Advertisement

ಫ‌ಸ್ಟ್‌ಹಾಫ್ ಹಳೆದು ಸೆಕೆಂಡ್‌ ಹಾಫ್ ನಾಳೆದು …

11:15 AM Jun 02, 2018 | |

ಏರಿಯಾದ ಸಿಸಿಟಿಯ ದೃಶ್ಯಗಳನ್ನು ಪೊಲೀಸ್‌ ಇಲಾಖೆಯ ಸಿಸಿಟಿವಿ ರೂಮ್‌ನಲ್ಲಿ ಕುಳಿತು ನೋಡುವ ಕಾನ್ಸ್‌ಟೇಬಲ್‌ ಅನುರಾಧಗೆ ಒಂದೊಂದು ಸಿಸಿಟಿವಿಗಳು ಒಂದೊಂದು ಕಥೆ ಹೇಳುತ್ತವೆ. ಒಂದು ಯುವ ಜೋಡಿ, ಒಂದು ಕಡೆ ವಯಸ್ಸಾದ ದಂಪತಿ, ಮತ್ತೂಂದು ಕಡೆ ಪುಂಡರ ಉಪಟಳ, ಇನ್ನೊಂದು ಕಡೆ ನಿಗೂಢವಾಗಿ ಓಡಾಡುತ್ತಿರುವ ಬ್ಲ್ಯಾಕ್‌ ಸಫಾರಿ. ಒಂದು ಹಂತಕ್ಕೆ ಇಷ್ಟು ಮಂದಿಗೆ ಸಂಬಂಧವಿರುವಂತೆ ಕಾಣುತ್ತದೆ.

Advertisement

ಕಾನ್ಸ್‌ಟೇಬಲ್‌ ಅನುರಾಧ ಕುತೂಹಲ ಹೆಚ್ಚಾಗುತ್ತದೆ. ಅದಕ್ಕೆ ಸರಿಯಾಗಿ ಹುಡುಗಿಯೊಬ್ಬಳ ಕಿಡ್ನಾಪ್‌ ಪ್ರಕರಣ. ಅನುರಾಧ ಮನಮಿಡಿಯುತ್ತದೆ. ಆಕೆ ಆ ಪ್ರಕರಣದ ಹಿಂದೆ ಬೀಳುತ್ತಾಳೆ. ಅಲ್ಲಿ ಅವಳಿಗೆ ಹೊಸ ಹೊಸ ವಿಚಾರಗಳು ಗೊತ್ತಾಗುತ್ತಾ ಹೋಗುತ್ತದೆ. “ಸೆಕೆಂಡ್‌ ಹಾಫ್’ ಸಿನಿಮಾದ ಕಥೆ ಶುರುವಾಗೋದೇ ಸಿಸಿಟಿವಿಯ ದೃಶ್ಯಗಳಿಂದ. ಪ್ರಕರಣವೊಂದಕ್ಕೆ ಸಾಕ್ಷಿಯಂತಿರುವ ಸಿಸಿಟಿವಿಯನ್ನು ನಂಬಿಕೊಂಡು ಕಾನ್ಸ್‌ಟೇಬಲ್‌ವೊಬ್ಬಳು ತನಿಖೆಗೆ ಇಳಿಯುವ ಮೂಲಕ “ಸೆಕೆಂಡ್‌ ಹಾಫ್’ ಸಿನಿಮಾ ಸಾಗುತ್ತದೆ.

ಹಾಗೆ ನೋಡಿದರೆ ಸಿಸಿಟಿವಿ ಕಥೆಯ ಒಂದು ಕೇಂದ್ರಬಿಂದುವಷ್ಟೇ. ಮುಂದೆ ನಾನಾ ತಿರುವುಗಳನ್ನು ಪಡೆಯುತ್ತಾ ಸಾಗುವ ಕಥೆಯಲ್ಲಿ ಸಿಸಿಟಿವಿಗಿಂತ ಇತರ ಅಂಶಗಳೇ ಪ್ರಮುಖವಾಗುತ್ತವೆ. ತುಂಬಾ ರೋಚಕವಾಗಿ ಕಟ್ಟಿಕೊಡಬಹುದಾದ ಒಂದು ಕಥೆಯನ್ನು ನಿರ್ದೇಶಕ ಯೋಗಿ ದೇವಗಂಗೆ ಸಾಧಾರಣವಾಗಿ ನಿರೂಪಿಸುತ್ತಾ  ಥ್ರಿಲ್ಲಿಂಗ್‌ ಅಂಶಗಳಿಂದ ಸಿನಿಮಾವನ್ನು ಮುಕ್ತವಾಗಿಸಿದ್ದಾರೆ. ಅದೇ ಕಾರಣದಿಂದ ಸಿನಿಮಾ ಹೆಚ್ಚು ಪರಿಣಾಮಕಾರಿಯಾಗಿ ಸಾಗುವುದಿಲ್ಲ.

ಪ್ರೇಕ್ಷಕ ಕೂಡಾ ಇನ್ನೇನೋ ಬೇಕಿತ್ತು ಎಂಬ ಲೆಕ್ಕಾಚಾರದೊಂದಿಗೆ ಸೀಟಿಗೆ ಒರಗುತ್ತಾನೆ. ಹಾಗಂತ ಕೆಟ್ಟ ಸಿನಿಮಾನಾ ಎಂದರೆ ಖಂಡಿತಾ ಅಲ್ಲ, ಇದೊಂಥರ ತಣ್ಣಗೆ ಹರಿಯುವ ನದಿಯಂತೆ. ಯಾವುದೇ ಗದ್ದಲವಿಲ್ಲದೇ, ಏರಿಳಿತಗಳಿಲ್ಲದೇ ಸಾಗುತ್ತದೆ. ಚಿತ್ರದಲ್ಲಿ ಸಿಸಿಟಿವಿ, ಒಂದಷ್ಟು ಜಿಗ್‌ಜಾಗ್‌ ಸನ್ನಿವೇಶಗಳಿದ್ದರೂ ಚಿತ್ರದ ಒನ್‌ಲೈನ್‌ ಮಕ್ಕಳಿಗೆ ಅಪ್ಪ-ಅಮ್ಮನ ಪ್ರೀತಿ ಮುಖ್ಯವಾಗುತ್ತದೆ ಮತ್ತು ಪ್ರತಿಷ್ಠೆಗೋಸ್ಕರ ಮಕ್ಕಳನ್ನು ದೂರವಿಡಬೇಡಿ ಎಂಬುದು. ಅಂತಿಮವಾಗಿ ಇಡೀ ಸಿನಿಮಾ ನಿಲ್ಲೋದು ಈ ಅಂಶದ ಮೇಲೆಯೇ. 

“ಸೆಕೆಂಡ್‌ ಹಾಫ್’ ಸಿನಿಮಾದ ಫ‌ಸ್ಟ್‌ಹಾಫ್ ಬಗ್ಗೆ ಹೆಚ್ಚು ಹೇಳುವಂತಿಲ್ಲ. ಏಕೆಂದರೆ ಇಲ್ಲಿ ಮಹತ್ವದ ಏನೂ ನಡೆಯೋದಿಲ್ಲ. ಸಿಸಿಟಿವಿ ದೃಶ್ಯಗಳನ್ನು ನೋಡುತ್ತಾ ಕಾನ್ಸ್‌ಟೇಬಲ್‌ ಕುತೂಹಲ ಹೆಚ್ಚಿಸಿಕೊಳ್ಳುವಲ್ಲಿಗೆ ಸಿನಿಮಾ ಮುಗಿದು ಹೋಗುತ್ತದೆ. ಇಲ್ಲಿ ಹಿನ್ನೆಲೆ ಸಂಗೀತದ ಅಬ್ಬರವೂ ಇಲ್ಲ. ಜೊತೆಗೆ ಕಥೆಯೂ ಇಲ್ಲದಿರುವುದರಿಂದ ಪ್ರೇಕ್ಷಕ ಕೂಡಾ ನಿರ್ಭಾವುಕನಾಗಿ ಕುಳಿತಿರುತ್ತಾನೆ. ಹಾಗೆ ನೋಡಿದರೆ “ಸೆಕೆಂಡ್‌ ಹಾಫ್’ನ ಕಥೆ ಅಡಗಿರೋದು “ಸೆಕೆಂಡ್‌ ಹಾಫ್’ನಲ್ಲೇ.

Advertisement

ಟೈಟಲ್‌ಗೆ ನ್ಯಾಯ ಒದಗಿಸಬೇಕೆಂಬ ಕಾರಣಕ್ಕೋ ಏನೋ, ನಿರ್ದೇಶಕರು ಫ‌ಸ್ಟ್‌ಹಾಫ್ಗೆ ಗಮನಕೊಡದೇ ಸೆಕೆಂಡ್‌ಹಾಫ್ಗೆ ಹೆಚ್ಚು ಗಮನಹರಿಸಿದ್ದಾರೆ. ಹಾಗಂತ ಇಲ್ಲಿ ವಿಶೇಷವಾದುದು ಏನೂ ನಡೆಯೋದಿಲ್ಲ. ಕಥೆ ಹೊಸ ಹೊಸ ತಿರುವುಗಳು ಪಡೆದುಕೊಳ್ಳುತ್ತವೆ. ಇಲ್ಲಿ ನಿರ್ದೇಶಕರು ಚಿತ್ರಕಥೆಯಲ್ಲಿ ಒಂದಷ್ಟು ಆಟವಾಡಿದ್ದಾರೆ. ಒಂದಷ್ಟು ದೃಶ್ಯಗಳನ್ನು ತಂದು ರಾಶಿ ಹಾಕಿದ್ದಾರೆ. ಎಲ್ಲೋ ಬಂದ ದೃಶ್ಯಕ್ಕೆ ಇನ್ನೆಲ್ಲೋ ಸಂಬಂಧ ಹಾಗೂ ಸಮಜಾಯಿಷಿ ಕೊಡುತ್ತಾ ಹೋಗುತ್ತಾರೆ.

ಹಾಗಾಗಿ, ಪ್ರೇಕ್ಷಕ ಕೂಡಾ ರಿವೈಂಡ್‌- ಫಾರ್ವರ್ಡ್‌ ಬಟನ್‌ ಒತ್ತುತ್ತಿರಬೇಕಾಗುತ್ತದೆ. ಮೊದಲೇ ಹೇಳಿದಂತೆ ಒಂದು ಪೊಲಿಟಿಕಲ್‌ ಥ್ರಿಲ್ಲರ್‌ ಸಿನಿಮಾಕ್ಕಿರಬೇಕಾದ ರೋಚಕತೆ ಇಲ್ಲಿ ಮಿಸ್‌ ಆಗಿದೆ. ಆರಂಭದಲ್ಲಿ ಸಾಕಷ್ಟು ದೃಶ್ಯಗಳನ್ನು ತೋರಿಸುತ್ತಾ, ಕಥೆಗೆ ಸಂಬಂಧಕಟ್ಟುತ್ತಾ ಹೋಗುವ ನಿರ್ದೇಶಕರು, ಅಂತಿಮವಾಗಿ ಅವೆಲ್ಲವನ್ನು ಪಕ್ಕಕ್ಕೆ ಸರಿಸಿ ಹೊಸದನ್ನು ನೀಡಿದ್ದಾರೆ. ಅದು ಕ್ಲೈಮ್ಯಾಕ್ಸ್‌ನಲ್ಲಿ. ಆ ವಿಚಾರದಲ್ಲಿ ಸೆಕೆಂಡ್‌ಹಾಫ್ ಅನಿರೀಕ್ಷಿತ ತಿರುವು ಪಡೆಯುತ್ತದೆ ಮತ್ತು ಅದು ಸಿನಿಮಾದ ಪ್ಲಸ್‌ ಪಾಯಿಂಟ್‌ ಕೂಡಾ. 

ಇಡೀ ಸಿನಿಮಾವನ್ನು ಆವರಿಸಿಕೊಂಡಿರುವವರು ಪ್ರಿಯಾಂಕಾ ಉಪೇಂದ್ರ. ಕಾನ್ಸ್‌ಟೇಬಲ್‌ ಅನುರಾಧ ಆಗಿ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅವರ ಪಾತ್ರದ ಮೂಲಕ ಕಾನ್ಸ್‌ಟೇಬಲ್‌ಗ‌ಳು ಕೂಡಾ ಪೊಲೀಸ್‌ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಬಹುದು ಮತ್ತು ಕೆಲವು ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಅವರ ಪಾತ್ರ ಕೂಡಾ ಪ್ರಮುಖವಾಗಿರುತ್ತದೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ.

ಕಣ್ಣೆದುರು ನಡೆಯುತ್ತಿರುವ ಅನಾಹುತವನ್ನು ತಪ್ಪಿಸಬೇಕೆಂದು ಚಡಪಡಿಸುವ, ಮೇಲಾಧಿಕಾರಿಗಳಿಂದ ನಿರ್ಲಕ್ಷ್ಯಕ್ಕೊಳಗಾಗುವ ಪಾತ್ರದಲ್ಲಿ ಪ್ರಿಯಾಂಕಾ ಚೆನ್ನಾಗಿ ನಟಿಸಿದ್ದಾರೆ. ಮೊದಲ ಬಾರಿಗೆ ನಟಿಸಿದ ನಿರಂಜನ್‌ ಕೂಡಾ ತಮ್ಮ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ತೆರೆಮೇಲೆ ಇದ್ದಷ್ಟು ಹೊತ್ತು ಸುರಭಿ ಗಮನಸೆಳೆಯುತ್ತಾರೆ. ಉಳಿದಂತೆ ಶರತ್‌ ಲೋಹಿತಾಶ್ವ, ವೀಣಾಸುಂದರ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. ಚೇತನ್‌ ಸೋಸ್ಕಾ ಸಂಗೀತದ ಹಾಡುಗಳು ಚೆನ್ನಾಗಿವೆ. 

ಚಿತ್ರ: ಸೆಕೆಂಡ್‌ ಹಾಫ್
ನಿರ್ಮಾಣ: ನಾಗೇಶ್‌
ನಿರ್ದೇಶನ: ಯೋಗಿ ದೇವಗಂಗೆ
ತಾರಾಗಣ: ಪ್ರಿಯಾಂಕಾ ಉಪೇಂದ್ರ, ನಿರಂಜನ್‌, ಸುರಭಿ, ಶಾಲಿನಿ, ಶರತ್‌ ಲೋಹಿತಾಶ್ವ, ವೀಣಾಸುಂದರ್‌ ಮತ್ತಿತರರು. 

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next