ಎಲ್ಲಾ ನಿರ್ದೇಶಕರಿಗೂ ಈ ತರಹದ ಒಂದು ಅವಕಾಶ ಸಿಗೋದು ಕಷ್ಟ. ಅಂತಹದ್ದೊಂದು “ಅದೃಷ್ಟ’ ನಿರ್ದೇಶಕ ಸಂತೋಷ್ ಅವರಿಗೆ “ಬಿಂದಾಸ್ ಗೂಗ್ಲಿ’ ಚಿತ್ರದಲ್ಲಿ ಸಿಕ್ಕಿದೆ. ಒಂದೇ ಚಿತ್ರದಲ್ಲಿ ಅಪ್ಪ-ಮಗನನ್ನು ನಿರ್ದೇಶಿಸೋದು. ಅದು ಇಬ್ಬರ ಮೊದಲ ಸಿನಿಮಾ ಎಂಬುದು ಮತ್ತೂಂದು ವಿಶೇಷ. “ಬಿಂದಾಸ್ ಗೂಗ್ಲಿ’ ಸಿನಿಮಾ ನೋಡಿದವರಿಗೆ ಮೊದಲು ಕಾಡುವ ಪ್ರಶ್ನೆ ಈ ಸಿನಿಮಾದ ಹೀರೋ ಯಾರೆಂಬುದು.
ಧರ್ಮ ಕೀರ್ತಿರಾಜ್, ಕಾಲೇಜು ಪ್ರಿನ್ಸಿಪಾಲ್ ಅಥವಾ ಡ್ಯಾನ್ಸ್ ಆಸಕ್ತಿ ಇರುವ ಹುಡುಗ … ಈ ಮೂವರಲ್ಲಿ ಯಾರು ಹೀರೋ ಎಂಬ ಸಣ್ಣ ಗೊಂದಲ ಕಾಡದೇ ಇರದು. ಅದರಲ್ಲೂ ಕಾಲೇಜು ಪ್ರಿನ್ಸಿಪಾಲ್ ಆಗಿ ಕಾಣಿಸಿಕೊಂಡಿರುವ ನಿರ್ಮಾಪಕ ವಿಜಯ್ ಅನ್ವೇಕರ್ ತಮ್ಮ ಮಗನಿಗೆ ಸ್ಪರ್ಧೆಯೊಡ್ಡುವ ಮಟ್ಟಕ್ಕೆ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಮಗನ ಲಾಂಚ್‌ನ ಜೊತೆ ತಾವೂ ಲಾಂಚ್ ಆಗಲು ಪ್ರಯತ್ನಿಸಿದ್ದಾರೆ.
ಅಪ್ಪನಿಗೆ ಸ್ಕೋಪ್ ಕೊಡಬೇಕೋ, ಮಗನಿಗೆ ಹೆಚ್ಚು ಕೊಡಬೇಕೋ ಎಂಬ ಸಣ್ಣ ಗೊಂದಲ ನಿರ್ದೇಶಕರಿಗೆ ಕಾಡಿದಂತಿದೆ. ಅದೇ ಕಾರಣದಿಂದ ಫಸ್ಟ್‌ಹಾಫ್ ಅಪ್ಪನಿಗೆ ಹಾಗೂ ಸೆಕೆಂಡ್ ಹಾಫ್ ಮಗನಿಗೆ ಮೀಸಲಿಟ್ಟಿದ್ದಾರೆ. “ಗುರುಕುಲ’ ಕಾಲೇಜಿನ ಶಿಸ್ತಿನ ಪ್ರಿನ್ಸಿಪಾಲ್ ಒಂದು ಕಡೆಯಾದರೆ, ಡ್ಯಾನ್ಸ್ ಆಸಕ್ತಿಯುಳ್ಳ ಒಂದಷ್ಟು ಮಂದಿ ವಿದ್ಯಾರ್ಥಿಗಳು ಇನ್ನೊಂದು ಕಡೆ. ಓದಿಗಷ್ಟೇ ಪ್ರಾಮುಖ್ಯತೆ, ಇತರ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂಬ ಧೋರಣೆ ಆ ಪ್ರಿನ್ಸಿಪಾಲ್‌ರದ್ದು.
ಈ ಬೇಸರದಲ್ಲಿ ಡ್ಯಾನ್ಸ್ ಆಸಕ್ತಿಯ ವಿದ್ಯಾರ್ಥಿಗಳು ಇರುವಾಗ ಆ ಕಾಲೇಜಿಗೆ ಎಂಟ್ರಿಕೊಡುವ ಡ್ಯಾನ್ಸ್ ಮಾಸ್ಟರ್. ವಿದ್ಯಾರ್ಥಿಗಳ ಕನಸಿಗೆ ಜೀವ ತುಂಬುವ ಡ್ಯಾನ್ಸ್ ಮಾಸ್ಟರ್ ಒಂದು ಕಡೆಯಾದರೆ, ಇನ್ನೊಂದು ಕಡೆ ಶಿಸ್ತಿನ ಪ್ರಿನ್ಸಿಪಾಲ್. ಇದು “ಬಿಂದಾಸ್ ಗೂಗ್ಲಿ’ಯ ಒನ್‌ಲೈನ್. ಇದನ್ನು ಕೇಳಿದಾಗ ನಿಮಗೆ ಹಿಂದಿಯ “ಮೊಹಬ್ಬತೆ’ ಚಿತ್ರ ನೆನಪಾಗಬಹುದು. ಶಿಸ್ತಿನ ಹೆಡ್‌ಮಾಸ್ಟರ್ ಆಗಿ ಅಮಿತಾಬ್ ಬಚ್ಚನ್, ಲವ್‌ನಲ್ಲಿ ಬೀಳುವ ವಿದ್ಯಾರ್ಥಿಗಳು,
ಲವ್ ಪ್ರೇರೇಪಿಸುವ ಮ್ಯೂಸಿಕ್ ಟೀಚರ್ ಆಗಿ ಶಾರುಖ್ ಖಾನ್…. ಈ ಪಾತ್ರಗಳ ಜೊತೆಗೆ ನೀವು “ಬಿಂದಾಸ್ ಗೂಗ್ಲಿ’ಯನ್ನು ಹೋಲಿಸುವುದಾದರೆ ನಮ್ಮದೇನೂ ಅಭ್ಯಂತರವಿಲ್ಲ. ಇಲ್ಲಿ ಪಾತ್ರಗಳಲ್ಲಿ ಹೋಲಿಕೆ ಇದೆ ನಿಜ, ಆದರೆ ಸಿನಿಮಾದ ಕಥೆಯಲ್ಲಿ ಫೋಕಸ್ ಇಲ್ಲ. ಆರಂಭದಲ್ಲಿ ಇದು ಡ್ಯಾನ್ಸ್ ಕುರಿತಾದ ಸಿನಿಮಾ ಎಂಬ ಭಾವನೆ ಬಂದರೂ ಅದು ಹೆಚ್ಚು ಒತ್ತು ಇರುವುದಿಲ್ಲ. ಡಾನ್ಸ್‌ಗಿಂತ ಪ್ರಿನ್ಸಿಪಾಲ್, ಅವರ ಸನ್ನಿವೇಶಗಳೇ ಹೆಚ್ಚು ಹೈಲೈಟ್ ಆಗಿವೆ.
ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಕೊಟ್ಟರೆ ಅವರು ಸಾಧನೆ ಮಾಡಬಲ್ಲರು ಎಂಬುದು ಚಿತ್ರದ ಒನ್‌ಲೈನ್. ಒನ್‌ಲೈನ್ ಚೆನ್ನಾಗಿದ್ದರೂ ಅದು ಮೂಡಿಬಂದ ರೀತಿ ಪರಿಣಾಮಕಾರಿಯಾಗಿಲ್ಲ. ರಾಷ್ಟ್ರಮಟ್ಟದ ಒಂದು ನೃತ್ಯ ಸ್ಪರ್ಧೆ ಎಂದರೆ ಅದರ ಗಾಂಭೀರ್ಯವೇ ಬೇರೆ ಇರುತ್ತದೆ. ಆದರೆ, ಇಲ್ಲಿ ಆ ಗಾಂಭೀರ್ಯ ಮಾಯವಾಗಿದೆ. ಕುರಿ ಸುನೀಲ್ ಅವರ ಕಾಮಿಡಿಯೊಂದಿಗೆ ತೆರೆದುಕೊಳ್ಳುವ ಕ್ಲೈಮ್ಯಾಕ್ಸ್‌ನಲ್ಲಿ, ಇಡೀ ನೃತ್ಯ ಸ್ಪರ್ಧೆ ನಡೆಸಿಕೊಡುವ ಜವಾಬ್ದಾರಿ ಕೂಡಾ ಅವರ ಮೇಲೆಯೇ ಇರುತ್ತದೆ.
ಸಹಜವಾಗಿಯೇ ನೀವು “ಕಾಮಿಡಿ ಕ್ಲೈಮ್ಯಾಕ್ಸ್’ ಅನ್ನು ನಿರೀಕ್ಷಿಸಬಹುದು. ನಾಯಕ ಆಕಾಶ್ ಡ್ಯಾನ್ಸ್‌ನಲ್ಲಿ ಇಷ್ಟವಾಗುತ್ತಾರೆ. ಹಾಗಂತ ಒಂದು ಸಿನಿಮಾದಲ್ಲಿ ಡ್ಯಾನ್ಸ್ ಅಷ್ಟೇ ಇರುವುದಿಲ್ಲ. ಅವರು ನಟನೆಯಲ್ಲಿ ಪಳಗಬೇಕಿದೆ. ಉಳಿದಂತೆ ಧರ್ಮ ಕೀರ್ತಿರಾಜ್, ನಿಮಿಕಾ ರತ್ನಾಕರ್ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಿನ್ಸಿಪಾಲ್ ಆಗಿ ಕಾಣಿಸಿಕೊಂಡಿರುವ ವಿಜಯ್ ಅನ್ವೇಕರ್ ಸಿನಿಮಾದುದ್ದಕ್ಕೂ ಗಂಭೀರವಾಗಿಯೇ ನಟಿಸಿದ್ದಾರೆ.
ಚಿತ್ರ: ಬಿಂದಾಸ್ ಗೂಗ್ಲಿ
ನಿರ್ಮಾಣ: ವಿಜಯ್ ಅನ್ವೇಕರ್
ನಿರ್ದೇಶನ: ಸಂತೋಷ್
ತಾರಾಗಣ: ಆಕಾಶ್, ನಿಮಿಕಾ ರತ್ನಾಕರ್, ಶಿಲ್ಪಾ ಲದ್ದಿಮಠ, ಮಮತಾರಾಹುತ್, ಶ್ರುತಿ, ಧರ್ಮಕೀರ್ತಿ, ಕೀರ್ತಿ ರಾಜ್, ರಾಮಕೃಷ್ಣ, ವಿಜಯ್ ಮುಂತಾದವರು
* ರವಿಪ್ರಕಾಶ್ ರೈ