ಬಿಜೆಪಿಯ ಆಪರೇಷನ್ ಕಮಲ ಭೀತಿ ಮತ್ತು ದೋಸ್ತಿ ಪಕ್ಷಗಳ ಗೊಂದಲಗಳ ನಡುವೆಯೇ ಸಮ್ಮಿಶ್ರ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಇಂದು ಮಂಡನೆಯಾಗುತ್ತಿದೆ. ಹಣಕಾಸು ಸಚಿವರೂ ಆಗಿರುವ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪೂರ್ಣ ಪ್ರಮಾಣದ ಮೊದಲ ಹಾಗೂ ತಮ್ಮ ಸರ್ಕಾರದ ಎರಡನೇ ಬಜೆಟ್ ಮಂಡಿಸಲಿದ್ದಾರೆ.
ರಾಜಕೀಯ ಅಸ್ಥಿರತೆಯ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಬಜೆಟ್ ಮೇಲೆ ರಾಜ್ಯದ ಜನತೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಾರ್ವತ್ರಿಕ ಚುನಾವಣೆಯ ವರ್ಷವೂ ಆಗಿರುವುದರಿಂದ ಬಜೆಟ್‌ನಲ್ಲಿ ಸಾಕಷ್ಟು ಜನಪ್ರಿಯ ಯೋಜನೆಗಳು ಘೋಷಣೆಯಾಗುವ ಸಾಧ್ಯತೆ ಹೆಚ್ಚಿದೆ. ಪ್ರತಿಪಕ್ಷ ಬಿಜೆಪಿಯ ಧರಣಿ ಮತ್ತು ಗದ್ದಲ ನಡುವೆಯೂ ಕುಮಾರಸ್ವಾಮಿ ಬಜೆಟ್ ಮೂಲಕ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡುವ ಪ್ರಯತ್ನದಲ್ಲಿದ್ದಾರೆ.
ಪ್ರಮುಖವಾಗಿ ಸಮ್ಮಿಶ್ರ ಸರ್ಕಾರದ ಎರಡೂ ಪಕ್ಷಗಳ ಪ್ರಣಾಳಿಕೆಗಳನ್ನು ಗಮನದಲ್ಲಿಟ್ಟುಕೊಂಡು ಕುಮಾರಸ್ವಾಮಿ ಬಜೆಟ್ ಸಿದ್ಧªಪಡಿಸಿದ್ದಾರೆ. ಕಳೆದ ಎಂಟು ತಿಂಗಳ ಅವಧಿಯಲ್ಲಿ ಜೆಡಿಎಸ್‌ನ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂಬ ಅಸಮಾಧಾನ ದೋಸ್ತಿ ಪಕ್ಷ ಕಾಂಗ್ರೆಸ್‌ನಲ್ಲಿ ಉಂಟಾಗಿರುವುದರಿಂದ ಅದನ್ನು ಹೋಗಲಾಡಿಸಲು ಈ ಬಾರಿಯ ಬಜೆಟ್ ಸಿದ್ಧªತೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಜೊತೆಯಲ್ಲಿ ಕೂಡಿಸಿಕೊಂಡು ಬಜೆಟ್ ಸಿದ್ಧತೆ ಮಾಡಿದ್ದಾರೆ. ಹೀಗಾಗಿ ಎರಡೂ ಪಕ್ಷಗಳ ಪ್ರಣಾಳಿಕೆಗಳಲ್ಲಿನ ಪ್ರಮುಖ ಅಂಶಗಳಿಗೆ ಬಜೆಟ್‌ನಲ್ಲಿ ಸಮಾನ ಆದ್ಯತೆ ದೊರೆಯುವ ನಿರೀಕ್ಷೆ ಇದೆ.
ಕಳೆದ ಬಾರಿಯ ಬಜೆಟ್ ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ ಎಂಬ ಆರೋಪ ಮೈತ್ರಿ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಶಾಸಕರಿಂದಲೇ ಬಹಿರಂಗವಾಗಿ ಕೇಳಿ ಬಂದಿತ್ತು. ಈಗಲೂ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಸರಿಯಾದ ಅನುದಾನ ದೊರೆಯುತ್ತಿಲ್ಲ ಎಂಬ ಆರೋಪವೂ ಇದೆ. ಮಿತ್ರ ಪಕ್ಷದ ಶಾಸಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಬಜೆಟ್ ಮೂಲಕ ಪರಿಹಾರ ನೀಡಬಹುದು.
ಮೊದಲ ವರ್ಷದಲ್ಲಿ ಸಾಲ ಮನ್ನಾ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಉಳಿದ ಇಲಾಖೆಗಳಿಗೆ ಮೀಸಲಿಟ್ಟ ಹಣ ಸರಿಯಾಗಿ ಬಿಡುಗಡೆಯಾಗಿಲ್ಲ ಹಾಗೂ ಚಾಲನೆಯಲ್ಲಿದ್ದ ಯೋಜನೆಗಳು ನಿರೀಕ್ಷಿತ ಪ್ರಗತಿ ಕಂಡಿಲ್ಲ. ಹಣಕಾಸಿನ ಕೊರತೆಯಿಂದ ಅನೇಕ ಯೋಜನೆಗಳು ನನೆಗುದಿಗೆ ಬಿದ್ದಿದ್ದು, ಅವುಗಳ ಪುನರ್ ಚಾಲನೆ ನೀಡಲು ಅಗತ್ಯ ಹಣಕಾಸಿನ ನೆರವು ನೀಡುವ ಅಗತ್ಯವಿದೆ. ಪ್ರಮುಖವಾಗಿ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿಗಳು, ಆಶ್ರಯ ಮನೆಗಳ ಫಲಾನುಭವಿಗಳಿಗೆ ನಿಗದಿತ ಸಮಯಕ್ಕೆ ಹಣ ಬಿಡುಗಡೆ ಮಾಡುವುದು, ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲಿ ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನವನ್ನು ನಿಯಮಿತವಾಗಿ ಬಿಡುಗಡೆಯಾಗುವಂತೆ ನೋಡಿಕೊಳ್ಳಲು ಸೂಕ್ತ ಆರ್ಥಿಕ ವ್ಯವಸ್ಥೆ ಕಲ್ಪಿಸಲು, ಪರ್ಯಾಯ ಆದಾಯದ ಮೂಲಗಳ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಬೆಳಕು ಚೆಲ್ಲಬಹುದು.
ಸಾಲ ಮನ್ನಾ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರ ಖಾತೆಗಳಿಗೆ ಹಣ ಬಿಡುಗಡೆ ಮಾಡದೇ ಇರುವುದು, ಸರ್ಕಾರದ ಮೇಲೆ ಆ ರೈತ ಸಮುದಾಯಕ್ಕೆ ಇನ್ನೂ ಸಂಪೂರ್ಣ ಭರವಸೆ ಮೂಡದಂ ತಾಗಿದೆ. ರೈತ ಸಮುದಾಯದಲ್ಲಿ ಸರ್ಕಾರದ ಬಗ್ಗೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಸಾಲ ಮನ್ನಾ ಯೋಜನೆಗೆ ಹೆಚ್ಚಿನ ಅನುದಾನ ನೀಡುವ, ಅದಕ್ಕೆ ಹಣಕಾಸು ಹೊಂದಿಸಲು ಮುಖ್ಯಮಂತ್ರಿ ಬೇರೆ ಯೋಜನೆಗಳ ಲೆಕ್ಕಾಚಾರವನ್ನು ಹೆಚ್ಚು ಕಡಿಮೆ ಮಾಡುವ ಸಾಧ್ಯತೆ ಇದೆ.
ಕಣ್ಣ ಮುಂದೆ ಚುನಾವಣೆ ಇರುವುದರಿಂದ ಬಜೆಟ್‌ನಲ್ಲಿ ಜನಪ್ರಿಯ ಘೋಷಣೆಗಳು ಹೊರಬೀಳಬಹುದು. ಆದರೆ, ಸರ್ಕಾರದ ಸದ್ಯದ ಆರ್ಥಿಕ ಪರಿಸ್ಥಿತಿ, ವಿತ್ತೀಯ ಶಿಸ್ತು ಮೀರದಂತೆ ನೋಡಿಕೊಳ್ಳುವ ಜವಾಬ್ದಾರಿ ಇರುವುದರಿಂದ ಬಜೆಟ್‌ನಲ್ಲಿ ಭರಪೂರ ಭರವಸೆಗಳ ಜೊತೆಗೆ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷವನ್ನು ಸಮಾಧಾನಿಸುವ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ.