ಚಿಕ್ಕಮಗಳೂರು: ಇದುವರೆಗೆ ಯಾವುದೇ ಕೋವಿಡ್19 ಸೋಂಕು ಪ್ರಕರಣವಿಲ್ಲದೆ ನೆಮ್ಮದಿಯಲ್ಲಿದ್ದ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಎರಡು ಕೋವಿಡ್-19 ಸೋಂಕು ಪ್ರಕರಣಗಳು ದೃಢವಾಗಿದೆ. ಇದಿರಂದ ಜನತೆಯಲ್ಲಿ ಆತಂಕ ಮನೆ ಮಾಡಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಹಾಗೂ ಮೂಡಿಗೆರೆಯಲ್ಲಿ ಸೋಂಕು ಪ್ರಕರಣ ದೃಢವಾಗಿದೆ. ಮೂಡಿಗೆರೆಯ ವೈದ್ಯ ಮತ್ತು ತರೀಕೆರೆಯ ಗರ್ಭಿಣಿಗೆ ಕೋವಿಡ್-19 ಸೋಂಕು ತಾಗಿದೆ.
ವೈದ್ಯ ದಿನಕ್ಕೆ ನೂರಾರು ಜನರಿಗೆ ಚಿಕಿತ್ಸೆ ನೀಡಿದ್ದು ಮತ್ತು ಆತನ ಟ್ರಾವಲ್ ಹಿಸ್ಟರಿ ಜನರ ಆತಂಕಕ್ಕೆ ಕಾರಣವಾಗಿದೆ. ವೈದ್ಯರು ವಾಸವಿದ್ದ ಗ್ರಾಮ ಮತ್ತು ಸೇವೆ ಸಲ್ಲಿಸುತ್ತಿದ್ದ ಆಸ್ಪತ್ರೆಯ ಸುತ್ತಮುತ್ತ ಸೀಲ್ ಡೌನ್ ಮಾಡಲಾಗಿದೆ.
ಮೂಡಿಗೆರೆ ಸರ್ಕಾರಿ ವೈದ್ಯರೊಬ್ಬರಿಗೆ ಕೋವಿಡ್-19 ಸೋಂಕು ಬಂದಿದೆ ಎಂಬ ಸುದ್ದಿ ಹೊರ ಬೀಳುತ್ತಲೇ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಈ ಬಗ್ಗೆ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು ವೈದ್ಯರು ವಾಸವಿದ್ದ ಸುಶಾಂತ್ ನಗರ ಹಾಗೂ ನಂದಿಪುರ ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕಿತರು ಸಂಪರ್ಕದಲ್ಲಿದ್ದ ಜನರನ್ನು ತನಿಖೆ ಮಾಡಲಾಗುವುದು ಜಿಲ್ಲಾಡಳಿತ ತಿಳಿಸಿದೆ.