ಹೊಸದಿಲ್ಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಜಯಿಸಿದ ಭಾರತದ ಶಟ್ಲರ್ಗಳಿಗೆ “ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ’ (ಬಿಎಐ) 50 ಲಕ್ಷ ರೂ. ಬಹುಮಾನ ಘೋಷಿಸಿದೆ.
ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಪ್ಯಾರಾ ಶಟ್ಲರ್ 5 ಪದಕ ಜಯಿಸಿದ್ದರು. ಇದರಲ್ಲಿ ಒಂದು ಚಿನ್ನವೂ ಸೇರಿತ್ತು. ಉಳಿದಂತೆ 2 ಬೆಳ್ಳಿ ಹಾಗೂ 2 ಕಂಚಿನ ಪದಕಗಳಿದ್ದವು.
ಪುರುಷರ ಸಿಂಗಲ್ಸ್ ಎಸ್ಎಲ್3 ವಿಭಾಗದಲ್ಲಿ ಬಂಗಾರ ಗೆದ್ದ ನಿತೇಶ್ ಕುಮಾರ್ ಅವರಿಗೆ 15 ಲಕ್ಷ ರೂ. ಬಹುಮಾನ ಲಭಿಸಲಿದೆ. ಬೆಳ್ಳಿ ಗೆದ್ದ ಸುಹಾಸ್ ಯತಿರಾಜ್ (ಪುರುಷರ ಸಿಂಗಲ್ಸ್ ಎಸ್ಎಲ್4 ವಿಭಾಗ) ಮತ್ತು ತುಳಸೀಮತಿ ಮುರುಗೇಶನ್ (ವನಿತಾ ಸಿಂಗಲ್ಸ್ ಎಸ್ಯು5) ತಲಾ 10 ಲಕ್ಷ ರೂ. ಪಡೆಯಲಿದ್ದಾರೆ.
ಕಂಚಿನ ಪದಕ ಗೆದ್ದ ಮನೀಷಾ ರಾಮದಾಸ್ (ವನಿತಾ ಸಿಂಗಲ್ಸ್ ಎಸ್ಯು5) ಮತ್ತು ನಿತ್ಯಶ್ರೀ ಶಿವನ್ (ವನಿತಾ ಸಿಂಗಲ್ಸ್ ಎಸ್ಎಚ್6) ತಲಾ 7.5 ಲಕ್ಷ ರೂ. ಪಡೆಯುವರು. ಇವರಲ್ಲಿ ತುಳಸೀಮತಿ, ಮನೀಷಾ ಮತ್ತು ನಿತ್ಯಶ್ರೀ ಅವರು ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ನಲ್ಲಿ ಪದಕ ಗೆದ್ದ ಭಾರತದ ಮೊದಲ ವನಿತಾ ಶಟ್ಲರ್ಗಳಾಗಿದ್ದಾರೆ.
“ಸಾಧನೆ ಗುರುತಿಸಿದ್ದೇವೆ’
“ಭಾರತದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರರು ವಿಶ್ವ ದರ್ಜೆಯ ಪ್ಯಾರಾಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇವರ ಸಾಧನೆಯನ್ನು ಗುರುತಿಸಲು ಹಾಗೂ ಪ್ರೋತ್ಸಾಹಿಸಲು ಬಿಎಐ ಮುಂದಿರುವ ಒಂದು ಮಾರ್ಗ ಇದಾಗಿದೆ. ದೇಶಾದ್ಯಂತ ಪ್ಯಾರಾ ಬ್ಯಾಡ್ಮಿಂಟನ್ ಪ್ರಗತಿಗೆ ನಾವು ಬದ್ಧರಾಗಿದ್ದೇವೆ’ ಎಂಬುದಾಗಿ ಬಿಎಐ ಪ್ರಧಾನ ಕಾರ್ಯದರ್ಶಿ ಸಂಜಯ್ ಮಿಶ್ರಾ ಹೇಳಿದರು.