ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಆರಂಭವಾದ ಸಂಪೂರ್ಣ ಲಾಕ್‌ಡೌನ್‌ಗೆ ಮೊದಲ ದಿನವೇ ಉತ್ತಮ ಸ್ಪಂದನೆ ದೊರೆತಿದೆ. ಬಹುಪಾಲು ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದು, ಪೊಲೀಸರು ರಸ್ತೆಗಳಿದು ಖಡಕ್ ಕಾರ್ಯಾಚರಣೆ ನಡೆಸುವ ಮೂಲಕ ಎಲ್ಲರ ಗಮನ ಸೆಳೆದರು.
ಜಿಲ್ಲೆಯಲ್ಲಿ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಜಿಲ್ಲಾಡಳಿತಕ್ಕೂ ಸೋಂಕು ನಿಯಂತ್ರಣ ಮಾಡಲು ದೊಡ್ಡ ಸವಾಲಿನ ಪ್ರಶ್ನೆಯಾಗಿದೆ. ಇದಕ್ಕೆ ಸಂಪೂರ್ಣ ಲಾಕ್ ಡೌನ್ ಒಂದೇ ಪರಿಹಾರವಾಗಿರುವ ಹಿನ್ನೆಲೆಯಲ್ಲಿ ಐದು ದಿನಗಳ ಕಾಲ ಲಾಕ್‌ಡೌನ್ ಘೋಷಣೆ ಮಾಡಿದ್ದು, ಪೊಲೀಸ್ ಇಲಾಖೆಗೂ ಖಡಕ್ಕಾಗಿ ಕಾರ್ಯ ನಿರ್ವಹಣೆಗೂ ಜಿಲ್ಲಾಡಳಿತ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮೊದಲ ದಿನ ಸೋಮವಾರ ಬಿಗಿ ಬಂದೋಬಸ್ತ್ ಏರ್ಪಟ್ಟಿತು.
ನಗರದಲ್ಲಿ ರವಿವಾರ ರಾತ್ರಿಯಿಂದಲೇ ಸಂಚಾರಕ್ಕೆ ಬ್ರೇಕ್ ಹಾಕಿದ್ದ ಪೊಲೀಸ್ ಇಲಾಖೆ ಅನಗತ್ಯವಾಗಿ ಸುತ್ತಾಟ ನಡೆಸುವ ವಾಹನಗಳನ್ನು ಜಪ್ತಿ ಮಾಡುವುದಲ್ಲದೇ ಇಡೀ ದಿನ ಅವರ ವಾಹನಗಳನ್ನು ಠಾಣೆಯಲ್ಲಿ ಇರಿಸಿ ಸವಾರರಿಗೂ ಬಿಸಿ ಮುಟ್ಟಿಸಿದರು.
ಬೆಳಂಬೆಳಗ್ಗೆಯೇ ಎಸ್‌ಪಿ ಟಿ. ಶ್ರೀಧರ್, ಡಿಎಸ್‌ಪಿ ಗೀತಾ ಹಾಗೂ ಎಸಿ ನಾರಾಯಣರಡ್ಡಿ ಕನಕರಡ್ಡಿ ಅವರು ಅಗತ್ಯ ಸೇವೆಗಳ ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಸ್ಥಗಿತ ಮಾಡಿ ಸಂಚಾರಕ್ಕೆ ಬ್ರೇಕ್ ಹಾಕಿದರು. ನಗರದ ಅಶೋಕ ವೃತ್ತ, ಬಸವೇಶ್ವರ ವೃತ್ತ, ಪವಾರ್ ಹೋಟೆಲ್ ಸಮೀಪ ಹಾಗೂ ಲೇಬರ್ ಸರ್ಕಲ್ ಬಳಿ ಪೊಲೀಸರು ಬಂದೋಬಸ್ತ್ ಏರ್ಪಡಿಸುವ ಮೂಲಕ ಅಗತ್ಯ ಆರೋಗ್ಯ ಸೇವೆ ಹಾಗೂ ಕೃಷಿ ಸಂಬಂಧಿ ತ ಕಾರ್ಯ ಹೊರತುಪಡಿಸಿ ಉಳಿದೆಲ್ಲ ಕಾರ್ಯಕ್ಕೂ ಬ್ರೇಕ್ ಹಾಕಲಾಯಿತು. ಈ ಮಧ್ಯೆಯೂ ಕೆಲವರು ಸುಮ್ಮನೆ ಬೈಕ್‌ಗಳಲ್ಲಿ ಸುತ್ತಾಡುತ್ತಿರುವುದನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು ವಿವಿಧ ರಸ್ತೆಯಲ್ಲಿ ವಾಹನ ಸವಾರರ ಬಳಿ ಇದ್ದ ದಾಖಲೆ ಪರಿಶೀಲಿಸಿ, ಅಗತ್ಯವಿದ್ದರೆ ಅವರನ್ನು ಬಿಟ್ಟು ಕಳುಹಿಸಲಾಯಿತು. ಆದರೆ ದಾಖಲೆ ಇಲ್ಲದವರ ವಾಹನಗಳನ್ನು ಜಪ್ತಿ ಮಾಡಿ ಠಾಣೆಗೆ ಒಯ್ಯಲಾಯಿತು.
ಇನ್ನು ಕೆಲವರಿಗೆ ಸ್ಥಳದಲ್ಲೇ ಬಸ್ಕಿ ಹೊಡೆಸುವ ಮೂಲಕ ಅನಗತ್ಯವಾಗಿ ಸುತ್ತಾಡದಂತೆ ಎಚ್ಚರಿಕೆ ನೀಡಿ ಕಳುಹಿಸಲಾಯಿತು. ಪೊಲೀಸರೊಂದಿಗೆ ವಾದ ಮಾಡುವವರಿಗೆ ದಂಡ ಪ್ರಯೋಗದ ಜೊತೆಗೆ ಇಡೀ ದಿನ ಅವರ ವಾಹನಗಳನ್ನು ಠಾಣೆಯಲ್ಲಿಯೇ ಇರಿಸಿ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವ ಕುರಿತು ಎಚ್ಚರಿಕೆ ನೀಡಲಾಯಿತು. ಒಟ್ಟಿನಲ್ಲಿ ಜಿಲ್ಲಾದ್ಯಂತ ಮೊದಲ ದಿನದ ಸಂಪೂರ್ಣ ಲಾಕ್ ಡೌನ್‌ಗೆ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಪೊಲೀಸರು ಸೋಮವಾರ ಖಡಕ್ಕಾಗಿ ಕಾರ್ಯ ನಿರ್ವಹಿಸಿ ಎಲ್ಲರಿಗೂ ಬಿಸಿ ಮುಟ್ಟಿಸುವ ಕೆಲಸ ಮಾಡಿ ಗಮನ ಸೆಳೆದರು.