ವಿ. ಮುನಿಯಪ್ಪ, ಶಾಸಕರು
ಚಿಕ್ಕಬಳ್ಳಾಪುರ: ಪ್ರಸ್ತುತ ಚುನಾವಣೆ ನಡೆಸುವುದು ಬಹಳ ಕಷ್ಟವಾಗಿದೆ. ಸಮಾಜಸೇವೆಯ ಹೆಸರಿನಲ್ಲಿ ಆಸೆ ಆಮಿಷಗಳನ್ನು ನೀಡಿ ಕೆಲವರು ರಾಜಕೀಯ ವ್ಯವಸ್ಥೆಯನ್ನು ಕಲುಷಿತಗೊಳಿಸಲು ಹೊರಟಿರುವುದು ಬಹಳ ನೋವಿನ ಸಂಗತಿ…
ಇದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ವಿ.ಮುನಿಯಪ್ಪ ಅವರ ಮನದಾಳದ ಮಾತು.
ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆ ಮೂಲಕ ಸಾರ್ವಜನಿಕ ಜೀವನದಲ್ಲಿ ಪಾದಾರ್ಪಣೆ ಮಾಡಿದ ಮುನಿಯಪ್ಪ, ಯುವ ಕಾಂಗ್ರೆಸ್, ಭೂ ಅಭಿವೃದ್ಧಿ ಬ್ಯಾಂಕ್‌ನ ನಿರ್ದೇಶಕರಾಗಿ ಮತ್ತು ಟಿಎಪಿಸಿಎಂಎಸ್ ಅಧ್ಯಕ್ಷರಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1983ರಲ್ಲಿ ಅಂದಿನ ಸಂಸದರಾದ ಪ್ರಸನ್ನಕುಮಾರ್ ಅವರಿಂದಾಗಿ ಟಿಕೆಟ್ ಸಿಕ್ಕಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಆಗ ಒಂದು ಬೂತ್‌ಗೆ ಕೇವಲ ಒಂದು ಸಾವಿರ ರೂ. ವೆಚ್ಚ ಮಾಡಿದ್ದೆ.
ಆಗ ಒಟ್ಟಾರೆಯಾಗಿ ಒಂದೂವರೆಯಿಂದ ಎರಡು ಲಕ್ಷ ರೂಗಳನ್ನು ಖರ್ಚು ಮಾಡಿ ಶಾಸಕನಾದದ್ದನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಈಗ ರಾಜಕಾರಣ ಮಾಡುವುದು ಬಹಳ ಕಷ್ಟವಾಗಿದೆ. ಹಣ ಇದ್ದರೆ ಮಾತ್ರ ಚುನಾವಣೆಯನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂದಿರಾ ಗಾಂಧಿ ಅಲೆಯಿಂದಾಗಿ ಅಖಂಡ ಕೋಲಾರ ಜಿಲ್ಲೆಯಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಶಾಸಕನಾಗುವ ಭಾಗ್ಯ ನನಗೆ ಸಿಕ್ಕಿತ್ತು. 1983ರಲ್ಲಿ ಪ್ರಪ್ರಥಮ ಬಾರಿಗೆ ಚುನಾವಣೆಯನ್ನು ಎದುರಿಸಿದಾಗ ಎರಡು ಸಾವಿರಕ್ಕೂ ಅಧಿಕ ಮತಗಳಿಂದ ಎಸ್. ಮುನಿಶಾಮಪ್ಪ ಅವರ ವಿರುದ್ದ ಗೆಲುವು ಸಾಧಿಸಿದ್ದೆ ಎಂದು ಮುನಿಯಪ್ಪ ನೆನಪಿಸಿಕೊಳ್ಳುತ್ತಾರೆ.
1994-95ರಲ್ಲಿ ಜನತಾದಳದ ಅಲೆ ಬೀಸಿದರೂ ಸಹ ಕೋಲಾರ ಜಿಲ್ಲೆಯಿಂದ ಕೇವಲ ವಿ.ಮುನಿಯಪ್ಪ ಅವರು ಮಾತ್ರ ಆಯ್ಕೆಯಾಗಿದ್ದರು. ಇದೇ ವೇಳೆಯಲ್ಲಿ ಬೆಂಗಳೂರು ವಿಭಾಗದಲ್ಲಿ ರಾಮಲಿಂಗಾರೆಡ್ಡಿ ಮತ್ತು ವಿ ಮುನಿಯಪ್ಪ ಅವರು ಮಾತ್ರ ಶಾಸಕರಾಗಿದ್ದರು ಎಂಬುದು ವಿಶೇಷ.
-ಎಂ.ಎ.ತಮೀಮ್‌ಪಾಷ