Advertisement

ಮೊದಲ ದಿನ ನೀರಸ ಪ್ರತಿಕ್ರಿಯೆ

01:29 PM Nov 18, 2020 | Suhan S |

ನೆಲಮಂಗಲ: ಕೋವಿಡ್ ದಿಂದ ಬಂದ್‌ಆಗಿದ್ದ ಕಾಲೇಜುಗಳು ಮಂಗಳವಾರದಿಂದ ಆರಂಭವಾಗಿದ್ದು, ಆತಂಕದಲ್ಲಿಯೇ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು.

Advertisement

ತಾಲೂಕಿನಲ್ಲಿ ಎರಡು ಸರ್ಕಾರಿ ಪ್ರಥಮದರ್ಜೆ ಕಾಲೇಜು,5 ಖಾಸಗಿ ಪ್ರಥಮ ದರ್ಜೆ ಕಾಲೇಜು ಹಾಗೂ ಎರಡು ವೃತ್ತಿಪರ ವಿಭಾಗದ ಕಾಲೇಜುಗಳಿದ್ದು, ಸಾವಿರಕ್ಕೂ ಹೆಚ್ಚು ಅಂತಿಮ ವರ್ಷದ ವಿದ್ಯಾರ್ಥಿಗಳಿದ್ದಾರೆ. ಸರ್ಕಾರಿ ಕಾಲೇಜುಗಳಲ್ಲಿ ಎರಡು ದಿನ ಮೊದಲೇ ಸ್ಯಾನಿಟೈಸಿಂಗ್‌, ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು.

ತರಗತಿಗಳು ಆರಂಭ: ಆನ್‌ಲೈನ್‌ ತರಗತಿಗೆ ಸೀಮಿತವಾಗಿದ್ದ ವಿದ್ಯಾರ್ಥಿಗಳು, ಬಹುದಿನಗಳ ನಂತರ ತರಗತಿಯಲ್ಲಿ ಕುಳಿತು ಪಾಠ ಕೇಳುವ ಮೂಲಕ ಸಂತಸ ವ್ಯಕ್ತಪಡಿಸಿದರು. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಲು ತಿಳಿಸುವ ಮೂಲಕ ಅಧ್ಯಾಪಕರು ಪಾಠ ಶುರು ಮಾಡಿದರು.

ಪರೀಕ್ಷೆ ಮಾಡಿಸಲು ಪರದಾಟ: ಎಲ್ಲಾ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆ ವರದಿ ಕಡ್ಡಾಯ ಮಾಡಿದ ಪರಿಣಾಮ, ವಿದ್ಯಾರ್ಥಿಗಳು ಆಸ್ಪತ್ರೆಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಾಲು ರಜೆಗಳು ಬಂದ ಹಿನ್ನೆಲೆ ಅನೇಕ ವಿದ್ಯಾರ್ಥಿಗಳು ಪರೀಕ್ಷೆ ಮಾಡಿಸಲು ಮುಂದಾಗಿಲ್ಲ, ಕೆಲವು ವಿದ್ಯಾರ್ಥಿಗಳ ಪರೀಕ್ಷಾ ವರದಿ ಬಂದಿಲ್ಲ, ಮತ್ತೆ ಕೆಲವರು ಕೋವಿಡ್ ಔಷಧಿ ಬರುವವರೆಗೂ ಕಾಲೇಜಿಗೆ ಬರುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದು, ಈ ಎಲ್ಲಾ ಕಾರಣಗಳಿಂದ ಮಂಗಳವಾರ ಶೇ.90 ವಿದ್ಯಾರ್ಥಿಗಳು ಗೈರಾಗಿದ್ದರು.

ಅಧ್ಯಾಪಕರ ವರದಿ ಬಂದಿಲ್ಲ: ಕಾಲೇಜುಗಳಲ್ಲಿ ಅಧ್ಯಾಪಕರಿಗೆ ಕೋವಿಡ್ ಪರೀಕ್ಷೆ ಮಾಡಿ 5 ದಿನ ವಾದರೂ ವರದಿ ಬಂದಿಲ್ಲದ ಕಾರಣ, ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದರು. ನೆಗೆಟಿವ್‌ ಬಂದಿರುವ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದು, ವರದಿ ಬರದಿದ್ದರೂ ಶಿಕ್ಷಕರು ಕಾಲೇಜಿಗೆ ಬಂದು ಪಾಠ ಮಾಡುತ್ತಿರುವ ಕಾರಣ ಆತಂಕ ಎದುರಾಗಿದೆ. ನೆಗೆಟಿವ್‌ ವರದಿ ಬಂದ ನಂತರ ಕಾಲೇಜಿಗೆ ಬರಲು ಮನವಿ ಮಾಡಿದ್ದಾರೆ.

Advertisement

ಬಸ್‌ ನಿಲ್ದಾಣದಲ್ಲಿ ಗುಂಪು: ಮೊದಲ ದಿನ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಕೊರೊನಾ ನಿಯಮ ಪಾಲನೆ ಮಾಡಿದರೆ, ಕಾಲೇಜಿನಿಂದ ಹೊರಬರುತ್ತಿದ್ದಂತೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ನಿಯಮಗಳನ್ನು ಗಾಳಿಗೆ ತೂರಿದ್ದು, ಬಸ್‌ ನಿಲ್ದಾಣದಲ್ಲಿ ಗುಂಪುಗುಂಪಾಗಿ ನಿಂತಿದ್ದ ದೃಶ್ಯಕಂಡು ಬಂತು.

ಕಾಲೇಜಿಗೆ ಬಂದ ಚಿಕ್ಕಮಕ್ಕಳು: ಕೋವಿಡ್ ಅಪಾಯದಿಂದ ಶಾಲೆಗಳು ಆರಂಭ ಮಾಡದೇ ಕಾಲೇಜಿಗೆ ಮಾತ್ರ ಆದ್ಯತೆ ನೀಡಲಾಗಿದೆ. ಆದರೆ, ಸರ್ಕಾರಿ ಕಾಲೇಜುಗಳಲ್ಲಿ ಪಾಠ ಮಾಡಲು ಬರುವಕೆಲವು ಅಧ್ಯಾಪಕರು,ಕಾಲೇಜಿಗೆ ತಮ್ಮ ಚಿಕ್ಕಮಕ್ಕಳನ್ನು ಕರೆ ತರುತ್ತಿದ್ದು, ಶಾಲೆಗೆ ಹೋಗದ ಮಕ್ಕಳು ಕಾಲೇಜಿಗೇಕೆ ಎಂಬ ಪ್ರಶ್ನೆ ಎದುರಾಗಿದೆ.

ವಿದ್ಯಾರ್ಥಿಗಳಪರದಾಟ: ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೆ ಹೋದ ಕಾಲೇಜು ವಿದ್ಯಾರ್ಥಿಗಳಿಗೆ ವೈದ್ಯರು ಕಾಲೇಜಿನಿಂದ ಅನುಮತಿ ಪತ್ರ ತರುವಂತೆ ಸೂಚನೆ ನೀಡಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕಾಲೇಜಿನಿಂದ ಯಾವುದೇ ಅನುಮತಿ ಪತ್ರ ನೀಡುವಂತಿಲ್ಲ, ಆಸ್ಪತ್ರೆಯ ಸಿಬ್ಬಂದಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುತ್ತಿದ್ದು, ಮೇಲಧಿಕಾರಿಗಳು ಗಮನ ಹರಿಸುವಂತೆ ವಿದ್ಯಾರ್ಥಿಗಳ ಪೋಷಕರು ಒತ್ತಾಯಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next