Advertisement

ಅಂಗವೈಕಲ್ಯವನ್ನು ಮೆಟ್ಟಿ ನಿಂತು ಕುಮಾರಪರ್ವತ ಏರಿದ ಬೆಂಗಳೂರಿನ ಮೆಸ್ಕಾಂ ಅಧಿಕಾರಿ

12:11 PM Feb 05, 2020 | mahesh |

ಸುಬ್ರಹ್ಮಣ್ಯ: ಅಂಗವೈಕಲ್ಯವನ್ನು ಮೆಟ್ಟಿ ನಿಂತು ಒಂಟಿಗಾಲಿನಲ್ಲಿ ಕುಮಾರ ಪರ್ವತವನ್ನು ಏರಿ ಸಾಧನೆ ಮಾಡಿದ್ದಾರೆ ಹಾಸನ ಮೂಲದ ಬೆಂಗಳೂರಿನ ಮೆಸ್ಕಾಂ ಅಧಿಕಾರಿ ಸುನಿಲ್‌. ಸುನಿಲ್‌ 6ನೇ ತರಗತಿ ಓದುತ್ತಿದ್ದಾಗ ಎಡಗಾಲಿಗೆ ಗ್ಯಾಂಗ್ರಿನ್‌ ಆಗಿತ್ತು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ 10 ವರ್ಷಗಳ ಹಿಂದೆ ವೈದ್ಯರ ಸಲಹೆಯಂತೆ ಎಡಗಾಲನ್ನು ತುಂಡರಿಸಲಾಗಿತ್ತು. ಅಂಗ ವೈಕಲ್ಯದ ನಡುವೆಯೂ ಬಿಇ ಪದವಿ ಪಡೆದು ಪ್ರಸ್ತುತ ಬೆಂಗಳೂರಿನ ಮಾಗಡಿಯಲ್ಲಿ ಮೆಸ್ಕಾಂ ಎಂಜಿನಿಯರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

ಸುನಿಲ್‌ಗೆ ಬಾಲ್ಯದಿಂದಲೇ ಚಾರಣದ ಹವ್ಯಾಸ. ಬಿಡುವಿದ್ದಾಗಲೆಲ್ಲ ಗೆಳೆಯರ ಜತೆಗೆ ಚಾರಣಕ್ಕೆ
ಹೋಗುತ್ತಿದ್ದರು. ಬೆಂಗಳೂರು ಆಸು ಪಾಸಿನ ಶಿವಗಂಗೆ ಬೆಟ್ಟ, ಮಾಗಡಿಯ ಸಾವನದುರ್ಗಾ, ಕುಣಿಗಲ್‌ನ ಉತ್ರಿ ದುರ್ಗ, ತಡಿಯಂಡ ಮೋಳ್‌ ಇತ್ಯಾದಿಗಳನ್ನು ಈಗಾಗಲೇ ಒಂಟಿಗಾಲಿ ನಲ್ಲಿ ಏರಿಳಿದಿದ್ದಾರೆ. ಈ ಬಾರಿ ಕುಮಾರ ಪರ್ವತ ಚಾರಣ ನಿರ್ಧಾರ ಕೈಗೊಂಡಿದ್ದು, ಸಾಧಿಸಿದ್ದಾರೆ. ಅಂಗವಿಕಲರೊಬ್ಬರ ಕುಮಾರ ಪರ್ವತ ಏರಿರುವುದು ಇದೇ ಮೊದಲು.

ಊರುಗೋಲು, ಗೆಳೆಯರ ಸಹಾಯ
26ರ ಹರೆಯದ ಸುನಿಲ್‌ ಅವರೊಳಗೊಂಡ ಬೆಂಗಳೂರಿನ 8 ಮಂದಿ ಯುವಕರ ತಂಡ ಜ. 26ರಂದು ಕುಮಾರಪರ್ವತಕ್ಕೆ ತೆರಳಿತ್ತು. ಸುನಿಲ್‌ ತನ್ನ ಸಾಹಸಕ್ಕೆ ಊರುಗೋಲು ಮತ್ತು ಗೆಳೆಯರ ಸಹಾಯ ಪಡೆದಿದ್ದರು. ಮಧ್ಯಾಹ್ನ 1ಕ್ಕೆ ದೇವರಗದ್ದೆಯಿಂದ ಹೊರಟು ಸಂಜೆ 6ಕ್ಕೆ ಗಿರಿಗದ್ದೆ ತಲುಪಿ ರಾತ್ರಿ ವಿಶ್ರಾಂತಿ ಪಡೆದರು. ಜ. 27ರಂದು ಬೆಳಗ್ಗೆ ಪರ್ವತದ ತಪ್ಪಲಿಗೆ ತಲುಪಿ ಸಂಜೆ 6ರ ವೇಳೆಗೆ ಸುಬ್ರಹ್ಮಣ್ಯಕ್ಕೆ ಮರಳಿದರು. ಅವರು ಕ್ರಮಿಸಿದ ಒಟ್ಟು ದೂರ 26 ಕಿ.ಮೀ. ಬೆಂಗಳೂರಿಗೆ ಸ್ಕೂಟಿಯಲ್ಲಿ ಪಯಣ ಸುನಿಲ್‌ ತಂದೆ ಲಿಂಗರಾಜ್‌ ಹಾಸನದಲ್ಲಿ ಲಾರಿ ಚಾಲಕ, ತಾಯಿ ಗೃಹಿಣಿ. ಸಹೋದರ ಖಾಸಗಿ ಉದ್ಯೋಗಿ. ಅವಿವಾಹಿತರಾಗಿರುವ ಸುನಿಲ್‌ ಕಷ್ಟದಲ್ಲಿ ಬೆಳೆದು ಬಂದವರು. ಕ್ರೀಡೆಯಲ್ಲಿ ಆಸಕ್ತಿ ಇರುವ ಅವರು ಹಾಸನ-ಬೆಂಗಳೂರು ನಡುವೆ ಸ್ಕೂಟಿಯಲ್ಲಿ ಸಂಚರಿಸುತ್ತಾರೆ.

ಮೆಚ್ಚುಗೆ
ಸುನಿಲ್‌ ಅವರ ಕುಮಾರಪರ್ವತ ಏರಿರುವ ಸಾಧನೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಬೆಟ್ಟ ಏರುವುದು ಸುಲಭವಲ್ಲ
ಚಾರಣಿಗರಿಗೆ ಕುಮಾರ ಪರ್ವತದ ಚೆಲುವಿನ ಹಾದಿ ಸವಾಲು ಮತ್ತು ಸೆಣಸಾಟದ ದಾರಿಯೂ ಹೌದು. ಕಲ್ಲುಗಳ ಮೇಲೆ ಜಾರಿ ಇಳಿದು ತೆರಳುವ ಕಡಿದಾದ ಮಾರ್ಗದಲ್ಲಿ ಹಲವಾರು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಆರಂಭದ ಮೂರ್ನಾಲ್ಕು ಕಿ.ಮೀ. ದೂರ ದಟ್ಟ ಕಾಡು, ಕಾಡುಪ್ರಾಣಿಗಳ
ಹಾವಳಿಯಿದೆ, ಆನೆಗಳು ಅಡ್ಡಾಡುತ್ತವೆ. ಇಲ್ಲಿ ಎಚ್ಚರಿಕೆಯಿಂದ ನಡೆಯಬೇಕು. ಇವೆಲ್ಲದರ ನಡುವೆ ಎಂಟೆದೆಯ ಧೈರ್ಯ ತೋರಿದ್ದಾರೆ ಸುನಿಲ್‌.

Advertisement

ಒಂಟಿ ಕಾಲಿನಲ್ಲಿ 5 ಕಿ.ಮೀ. ಓಡಿದ ಮಹಾರಾಷ್ಟ್ರದ ಸಾಹಸಿಗ
ಮಂಗಳೂರು, ಫೆ. 4: ಸಾಧನೆ, ಸಾಹಸಕ್ಕೆ ಅಂಗ ಊನ ನೆಪವಲ್ಲ ಎಂಬುದನ್ನು ಮಹಾರಾಷ್ಟ್ರ ಮೂಲದ ಸಾಹಸಿಗರೊಬ್ಬರು ಮಂಗಳೂರಿನಲ್ಲಿ ತೋರಿಸಿಕೊಟ್ಟಿದ್ದಾರೆ. ಕೈಯಲ್ಲಿ ಊರುಗೋಲು ಹಿಡಿದು ಒಂಟಿ ಕಾಲಿನಲ್ಲಿ 5 ಕಿ.ಮೀ. ಓಡುವ ಮೂಲಕ ಸಾಹಸ ಮೆರೆದಿದ್ದಾರೆ.

ದಕ್ಷಿಣ ಕನ್ನಡ ಆ್ಯತ್ಲೆಟಿಕ್‌ ಅಸೋಸಿಯೇಶನ್‌ ವತಿಯಿಂದ ಫಿಟ್‌ ಇಂಡಿಯಾ ಥೀಂನಡಿ ಇತೀಚೆಗೆ “ಸಹ್ಯಾದ್ರಿ 10ಕೆ ರನ್‌ ಮಂಗಳೂರು’ ಮೆಗಾ ಮ್ಯಾರಥಾನ್‌ ನಡೆಸಲಾಗಿತ್ತು. ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಮಹಾರಾಷ್ಟ್ರದ ಲೋನರ್‌ನ ಜಾವೇದ್‌ ಚೌದರಿ ಅವರೂ ಮ್ಯಾರಥಾನ್‌ನಲ್ಲಿ ಭಾಗವಹಿಸುವುದಕ್ಕಾಗಿಯೇ ಮಂಗ ಳೂರಿಗೆ ಬಂದಿದ್ದರು. ಆದರೆ ಅಪಘಾತದಲ್ಲಿ ಬಲಗಾಲನ್ನು ಕಳೆದುಕೊಂಡಿದ್ದ ಅವರಿಗೆ ನಡೆದಾಡುವುದಕ್ಕೆ ಎಡಗಾಲೇ ಆಸರೆ. ಹಾಗೆಂದು ಅಂಗ ನ್ಯೂನತೆಗಾಗಿ ಮರುಗದೆ, ಮಂಗಳೂರಿಗೆ ಆಗಮಿಸಿ ಕೈಯಲ್ಲಿ ಊರುಗೋಲು ಹಿಡಿದುಕೊಂಡು ಎಡಗಾಲಿನಲ್ಲೇ ಓಡಿ 5 ಕಿ.ಮೀ. ದೂರವನ್ನು ಕ್ರಮಿಸಿದ್ದಾರೆ.

ಲಾಲ್‌ಬಾಗ್‌ನ ಮಂಗಳಾ ಸ್ಟೇಡಿಯಂನಿಂದ ಹೊರಟು 10ಕೆ ರನ್‌ ರೋಡ್‌ ಮ್ಯಾಪ್‌ನಲ್ಲಿ ತಿಳಿಸಿ ರುವಂತೆ ನಗರದಲ್ಲಿ 5 ಕಿ.ಮೀ. ಓಡಿ ಮತ್ತೆ ಮಂಗಳಾ ಸ್ಟೇಡಿಯಂ ತಲುಪಿದ್ದಾರೆ. ಬದುಕಿನಲ್ಲಿ ಎಂದಿಗೂ ಉತ್ಸಾಹ ಕಳೆದುಕೊಳ್ಳಬಾರದು ಎಂಬ ಅವರ ಇಚ್ಛೆಯೇ ಇದಕ್ಕೆ ಕಾರಣವಂತೆ.

ಒಂಟಿ ಕಾಲಲ್ಲಿ ಬೆಟ್ಟ ಹತ್ತುವುದು ಕಷ್ಟ ಎನಿಸಿದರೂ ದೈಹಿಕ ವ್ಯಾಯಾಮ ನೀಡುವ ಚಾರಣದಿಂದ ದೂರವಿರಲು ಇಷ್ಟವಿಲ್ಲ. ಪರ್ವತಾರೋಹಣಕ್ಕೆ ಹೊರಟಾಗಲೆಲ್ಲ ಸ್ನೇಹಿತರು  ಸಹಾಯಕ್ಕೆ ನಿಲ್ಲುತ್ತಾರೆ. ಊರುಗೋಲನ್ನು ಬಳಸಿ  ಸಲೀಸಾಗಿ ಬೆಟ್ಟ ಹತ್ತಿದ್ದೇನೆ. ವನ್ಯಜೀವಿ ವಿಭಾಗದ ಅಧಿಕಾರಿಗಳು ಪ್ರೋತ್ಸಾಹ ನೀಡಿದ್ದಾರೆ.
– ಸುನೀಲ್‌ ಭುವನಹಳ್ಳಿ, ಚಾರಣಿಗ

Advertisement

Udayavani is now on Telegram. Click here to join our channel and stay updated with the latest news.

Next