಗ್ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, 2017ರ ಟರ್ಕಿಶ್ ಓಪನ್ ಬ್ಯಾಡ್ಮಿಂಟನ್‌ನಲ್ಲಿ ಅವಳಿ ಚಿನ್ನ ಗೆದ್ದ ಹೆಗ್ಗಳಿಕೆ ಸುಹಾಸ್ ಅವರದು.